ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಹ್ಲೋಟ್‌, ಕಮಲನಾಥ್‌, ಬಘೆಲ್‌ ಪ್ರಮಾಣ

ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ವಿರೋಧಿ ಪಕ್ಷಗಳು ನಾಯಕರು
Last Updated 9 ಮೇ 2019, 17:06 IST
ಅಕ್ಷರ ಗಾತ್ರ

ಜೈಪುರ/ರಾಯಪುರ/ಭೋಪಾಲ್‌: ಕಾಂಗ್ರೆಸ್‌ ನಾಯಕರಾದ ಕಮಲನಾಥ್‌, ಅಶೋಕ್‌ ಗೆಹ್ಲೋಟ್‌ ಮತ್ತು ಭೂಪೇಶ್‌ ಬಘೆಲ್‌ ಅವರು ಕ್ರಮವಾಗಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ಮುಖ್ಯಮಂತ್ರಿಗಳಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಜೈಪುರದ ಐತಿಹಾಸಿಕ ಅಲ್ಬರ್ಟ್‌ ಹಾಲ್‌ನಲ್ಲಿ ಬೆಳಿಗ್ಗೆ 10.15ಕ್ಕೆ ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿ ಮತ್ತು ಸಚಿನ್‌ ಪೈಲಟ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪೈಲಟ್‌ ಅತ್ಯಂತ ಕಿರಿಯ ವಯಸ್ಸಿನ ಉಪ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜ್ಯಪಾಲ ಕಲ್ಯಾಣ ಸಿಂಗ್‌ ಪ್ರತಿಜ್ಞಾವಿಧಿ ಬೋಧಿಸಿದರು. ಸದ್ಯ ಇವರಿಬ್ಬರು ಮಾತ್ರ ಅಧಿಕಾರ ಸ್ವೀಕರಿಸಿದ್ದು, ಇನ್ನೂ ಒಂದು ವಾರದಲ್ಲಿ ಸಂಪುಟ ಅಸ್ತಿತ್ವಕ್ಕೆ ಬರಲಿದೆ.

ಭೋಪಾಲ್‌ನ ಲಾಲ್‌ ಪರೇಡ್‌ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ 72 ವರ್ಷದ ಕಮಲನಾಥ್‌ ಅವರು ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಪ್ರತಿಜ್ಞಾವಿಧಿ ಬೋಧಿಸಿದರು.

ರಾಯಪುರದ ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ಭೂಪೇಶ್‌ ಬಘೇಲ್ ಅವರು ಛತ್ತೀಸಗಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದ ಟಿ.ಎಸ್‌. ಸಿಂಹದೇವ್‌ ಮತ್ತು ತಾಮ್ರಧ್ವಜ ಸಾಹು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‌ಪಿ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಗೈರು ಹಾಜರಿ ಎದ್ದು ಕಾಣುತಿತ್ತು.

ಮೂರು ರಾಜ್ಯಗಳ ನಿರ್ಗಮಿತ ಮುಖ್ಯಮಂತ್ರಿಗಳಾದ ವಸುಂಧರಾ ರಾಜೇ, ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಮಣ್‌ ಸಿಂಗ್ ಸಮಾರಂಭದಲ್ಲಿ ಹಾಜರಿದ್ದು, ಶುಭ ಕೋರಿದರು.

ಒಂದಾದ ನಂತರ ಒಂದರಂತೆ ನಡೆದ ಮೂರು ಪದಗ್ರಹಣ ಸಮಾರಂಭಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಎರಡು ವಿಶೇಷ ವಿಮಾನಗಳನ್ನು ಬಾಡಿಗೆ ಪಡೆಯಲಾಗಿತ್ತು.

ಜನರತ್ತ ಕೈ ಬೀಸಿದ ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತು ಕಮಲನಾಥ್‌
ಜನರತ್ತ ಕೈ ಬೀಸಿದ ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತು ಕಮಲನಾಥ್‌

ಎರಡೇ ತಾಸಿನಲ್ಲಿ ಸಾಲಮನ್ನಾ ಕಡತಕ್ಕೆ ಸಹಿ
ಭೋಪಾಲ್‌ (ಪಿಟಿಐ):
ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಎರಡೇ ತಾಸುಗಳಲ್ಲಿ ಕಮಲನಾಥ್‌ ಅವರು ರೈತರ ₹2 ಲಕ್ಷವರೆಗಿನ ಸಾಲ ಮನ್ನಾ ಮಾಡುವ ಪ್ರಸ್ತಾವದ ಕಡತಕ್ಕೆ ಸಹಿ ಹಾಕಿದ್ದಾರೆ. ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದರು.

ಕಮಲನಾಥ್‌ ಅವರು ಕಡತಕ್ಕೆ ಸಹಿ ಹಾಕಿದ ಬಳಿಕ, ಸಾಲ ಮನ್ನಾ ಮಾಡುವ ಆದೇಶವನ್ನುರೈತರು ಮತ್ತು ಕೃಷಿ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಶ್‌ ರಾಜೋರಾ ಅವರು ಹೊರಡಿಸಿದ್ದಾರೆ.

‘2018ರ ಮಾರ್ಚ್‌ವರೆಗೆ ರೈತರು ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳಿಂದ ಪಡೆದ ₹2 ಲಕ್ಷದ ಒಳಗಿನ ಅಲ್ಪಾವಧಿ ಬೆಳೆಸಾಲವನ್ನು ಮನ್ನಾ ಮಾಡಲು ಮಧ್ಯ ಪ‍್ರದೇಶ ಸರ್ಕಾರ ನಿರ್ಧರಿಸಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 10 ದಿನಗಳ ಒಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಮಂದಸೌರ್‌ ಜಿಲ್ಲೆಯಲ್ಲಿ ಜೂನ್‌ 7ರಂದು ನಡೆದ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್‌ ಅವರು ಭರವಸೆ ಕೊಟ್ಟಿದ್ದರು.

‘ಕಮಲನಾಥ್‌ (ಮಧ್ಯ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ) ಮತ್ತು ಜ್ಯೋತಿರಾದಿತ್ಯ ಸಿಂಧಿಯಾ (ರಾಜ್ಯ ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷ) ಇಲ್ಲಿಯೇ ಇದ್ದಾರೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ನಾನು ಖಚಿತವಾಗಿ ಹೇಳುತ್ತಿದ್ದೇನೆ. ಇದು ಹನ್ನೊಂದನೇ ದಿನಕ್ಕೆ ವಿಸ್ತರಣೆ ಆಗದು’ ಎಂದು ರಾಹುಲ್‌ ಹೇಳಿದ್ದರು.

ಈ ಭರವಸೆಯನ್ನು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗಿತ್ತು. ಚುನಾವಣಾ ಪ್ರಚಾರದ ಉದ್ದಕ್ಕೂ ಈ ಭರವಸೆಯನ್ನು ರಾಹುಲ್‌ ಪುನರುಚ್ಚರಿಸಿದ್ದರು.

ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್‌ ಗೆಹ್ಲೋಟ್‌, ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌
ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್‌ ಗೆಹ್ಲೋಟ್‌, ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌

*

ಛತ್ತೀಸಗಡ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಶ್‌ ಬಘೆಲ್‌
ಛತ್ತೀಸಗಡ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಶ್‌ ಬಘೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT