ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಎನ್‌ಪಿಪಿ ಶಾಸಕರಿಂದ ಮತ್ತೆ ಬೆಂಬಲ

Last Updated 25 ಜೂನ್ 2020, 13:31 IST
ಅಕ್ಷರ ಗಾತ್ರ

ಇಂಫಾಲ: ವಾರದ ಹಿಂದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಣಿಪುರದ ಬಿಜೆಪಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ನ್ಯಾಷನಲ್‌ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ನಾಲ್ವರು ಶಾಸಕರು ಗುರುವಾರ ರಾಜ್ಯಪಾಲ ನಜ್ಮಾ ಹೆಪ್ತುಲ್ಲಾ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಪತ್ರ ನೀಡಿದ್ದಾರೆ.

‘ಎನ್‌ಪಿಪಿ ಶಾಸಕರು ಮಂತ್ರಿ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನೂ ಹಿಂಪಡೆಯಲಿದ್ದಾರೆ. ಅವರು ಮತ್ತೆ ಸಚಿವರಾಗಿ ಮುಂದುವರಿಯಲಿದ್ದಾರೆ,’ ಎಂದು ದೆಹಲಿಯಿಂದ ಬೆಳಿಗ್ಗೆ ಇಂಫಾಲಕ್ಕೆ ಆಗಮಿಸಿದ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಸುದ್ದಿಗಾರರಿಗೆ ತಿಳಿಸಿದರು. ಅಲ್ಲದೆ, ‘ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಶಾಸಕರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ,’ ಎಂದು ಹೇಳಿದರು.

ಸರ್ಕಾರದಿಂದ ದೂರ ಸರಿದಿದ್ದ ಎನ್‌ಪಿಪಿಯ ನಾಲ್ವರು ಶಾಸಕರೊಂದಿಗೆ ಸಂಗ್ಮಾ ಮತ್ತು ಬಿಜೆಪಿಯ ಟ್ರಬಲ್‌-ಶೂಟರ್ ಎನಿಸಿಕೊಂಡಿರುವ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಮಧ್ಯಾಹ್ನ ರಾಜಭವನಕ್ಕೆ ತೆರಳಿ ಸರ್ಕಾರಕ್ಕೆ ಬೆಂಬಲ ಪತ್ರ ನೀಡಿದರು.

"ಕೊನ್ರಾಡ್ ಸಾಂಗ್ಮಾ ನೇತೃತ್ವದ ರಾಷ್ಟ್ರೀಯ ಪೀಪಲ್ಸ್ ಪಾರ್ಟಿಯ ನಿಯೋಗವು ಹಿಮಾಂತ ಬಿಸ್ವಾ ಅವರೊಂದಿಗೆ ನನ್ನನ್ನು ಭೇಟಿಯಾಗಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಮುಂದುವರಿಯುವ ಕುರಿತು ಪತ್ರವನ್ನು ನೀಡಿದರು" ಎಂದು ರಾಜ್ಯಪಾಲರಾದ ನಜ್ಮಾ ಹೆಪ್ತುಲ್ಲಾ ಟ್ವೀಟ್ ಮಾಡಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ನಂತರ ಎನ್‌ಪಿಪಿ ಶಾಸಕರು ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರನ್ನು ಭೇಟಿಯಾದರು.

‘ದೆಹಲಿಯಲ್ಲಿ ಬುಧವಾರ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ಶಾಸಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿ ಅವರ ಸಮಸ್ಯೆಗಳೆಲ್ಲವೂ ಪರಿಹಾರವಾಗಿದೆ,’ ಎಂದು ಮೇಘಾಲಯದ ಮುಖ್ಯಮಂತ್ರಿಯೂ ಆಗಿರುವ ಕೋನ್ರಾಡ್‌ ಸಂಗ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT