ಭಾನುವಾರ, ನವೆಂಬರ್ 17, 2019
27 °C

ಎನ್‌ಆರ್‌ಸಿ: ಮರುಪರಿಶೀಲನೆಗೆ ಬಿಜೆಪಿ ಸಚಿವ ಆಗ್ರಹ

Published:
Updated:

ಗುವಾಹಟಿ: ‘1971ಕ್ಕಿಂತಲೂ ಮೊದಲೇ ಅಸ್ಸಾಂಗೆ ವಲಸೆ ಬಂದಿದ್ದವರನ್ನೂ ಎನ್‌ಆರ್‌ಸಿಯಿಂದ ಕೈಬಿಡಲಾಗಿದೆ. ಇದು ಸರಿಯಲ್ಲ’ ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತಾ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಸ್ಸಾಂ ಅಕಾರ್ಡ್ ಪ್ರಕಾರ 1971ಕ್ಕಿಂತಲೂ ಮೊದಲು ಇಲ್ಲಿಗೆ ಬಂದಿದ್ದವರಿಗೆ ಪೌರತ್ವ ನೀಡಬೇಕು. ಆದರೆ ಅಂತಹವರನ್ನು ಈಗ ಕೈಬಿಡಲಾಗಿದೆ. ಸಾವಿರಾರು ಬಂಗಾಳಿ ಹಿಂದೂಗಳು ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಈ ಜನರಿಗೆಲ್ಲಾ ಭಾರತ ಸರ್ಕಾರವೇ ನಿರಾಶ್ರಿತರ ಪ್ರಮಾಣಪತ್ರ ನೀಡಿತ್ತು. ಆದರೆ ಎನ್‌ಆರ್‌ಸಿ ಅಧಿಕಾರಿಗಳು ಈ ಪ್ರಮಾಣಪತ್ರಗಳನ್ನು ಮಾನ್ಯ ಮಾಡಿಲ್ಲ. ಆದರೆ ‘ಡೌಟ್‌ಫುಲ್ ನಾಗರಿಕ’ರನ್ನು ಎನ್‌ಆರ್‌ಸಿಗೆ ಸೇರಿಸಿದ್ದಾರೆ. ಇವೆಲ್ಲಾ ಸರಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಕನಿಷ್ಠ ಶೇ 20ರಷ್ಟು ಜನರ ದಾಖಲೆಗಳನ್ನು ಮರುಪರಿಶೀಲಿಸಬೇಕು. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಶೇ 10ರಷ್ಟು ಜನರ ದಾಖಲೆಗಳನ್ನು ಮರುಪರಿಶೀಲಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)