ಮನೆಯವರ ಬಗ್ಗೆಯೇ ಕಾಳಜಿ ವಹಿಸದವರು ದೇಶ ನಿರ್ವಹಿಸಲಾರರು: ಗಡ್ಕರಿ

7

ಮನೆಯವರ ಬಗ್ಗೆಯೇ ಕಾಳಜಿ ವಹಿಸದವರು ದೇಶ ನಿರ್ವಹಿಸಲಾರರು: ಗಡ್ಕರಿ

Published:
Updated:

ನವದೆಹಲಿ: ಪಕ್ಷದ ಕಾರ್ಯಕರ್ತರು ಮೊದಲು ಮನೆಯ ಜವಾಬ್ದಾರಿಗಳನ್ನು ಪೂರೈಸಬೇಕು. ಅದನ್ನು ಮಾಡಲಾಗದವರು ದೇಶವನ್ನು ನಿರ್ವಹಿಸಲಾರರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾಗ್ಪುರದಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ಮಾಜಿ ಕಾರ್ಯಕರ್ತರ ಜತೆ ಅವರು ಸಂವಾದ ನಡೆಸಿದ್ದಾರೆ.

‘ದೇಶಕ್ಕಾಗಿ ನಾವು ನಮ್ಮ ಜೀವನವನ್ನು ಬಿಜೆಪಿಗೆ ವಿನಿಯೋಗಿಸಲು ಸಿದ್ಧರಿದ್ದೇವೆ ಎಂದು ಹೇಳುವ ಅನೇಕರನ್ನು ನಾನು ಭೇಟಿಯಾಗಿದ್ದೇನೆ. ಆ ಪೈಕಿ ಒಬ್ಬರಲ್ಲಿ, ನೀವೇನು ಕೆಲಸ ಮಾಡುತ್ತಿದ್ದೀರಿ ಮತ್ತು ನಿಮ್ಮ ಕುಟುಂಬದಲ್ಲಿ ಯಾರೆಲ್ಲ ಇದ್ದಾರೆ ಎಂದು ಕೇಳಿದೆ. ಅದಕ್ಕವರು, ವಹಿವಾಟು ಸರಿಯಾಗಿ ನಡೆಯದ್ದರಿಂದ ನನ್ನ ಅಂಗಡಿಯನ್ನು ಮುಚ್ಚಿದ್ದೇನೆ... ಪತ್ನಿ ಹಾಗೂ ಮಕ್ಕಳು ಮನೆಯಲ್ಲಿದ್ದಾರೆ ಎಂಬುದಾಗಿ ಉತ್ತರಿಸಿದರು’ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕೇಂದ್ರ ನಾಯಕತ್ವ: ಶಾ ವಿರುದ್ಧ ಗಡ್ಕರಿ ಗುಡುಗು

‘ಮೊದಲು ನಿಮ್ಮ ಮನೆಯ ಬಗ್ಗೆ ಕಾಳಜಿ ವಹಿಸಿ ಎಂದು ನಾನವರಿಗೆ ಹೇಳಿದೆ. ಯಾಕೆಂದರೆ, ಯಾರು ಅವರ ಮನೆಯನ್ನೇ ನಿರ್ವಹಿಸಲಾರರೋ ಅಂತಹವರು ದೇಶವನ್ನೂ ನಿರ್ವಹಿಸಲಾರರು. ಹೀಗಾಗಿ ಮೊದಲು ನಿಮ್ಮ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಿ. ನಿಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಿ. ನಂತರ ಪಕ್ಷ ಮತ್ತು ದೇಶಕ್ಕಾಗಿ ಕೆಲಸ ಮಾಡಿ’ ಎಂದೂ ಅವರು ಸಲಹೆ ನೀಡಿದ್ದಾರೆ.

‘ರಾಜಕಾರಣಿಗಳು ಜನರಿಗೆ ಕನಸುಗಳನ್ನು ಕಾಣಿಸುತ್ತಾರೆ. ಆ ಕನಸುಗಳನ್ನು ನನಸು ಮಾಡದೇ ಹೋದಾಗ ಜನರು ಅಂತಹ ನಾಯಕರಿಗೆ ಹೊಡೆಯಲಿದ್ದಾರೆ’ ಎಂದು ಕೆಲ ದಿನಗಳ ಹಿಂದೆ ಗಡ್ಕರಿ ಹೇಳಿದ್ದರು.

ಇತ್ತೀಚೆಗೆ ರಾಜಸ್ಥಾನ, ಛತ್ತೀಸಗಡ, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗಾದ ಸೋಲಿನ ಬಗ್ಗೆ ಪ‍್ರತಿಕ್ರಿಯಿಸಿದ್ದ ಗಡ್ಕರಿ, ಪಕ್ಷದ ನಾಯಕತ್ವವು ಸೋಲು ಮತ್ತು ವೈಫಲ್ಯಗಳ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 45

  Happy
 • 7

  Amused
 • 1

  Sad
 • 2

  Frustrated
 • 4

  Angry

Comments:

0 comments

Write the first review for this !