‘ಎನ್‌ಆರ್‌ಸಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’

7
ರಾಜನಾಥ್‌ ಸಿಂಗ್‌ ಆತಂಕ

‘ಎನ್‌ಆರ್‌ಸಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’

Published:
Updated:
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌

ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕರಣವನ್ನು ದೇಶದ ನಿಜವಾದ ನಾಗರಿಕರಲ್ಲಿಯೂ ಆತಂಕ ಸೃಷ್ಟಿಸಲು ಮತ್ತು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು ಮತ್ತೆ ಹೇಳುತ್ತಿದ್ದೇನೆ. ಎಂತಹ ಸಂದರ್ಭವಾದರೂ ಯಾರ ಮೇಲೂ ಬಲವಂತದ ಕ್ರಮ ಕೈಗೊಳ್ಳಲಾಗುವುದಿಲ್ಲ. ಆತಂಕದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ’ ಎಂದಿದ್ದಾರೆ.

ಎನ್‌ಆರ್‌ಸಿ ಪ್ರಕ್ರಿಯೆಯು ಬಾಂಗ್ಲಾದೇಶ ಹಾಗೂ ನೆರೆಹೊರೆಯ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಹೊರಹಾಕುವ ಉದ್ದೇಶ ಹೊಂದಿದೆ. ಅದರ ಅಂತಿಮ ಕರಡು ಸೋಮವಾರ ಪ್ರಕಟವಾಗಿದ್ದು, 40 ಲಕ್ಷಕ್ಕೂ ಹೆಚ್ಚು ನಾಗರಿಕರ ಹೆಸರು ನಾಪತ್ತೆಯಾಗಿದೆ.

ಈ ಸಂಬಂಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೂ ಹರಿಹಾಯ್ದಿರುವ ಸಿಂಗ್‌, ಎನ್‌ಆರ್‌ಸಿ ಪ್ರಕ್ರಿಯೆಗಳನ್ನು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆ ನಡೆಸುತ್ತಿವೆ ಎಂದಿದ್ದಾರೆ.

‘ಇದು ಕೇವಲ ಕರಡು ಅಷ್ಟೇ. ಇದೇ ಅಂತಿಮವಲ್ಲ ಎಂಬುದನ್ನು ಮತ್ತೆ ಹೇಳಲು ಬಯಸುತ್ತೇನೆ. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದೆ. ಮೇಲ್ಮನವಿ ಸಲ್ಲಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಯಾವುದೇ ವಾರಂಟ್‌ಗಳಿಲ್ಲದೆ ಆರೋಪಗಳನ್ನು ಮಾಡುತ್ತಿರುವುದು ದುರ್ದೈವ’ ಎಂದಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರವೂ ಎನ್‌ಆರ್‌ಸಿ ಪ್ರಕಿಯೆಯನ್ನು ಬೆಂಬಲಿಸಿತ್ತು ಎಂದಿರುವ ಸಿಂಗ್, ‘ಅಸ್ಸಾಂ ಒಪ್ಪಂದದ ಎನ್‌ಆರ್‌ಸಿ ಪ್ರಕ್ರಿಯೆಗಳು ಪ್ರಾರಂಭವಾದದ್ದು 1985ರಲ್ಲಿ. ಆಗ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದರು. ಇದಕ್ಕೆ ಸಂಬಂಧಿಸಿದ ಮತ್ತಷ್ಟು ನಿರ್ಧಾರಗಳನ್ನು 2005ರಲ್ಲಿ ಮನಮೋಹನ್‌ ಸಿಂಗ್‌ ಅವರು ಕೈಗೊಂಡಿದ್ದರು’ ಎಂದೂ ಮಾಹಿತಿ ನೀಡಿದ್ದಾರೆ.

ಕೆಲವು ಸಮುದಾಯಗಳನ್ನು ಗುರಿಯಾಗಿರಿಸಿ ಈ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಸರ್ಕಾರವಿರುವ ಅಸ್ಸಾಂಗೆ ಭೇಟಿ ನೀಡಿ ಎನ್‌ಆರ್‌ಸಿಗೆ ಸಂಬಂಧಿಸಿದ ಸ್ಥಿತಿಗತಿಗಳನ್ನು ಪರಿಶೀಲಿಸಲು ಉದ್ದೇಶಿಸಿದ್ದ ತೃಣಮೂಲ ಕಾಂಗ್ರೆಸ್‌ ನಾಯಕರನ್ನು ಸಿಲ್ಚರ್‌ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆಹಿಡಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !