ಭಾನುವಾರ, ನವೆಂಬರ್ 17, 2019
27 °C
ಕಳೆದ ವರ್ಷ ವೈರಲ್ ಆಗಿದ್ದ ಫೋಟೊ

ಪ್ರವಾಹದಲ್ಲಿ ನಿಂತು ಧ್ವಜವಂದನೆ ಮಾಡಿದ್ದ ಪುಟಾಣಿ ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ!

Published:
Updated:

ನವದೆಹಲಿ: ಪ್ರವಾಹದ ನೀರು ಎದೆಮಟ್ಟಕ್ಕೆ ಬಂದಿದ್ದರೂ ಧೃತಿಗೆಡದೆ ಪುಟ್ಟ ಮಕ್ಕಳಿಬ್ಬರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವ ಚಿತ್ರವೊಂದು ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ದಿನ ವೈರಲ್ ಆಗಿತ್ತು. ಆ ಚಿತ್ರವೀಗ ಮತ್ತೆ ಗಮನ ಸೆಳೆದಿದೆ. ಆ ಚಿತ್ರದಲ್ಲಿರುವ ಪೈಕಿ ಒಬ್ಬ ಪುಟಾಣಿಯ ಹೆಸರು ಎನ್‌ಆರ್‌ಸಿ (ರಾಷ್ಟ್ರೀಯ ಪೌರ ನೋಂದಣಿ) ಪಟ್ಟಿಯಲ್ಲಿಲ್ಲ!

ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ದಿನ ಅಸ್ಸಾಂ ಪ್ರವಾಹದಿಂದ ತತ್ತರಿಸಿತ್ತು. ಅಲ್ಲಿನ ಧುಬ್ರಿ ಜಿಲ್ಲೆಯ ಬರ್‌ಕಾಲಿಯಾ–ನಕ್ಸರಾ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ತಾಜೆನ್‌ ಸಿಕ್‌ದೆರ್, ಸಹಾಯಕ ಶಿಕ್ಷಕ ನೃಪೆನ್ ರಬ್ಬಾ ಹಾಗೂ ಇಬ್ಬರು ಪುಟಾಣಿಗಳು ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸುತ್ತಿದ್ದರು. ಆ ಪುಟಾಣಿಗಳ ಪೈಕಿ ಒಬ್ಬನಾದ (ಚಿತ್ರದಲ್ಲಿ ಎಡಬದಿಯಲ್ಲಿರುವಾತ) 9 ವರ್ಷ ವಯಸ್ಸಿನ ಹೈದರ್ ಖಾನ್ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಜಾಲತಾಣ ವರದಿ ಮಾಡಿದೆ. ಚಿತ್ರದಲ್ಲಿರುವ ಮತ್ತೊಬ್ಬ ಬಾಲಕ ಹೈದರ್‌ನ ಸಂಬಂಧಿ ಜೈರುಲ್ ಖಾನ್ ಎನ್ನಲಾಗಿದೆ.

ಹೈದರ್‌ನ ಕುಟುಂಬದ ಇತರ ಸದಸ್ಯರ ಹೆಸರುಗಳು ಪಟ್ಟಿಯಲ್ಲಿದ್ದರೂ ಆತನ ಹೆಸರಿಲ್ಲ. ಹೈದರ್‌ನ ತಾಯಿ ಜ್ಯೊಗೊನ್ ಖಾತುನ್‌ ಮನೆಕೆಲಸದಾಕೆಯಾಗಿ ಕೆಲಸ ಮಾಡುತ್ತಾರೆ. 12 ವರ್ಷದ ಸಹೋದರ ಮತ್ತು ಆರು ವರ್ಷ ವಯಸ್ಸಿನ ಸಹೋದರಿ ಮತ್ತು ಅಜ್ಜ ಅಲೊಮ್ ಖಾನ್ ಆತನ ಕುಟುಂಬದ ಸದಸ್ಯರು. ತಂದೆ ರುಪ್‌ನಾಲ್ ಖಾನ್ 2011ರಲ್ಲಿ ಕೊಕ್ರಝಾರ್‌ನಲ್ಲಿ ನಡೆದ ಕಲಹವೊಂದರಲ್ಲಿ ಮೃತಪಟ್ಟಿದ್ದರು.

‘ಎನ್ಆರ್‌ಸಿ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮ ಪ್ರದೇಶದ ಶಿಕ್ಷಿತ ಜನ ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ’ ಎಂದು ಹೈದರ್ ದೂರವಾಣಿ ಮೂಲಕ ಆತಂಕದಿಂದ ಹೇಳಿದ್ದನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘ಎಲ್ಲವೂ ನೀರಿನಿಂದ ಆವೃತವಾಗಿತ್ತು. ಧ್ವಜಾರೋಹಣ ಮಾಡಿದ ಪ್ರದೇಶಕ್ಕೆ ಈಜಿಕೊಂಡು ಹೋಗಲು ಇತರ ವಿದ್ಯಾರ್ಥಿಗಳು ಹೆದರಿದ್ದರು. ಜೈರುಲ್ ಮತ್ತು ನಾನು ಈಜಿಕೊಂಡು ತೆರಳಿದ್ದೆವು. ಧ್ವಜಕ್ಕೆ ವಂದನೆ ಸಲ್ಲಿಸಿದ್ದೆವು’ ಎಂದು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಹೈದರ್ ತಿಳಿಸಿದ್ದಾನೆ.

ಮಿಜಾನುರ್ ರಹಮಾನ್ ಎಂಬ ಮತ್ತೊಬ್ಬ ಶಿಕ್ಷಕ ಆ ಫೋಟೊವನ್ನು ಮೊದಲು ಅಪ್‌ಲೋಡ್ ಮಾಡಿದ್ದರು. ನಂತರ ಅದು ವೈರಲ್ ಆಗಿತ್ತು.

ಭಾರತೀಯನೆಂದು ಘೋಷಿಸಲು ಆಗ್ರಹ

ಹೈದರ್‌ನನ್ನು ಭಾರತೀಯ ಎಂದು ಘೋಷಿಸುವಂತೆ ಆತನ ತಾಯಿ ಮತ್ತು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಮ್ಮ ಸಮುದಾಯದ ಜನರು ದೇಶಭಕ್ತರಾಗಿದ್ದರೂ ಬಾಂಗ್ಲಾದೇಶೀಯರು ಎಂದು ಹೇಳಲಾಗುತ್ತಿದೆ. ಎನ್‌ಆರ್‌ಸಿಯ ಅಂತಿಮ ಪಟ್ಟಿಯಲ್ಲಿ ಹೈದರ್‌ ಹೆಸರು ಸೇರ್ಪಡೆಯಾಗುವ ಬಗ್ಗೆ ಆಶಾವಾದ ಹೊಂದಿದ್ದೇವೆ ಎಂದು ಸ್ಥಳೀಯ ಕಾಲೇಜೊಂದರ ಉಪನ್ಯಾಸಕ ಕೊಲಿಮುದ್ದೀನ್ ಮೊಂಡೊಲ್ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ವಿವರಣೆ ಕೋರಿ ಸ್ಥಳೀಯ ಎನ್‌ಆರ್‌ಸಿ ಸೇವಾ ಕೇಂದ್ರಕ್ಕೆ ಹೈದರ್‌ನ ತಾಯಿ ಅರ್ಜಿ ಸಲ್ಲಿಸಿದ್ದಾಗಿ ಕುಟುಂಬದ ಮೂಲಗಳು ತಿಳಿಸಿವೆ ಎಂದೂ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಹೇಳಲಾಗಿದೆ.

ಕಳೆದ ತಿಂಗಳು ಅಸ್ಸಾಂನ ಎನ್‌ಆರ್‌ಸಿಯ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು 40.07 ಲಕ್ಷ ಜನರ ಹೆಸರು ಪಟ್ಟಿಯಲ್ಲಿ ಸೇರಿಲ್ಲ. ನಂತರದ ಬೆಳವಣಿಗೆಯಲ್ಲಿ ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಇಲ್ಲದವರ ವಿರುದ್ಧ ಬಲವಂತವಾಗಿ ಕ್ರಮಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು.

ಇನ್ನಷ್ಟು ಸುದ್ದಿ...

40 ಲಕ್ಷ ಮಂದಿ ಭಾರತೀಯರಲ್ಲ!

ಎನ್‌ಆರ್‌ಸಿ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಅಧಿಕಾರಿಗಳಿಗೆ ಸುಪ್ರೀಂ ತರಾಟೆ

ಎನ್‌ಆರ್‌ಸಿ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಒತ್ತಾಯ

ಎನ್‌ಆರ್‌ಸಿ: ತಾರತಮ್ಯ ಆರೋಪ ತಳ್ಳಿ ಹಾಕಿದ ಕೇಂದ್ರ

ಎನ್‌ಆರ್‌ಸಿ: ‘ಭಾರತ–ಬಾಂಗ್ಲಾ ಬಾಂಧವ್ಯಕ್ಕೆ ಧಕ್ಕೆ’

ಎನ್‌ಆರ್‌ಸಿ: ಕಾಂಗ್ರೆಸ್‌ಗೆ ಧೈರ್ಯ ಇರಲಿಲ್ಲ

‘ಎನ್‌ಆರ್‌ಸಿ: ಬಲವಂತದ ಕ್ರಮ ಬೇಡ’

ಎನ್‌ಆರ್‌ಸಿ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರು!

ಪ್ರತಿಕ್ರಿಯಿಸಿ (+)