ಉತ್ತಮ ಆಡಳಿತವಿರುವ ರಾಜ್ಯಗಳು: ಬಿಜೆಪಿಯೇತರ ಸರ್ಕಾರಗಳದ್ದೇ ಮೇಲುಗೈ

7
18 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ

ಉತ್ತಮ ಆಡಳಿತವಿರುವ ರಾಜ್ಯಗಳು: ಬಿಜೆಪಿಯೇತರ ಸರ್ಕಾರಗಳದ್ದೇ ಮೇಲುಗೈ

Published:
Updated:

ಮುಂಬೈ: ಭಾರತವನ್ನು ಕಾಂಗ್ರೆಸ್‌ ಮುಕ್ತಗೊಳಿಸುವತ್ತ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ದೇಶದ 29 ರಾಜ್ಯಗಳ ಪೈಕಿ 18ರಲ್ಲಿ ಅಧಿಕಾರಕ್ಕೇರಿರುವ ಬಿಜೆಪಿ ಪಾಲಿಗೆ ಆ ನಿಟ್ಟಿನಲ್ಲಿ ಅಲ್ಪಮಟ್ಟಿನ ಯಶಸ್ಸೂ ದಕ್ಕಿದೆ. ಈ ಪಕ್ಷದ ನೇತೃತ್ವದ ಸರ್ಕಾರಗಳ ವ್ಯಾಪ್ತಿಯಲ್ಲಿ ದೇಶದ ಶೇ. 63 ರಷ್ಟು ಜನರಿದ್ದಾರೆ. ಹೀಗಿದ್ದರೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ಉತ್ತಮವಾಗಿಲ್ಲ ಎಂಬುದನ್ನು ವರದಿಯೊಂದು ಉಲ್ಲೇಖಸಿದೆ.

ಬೆಂಗಳೂರು ಮೂಲದ ಸಾರ್ವಜನಿಕ ವ್ಯವಹಾರ ಕೇಂದ್ರ(ಪಿಎಸಿ) ವರದಿಯೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ, ದೇಶದಲ್ಲಿ ಉತ್ತಮ ಆಡಳಿತವಿರುವ ಮೊದಲ ಐದು ರಾಜ್ಯಗಳ ಸಾಲಿನಲ್ಲಿ ಬಿಜೆಪಿ ಸರ್ಕಾರವಿರುವ ಕೇವಲ ಒಂದು ರಾಜ್ಯ(ಹಿಮಾಚಲ ಪ್ರದೇಶ) ಮಾತ್ರ ಸ್ಥಾನ ಪಡೆದಿದೆ.

ಮೂಲಭೂತ ಸೌಲಭ್ಯಗಳು, ಮಾನವ ಅಭಿವೃದ್ಧಿ, ಸಾಮಾಜಿಕ ರಕ್ಷಣೆ, ಮಹಿಳೆ ಮತ್ತು ಮಕ್ಕಳು, ಕಾನೂನು ಸುವ್ಯವಸ್ಥೆ, ನ್ಯಾಯ, ಪರಿಸರ, ಪಾರದರ್ಶಕತೆ ಮತ್ತು ದಕ್ಷತೆ, ಹಣಕಾಸು ನಿರ್ವಹಣೆ, ಆರ್ಥಿಕ ಸ್ವಾತಂತ್ರ್ಯದಂತಹ ಪ್ರಮುಖ 10 ಅಂಶಗಳು, 30 ಆದ್ಯತಾ ವಿಷಯಗಳು ಹಾಗೂ 100 ದಾಖಲೆ ಸೂಚಕಗಳನ್ನು ಆಧಾರವಾಗಿಟ್ಟುಕೊಂಡು ‘ಸಾರ್ವಜನಿಕ ವ್ಯವಹಾರ ಸೂಚ್ಯಂಕ’ವನ್ನು(ಪಿಎಐ) ಪ್ರಕಟಿಸಲಾಗಿದೆ.

2016, 2017ರಲ್ಲಿಯೂ ಪಿಎಸಿ ವರದಿಗಳು ಪ್ರಕಟವಾಗಿದ್ದವು.

ವರದಿ ಪ್ರಕಾರ ಕೇರಳ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳು ಸ್ಥಾನಪಡೆದಿವೆ. ಕೇರಳದಲ್ಲಿ ಸಿಪಿಎಂ ಆಡಳಿತವಿದ್ದರೆ, ತಮಿಳುನಾಡಿನಲ್ಲಿ ಎಐಡಿಎಂಕೆ ಅಧಿಕಾರದಲ್ಲಿದೆ. ಉಳಿದಂತೆ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌), ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮಿಶ್ರ ಸರ್ಕಾರವಿದೆ.

ಬಿಜೆಪಿ ಅಧಿಕಾರವಿರುವ 4 ರಾಜ್ಯಗಳು, ಕಾಂಗ್ರೆಸ್‌ ನೇತೃತ್ವದ ಎರಡು ರಾಜ್ಯಗಳು ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಚುನಾವಣೆ ಸಂದರ್ಭದಲ್ಲಿ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’(ಎಲ್ಲರ ಜತೆ, ಎಲ್ಲರ ಅಭಿವೃದ್ಧಿ) ಮಂತ್ರ ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೇರಿದ ನಂತರ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ನೆಲೆಯಲ್ಲಿ ಈ ವರದಿ ಮಹತ್ವ ಪಡೆದುಕೊಂಡಿದೆ.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಹಿಂದಿನ ಸರ್ಕಾರದ ಯೋಜನೆಗಳ ವೈಫಲ್ಯ, ದರ ಏರಿಕೆ, ಕಪ್ಪುಹಣ, ಭ್ರಷ್ಟಾಚಾರ ಅಂಶಗಳನ್ನು ಗುರಿಯಾಗಿರಿಸಿ ಹಾಗೂ ಉತ್ತಮ ಆಡಳಿತ, ಅಭಿವೃದ್ಧಿ ವಿಚಾರಗಳನ್ನು ಗಮನದಲ್ಲಿರಿಸಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು.

ದೆಹಲಿಯನ್ನೂ ಒಳಗೊಂಡಂತೆ 30 ರಾಜ್ಯಗಳ ರ‍್ಯಾಂಕಿಂಗ್‌ ಅನ್ನು ಪಿಎಐನಲ್ಲಿ ಪ್ರಕಟಿಸಲಾಗಿದ್ದು, ಎಲ್ಲ ಅಂಕಿ–ಅಂಶಗಳ ಸರಾಸರಿ ಆಧಾರದಲ್ಲಿ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಕಳೆದ ಮೂರು ವರ್ಷಗಳಿಂದ ಮೊದಲೆರಡು ಸ್ಥಾನದಲ್ಲಿವೆ ಎನ್ನಲಾಗಿದೆ.

‘ದಕ್ಷಿಣದ ಈ ಎರಡು ರಾಜ್ಯಗಳು ಉತ್ತಮ ಸಾಧನೆ ತೋರಿವೆ’ ಎಂದು ಅಜೀಂ ಪ್ರೇಮ್‌ಜಿ ವಿವಿಯ ಆಡಳಿತ ವಿಭಾಗದ ಸಿಬ್ಬಂದಿ ನಾರಾಯಣ ಹೇಳಿದ್ದಾರೆ. ‘ಬಿಜೆಪಿ ಆಡಳಿತದಲ್ಲಿದೆ ಅಥವಾ ಅಧಿಕಾರದಿಂದ ಹೊರಗಿದೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಆಯಾ ರಾಜ್ಯಗಳಲ್ಲಿನ ರಾಜಕೀಯದ ಪ್ರವೃತ್ತಿ ಮುಖ್ಯವಾಗುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜ್ಞಾವಂತ ಜನರು ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಜನರು ಉತ್ತಮ ಆಡಳಿತಕ್ಕಾಗಿ ಅಗತ್ಯ ಒತ್ತಡ ತರಬಲ್ಲರು ಎಂದೂ ಹೇಳಿದ್ದಾರೆ.

ಸಣ್ಣ ರಾಜ್ಯಗಳಲ್ಲಿ ಹಿಮಾಚಲ ಬೆಸ್ಟ್‌

2 ಕೋಟಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ  12 ಸಣ್ಣ ರಾಜ್ಯಗಳಲ್ಲಿ 8 ಕಡೆ ಬಿಜೆಪಿ ನೇತೃತ್ವದ ಹಾಗೂ ಬೆಂಬಲಿತ ಸರ್ಕಾರಗಳು ಅಸ್ತಿತ್ವದಲ್ಲಿವೆ. ಇದರಲ್ಲಿ ಬಿಜೆಪಿ ನೇತೃತ್ವದ ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದೆ.

2 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ 18 ದೊಡ್ಡ ರಾಜ್ಯಗಳಲ್ಲಿ ಕೊನೆಯ ನಾಲ್ಕು ಸ್ಥಾನದಲ್ಲಿ ಬಿಜೆಪಿ ನೇತೃತ್ವದ ಹಾಗೂ ಬೆಂಬಲಿತ ಸರ್ಕಾರಗಳು ಅಸ್ತಿತ್ವದಲ್ಲಿರುವ ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಕೊನೆಯ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 28

  Happy
 • 4

  Amused
 • 2

  Sad
 • 4

  Frustrated
 • 3

  Angry

Comments:

0 comments

Write the first review for this !