ವಿಚಾರಣೆ ನೆಪದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ: ಅಧ್ಯಯನ ವರದಿ

7
ದೇಶದ ವಿಚಾರಣಾಧೀನ ಕೈದಿಗಳಲ್ಲಿ ಮೂವರಲ್ಲೊಬ್ಬ ಹಿಂದುಳಿದ ಜಾತಿ, ವರ್ಗದ ವ್ಯಕ್ತಿ

ವಿಚಾರಣೆ ನೆಪದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ: ಅಧ್ಯಯನ ವರದಿ

Published:
Updated:

ನವದೆಹಲಿ: ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿರುವವರ ಪೈಕಿ ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗಕ್ಕೆ(ಎಸ್‌ಸಿ, ಎಸ್‌ಟಿ) ಸೇರಿದವರು ಮೂವರಲ್ಲೊಬ್ಬರು ಇದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ದೇಶದ ಒಟ್ಟು ಜನಸಂಖ್ಯೆಯ ಪೈಕಿ ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರ ಪ್ರಮಾಣ ಶೇ 24ರಷ್ಟಾದರೆ, ಜೈಲುಗಳಲ್ಲಿರುವವರ ಪ್ರಮಾಣ ಶೇ 34ರಷ್ಟಿದೆ ಎಂದು ‘ಜಾತಿಯ ನೆರಳಿನಲ್ಲಿ ಅಪರಾಧ ನ್ಯಾಯ (ಕ್ರಿಮಿನಲ್ ಜಸ್ಟೀಸ್ ಇನ್‌ ದಿ ಶೇಡೊ ಆಫ್‌ ಕ್ಯಾಸ್ಟ್)’ ಎಂಬ ಹೆಸರಿನ ವರದಿ ಉಲ್ಲೇಖಿಸಿದೆ. 

‘ನ್ಯಾಯಕ್ಕಾಗಿ ರಾಷ್ಟ್ರೀಯ ದಲಿತ ಚಳವಳಿ’ ಮತ್ತು ‘ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಕೇಂದ್ರ’ ಜಂಟಿಯಾಗಿ ವರದಿ ಸಿದ್ಧಪಡಿಸಿವೆ.

ಕೆಲವು ರಾಜ್ಯಗಳ ಒಟ್ಟು ಜನಸಂಖ್ಯೆ ಮತ್ತು ಜೈಲುಗಳಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯದವರ ಮಧ್ಯೆ ಭಾರಿ ಅಂತರವಿದೆ. ಇದರ ಪ್ರಮಾಣವು ಅಸ್ಸಾಂ, ತಮಿಳುನಾಡು, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಹೆಚ್ಚಿದೆ ಎಂದು ವರದಿ ಉಲ್ಲೇಖಿಸಿದೆ. ತಮಿಳುನಾಡಿನಲ್ಲಿ ಅಂತರದ ಪ್ರಮಾಣ ಶೇ 17ರಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಎಸ್‌ಸಿ, ಎಸ್‌ಟಿ ಸಮುದಾಯದವರು ಶೇ 21ರಷ್ಟಿದ್ದರೆ, ಜೈಲಿನಲ್ಲಿರುವವರ ಪೈಕಿ ಶೇ 38ರಷ್ಟಿದ್ದಾರೆ.

‘ದಲಿತ ಮತ್ತು ಆದಿವಾಸಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸಿಕೊಟ್ಟಿವೆ. ವಿಚಾರಣಾಧೀನ ಕೈದಿಗಳಾಗಿರುವವರು ಪೊಲೀಸರಿಂದ ಮತ್ತು ತನಿಖೆಯ ಹೆಸರಿನಲ್ಲಿ ಹೇಗೆ ಮತ್ತಷ್ಟು ಸತ್ರಸ್ತರಾಗುತ್ತಿದ್ದಾರೆ ಎಂಬುದನ್ನು ನಿರೂಪಿಸಿದ್ದು, ಈ ಕುರಿತು ತನಿಖೆಯಾಗಬೇಕಿದೆ’ ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.

ಸಂತ್ರಸ್ತರನ್ನೇ ಬಂಧಿಸುತ್ತಿದ್ದಾರೆ ಪೊಲೀಸರು!

ದಲಿತರು ಅಥವಾ ಆದಿವಾಸಿಗಳು ದೌರ್ಜನ್ಯದ (ಎಸ್‌ಸಿ ಮತ್ತು ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅನ್ವಯ) ದೂರು ದಾಖಲಿಸಿದರೆ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸುವ ವಿದ್ಯಮಾನಗಳು ಹೆಚ್ಚುತ್ತಿವೆ. ಎಸ್‌ಸಿ ಸಂತ್ರಸ್ತರು ನೀಡಿರುವ ದೂರನ್ನು ಎದುರಿಸುವ ಉದ್ದೇಶದಿಂದಲೇ ಪ್ರತಿದೂರು ನೀಡಲಾಗುತ್ತದೆ. ಹೀಗೆ ಪ್ರತಿ ದೂರು ದಾಖಲಾದಾಗ ಎಸ್‌ಸಿ ಸಮುದಾಯದವರನ್ನೇ ಬಂಧಿಸಲಾಗುತ್ತಿದೆ ಎಂಬುದಾಗಿ ವರದಿ ಉಲ್ಲೇಖಿಸಿದೆ ಎಂದು ದಿ ವೈರ್ ವರದಿ ಮಾಡಿದೆ.

ದೇಶದ ಜೈಲುಗಳಲ್ಲಿರುವವರ ಪೈಕಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರು ಶೇ 55ರಷ್ಟು ಇದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ (ಎನ್‌ಸಿಆರ್‌ಬಿ) 2015ರ ವರದಿ ತಿಳಿಸಿತ್ತು. 2011ರ ಜನಗಣತಿ ಪ್ರಕಾರ ದೇಶದಲ್ಲಿರುವ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರ ಪ್ರಮಾಣ ಶೇ 39.

ಮರಣದಂಡನೆಗೆ ಗುರಿಯಾಗುವವರಲ್ಲೂ ಹೆಚ್ಚು

ಮರಣದಂಡನೆಗೆ ಗುರಿಯಾಗುವವರ ಪೈಕಿಯೂ ಹಿಂದುಳಿದ ವರ್ಗಗಳ ಜನರೇ ಹೆಚ್ಚಿದ್ದಾರೆ. ಮರಣದಂಡನೆಗೆ ಸಂಬಂಧಿಸಿದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 2016ರ ವರದಿಯ ಪ್ರಕಾರ, ಒಟ್ಟು 279 ಮಂದಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಈ ಪೈಕಿ 127 ಮಂದಿ ಅಥವಾ ಶೇ 34ರಷ್ಟು ಹಿಂದುಳಿದ ವರ್ಗಗಳವರು. ಮರಣದಂಡನೆಗೆ ಗುರಿಯಾದ ಸಾಮಾನ್ಯ ವರ್ಗದವರ ಪ್ರಮಾಣ ಶೇ 24ರಷ್ಟಾಗಿದೆ. ಮರಣದಂಡನೆಗೆ ಗುರಿಯಾದ ಶೇ 20ರಷ್ಟು ಜನ ಧಾರ್ಮಿಕ ಅಲ್ಪಸಂಖ್ಯಾತರು. ಗುಜರಾತ್‌ನಲ್ಲಿ ಇದರ ಪ್ರಮಾಣ ಶೇ 79ರಷ್ಟಾಗಿದೆ. ಅಂದರೆ, ರಾಜ್ಯದಲ್ಲಿ ಮರಣದಂಡನೆಗೆ ಗುರಿಯಾದ 19 ಜನರ ಪೈಕಿ 15 ಮಂದಿ ಮುಸ್ಲಿಮರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 7

  Sad
 • 0

  Frustrated
 • 5

  Angry

Comments:

0 comments

Write the first review for this !