‘ಎನ್‌ಆರ್‌ಸಿಯಿಂದ ಅನ್ಯಾಯವಾಗಲ್ಲ’

7
ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಯ

‘ಎನ್‌ಆರ್‌ಸಿಯಿಂದ ಅನ್ಯಾಯವಾಗಲ್ಲ’

Published:
Updated:
Prajavani

ಸಿಲ್ಚರ್‌ /ಅಸ್ಸಾಂ: ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ನಿಜವಾದ ಭಾರತೀಯ ನಾಗರಿಕರಿಗೆ ಅನ್ಯಾಯವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

ಭಾರತೀಯ ನಾಗರಿಕರನ್ನು ಎನ್‌ಆರ್‌ಸಿಯಿಂದ ಕೈಬಿಡುವ ಪ್ರಶ್ನೆ ಇಲ್ಲ. ಎನ್‌ಆರ್‌ಸಿ ಗಣತಿ ವೇಳೆ ಜನರು ಅನುಭವಿಸಿದ ತೊಂದರೆ ಮತ್ತು ಸಮಸ್ಯೆಗಳ ಅರಿವು ಇದೆ ಎಂದು ಅವರು ಹೇಳಿದರು.

ಕಾಳಿನಗರದಲ್ಲಿ ಶುಕ್ರವಾರ ನಡೆದ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಸಂಸತ್ ಅಂಗೀಕಾರವನ್ನು ಶೀಘ್ರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಜನರ ಭಾವನೆ ಮತ್ತು ಬದುಕಿಗೆ ಸಂಬಂಧಿಸಿದೆ. ಯಾರೊಬ್ಬರ ಲಾಭಕ್ಕಾಗಿ ಅಲ್ಲ. ಈ ಹಿಂದೆ ಆದ ಅನ್ಯಾಯ ಸರಿಪಡಿಸುವ ಪ್ರಯತ್ನವಾಗಿದೆ’ ಎಂದರು.

‘ಯುಪಿಎ ವಿಳಂಬ ಧೋರಣೆಯಿಂದ ಅಭಿವೃದ್ಧಿ ಕುಂಠಿತ’ : ವಿಳಂಬ ಧೋರಣೆ ಅನುಸರಿಸುತ್ತಿದ್ದ ಹಿಂದಿನ ಯುಪಿಎ ಸರ್ಕಾರದಲ್ಲಿ ‘ಅಭಿವೃದ್ಧಿ’ ಕೇವಲ ಕಡತಗಳಿಗೆ ಸೀಮಿತವಾಗಿತ್ತು. ಇದರಿಂದ ದೇಶದ ಬೊಕ್ಕಸಕ್ಕೆ ಅಪಾರ ನಷ್ಟವಾಯಿತು ಎಂದು ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ.

‘ಯುಪಿಎ ಸರ್ಕಾರ 10 ವರ್ಷದಲ್ಲಿ ಅಡಿಗಲ್ಲು ಮತ್ತು ರಿಬ್ಬನ್ ಕತ್ತರಿಸುವ ಕೆಲಸಗಳಿಗೆ ಮಾತ್ರ ಸೀಮಿತವಾಗಿತ್ತು’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಎಂಟು ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ನಾಲ್ಕು ಯೋಜನೆ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹12 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ
ಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

‘ಹಿಂದಿನ ಸರ್ಕಾರದ ವಿಳಂಬ ಧೋರಣೆಯಿಂದಾಗಿ ₹100 ಕೋಟಿ ಮೊತ್ತದ ಕಾಮಗಾರಿಗೆ ₹200–₹250 ಕೋಟಿ ಖರ್ಚಾಗುತ್ತಿತ್ತು. ರಾಷ್ಟ್ರೀಯ ಸಂಪತ್ತಿನ ದುರ್ಬಳಕೆ ಕಂಡು ತಾಳ್ಮೆ ಕಳೆದುಕೊಂಡೆ’ ಎಂದು ಮೋದಿ ಇದೇ ವೇಳೆ ಹೇಳಿದರು.

‘ಅಧಿಕಾರ ವಹಿಸಿಕೊಂಡ ತಕ್ಷಣ ವಿಳಂಬ ಧೋರಣೆ ಪ್ರವೃತ್ತಿಗೆ ಕಡಿವಾಣ ಹಾಕಲು ಪ್ರಧಾನಿ ಕಚೇರಿಯಲ್ಲಿ ‘ಪ್ರಗತಿ’ ಎಂಬ ಹೊಸ ವ್ಯವಸ್ಥೆ ಜಾರಿಗೆ ತಂದೆ. ಕಡತದಲ್ಲಿ ಉಳಿದ ಕಾಮಗಾರಿಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ಅಡೆತಡೆಗಳನ್ನು ನಿವಾರಿಸಲಾಯಿತು. ನಿಗದಿತ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಚುರುಕು ಮುಟ್ಟಿಸಲಾಯಿತು’ ಎಂದು ಅವರು ಹೇಳಿದರು.

ಪ್ರಚಾರಕ್ಕೆ ಚಾಲನೆ

* ಮುಂಬರುವ ಲೋಕಸಭಾ ಚುನಾವಣೆಗೆ ಈಶಾನ್ಯ ರಾಜ್ಯಗಳಲ್ಲಿ ಪ್ರಚಾರಕ್ಕೆ ಅಧಿಕೃತ ಚಾಲನೆ

* ಚುನಾವಣಾ ನೀತಿ ಸಂಹಿತೆ ಜಾರಿಗೆ ನೂರು ದಿನಗಳಿಗೂ ಮುನ್ನ 20 ರಾಜ್ಯಗಳಲ್ಲಿ ಪ್ರಚಾರ ರ‍್ಯಾಲಿ ನಡೆಸಲಿರುವ ಮೋದಿ

* ಈಶಾನ್ಯ ರಾಜ್ಯಗಳ 25 ಲೋಕಸಭಾ ಕ್ಷೇತ್ರಗಳ ಪೈಕಿ 21ರಲ್ಲಿ ಗೆಲ್ಲಲು ಬಿಜೆಪಿ ಯೋಜನೆ

* ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಯತ್ನ

* 2014ರಲ್ಲಿ 14 ಕ್ಷೇತ್ರಗಳ ಪೈಕಿ ಏಳರಲ್ಲಿ ಗೆದ್ದಿರುವ ಬಿಜೆಪಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !