ಪ್ರತಿಸ್ಪರ್ಧಿಗಳ ಜತೆಗೆ ಕಾಂಗ್ರೆಸ್‌ ಮೈತ್ರಿ ಇಲ್ಲ

7
ಸೈದ್ಧಾಂತಿಕ ವಿರೋಧ ಇರುವ ಪಕ್ಷಗಳ ಜತೆಗೆ ಹೊಂದಾಣಿಕೆ ಇಲ್ಲ

ಪ್ರತಿಸ್ಪರ್ಧಿಗಳ ಜತೆಗೆ ಕಾಂಗ್ರೆಸ್‌ ಮೈತ್ರಿ ಇಲ್ಲ

Published:
Updated:

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ನೀತಿಯನ್ನು ಕಾಂಗ್ರೆಸ್‌ ಪಕ್ಷವು ರೂಪಿಸಿದೆ. ವ್ಯತಿರಿಕ್ತ ಸಿದ್ಧಾಂತವನ್ನು ಹೊಂದಿರುವ ಅಥವಾ ನೇರ ಪ್ರತಿಸ್ಪರ್ಧಿಯಾಗಿರುವ ಪಕ್ಷಗಳ ಜತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಚುನಾವಣೆಗೆ ಮೊದಲು ಚರ್ಚೆ ಮಾಡದಿರಲು ವಿರೋಧ ಪಕ್ಷಗಳ ಗುಂಪು ನಿರ್ಧರಿಸಿದೆ. ಈ ಬಗ್ಗೆ ಫಲಿತಾಂಶದ ನಂತರವೇ ನಿರ್ಧಾರ ಆಗಲಿದೆ ಎಂದು ಮೂಲಗಳು ಹೇಳಿವೆ. 

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆಗೆ ಕಾಂಗ್ರೆಸ್‌ ಒಪ್ಪಂದಕ್ಕೆ ಬಂದಿದೆ. ಅಲ್ಲಿ ಮೂರೂ ಪಕ್ಷಗಳು ಜತೆಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿವೆ ಎಂದು ಮೂಲಗಳು ಹೇಳಿವೆ.

ಒಟ್ಟು 168 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸುತ್ತಿದೆ. 

ಆದರೆ, ಬಿಜೆಪಿಯ ಜತೆಗೆ ಈಗ ಮುನಿಸಿಕೊಂಡಿರುವ ಪ್ರಮುಖ ಮಿತ್ರ ಪಕ್ಷ ಶಿವಸೇನಾ ಜತೆಗೆ ಯಾವುದೇ ಮೈತ್ರಿ ಇಲ್ಲ ಎಂಬುದುನ್ನು ಕಾಂಗ್ರೆಸ್‌ನ ಮೈತ್ರಿ ನೀತಿಯು ಸ್ಪಷ್ಟಪಡಿಸಿದೆ. 

ಹಾಗೆಯೇ ತೆಲಂಗಾಣದ ಟಿಆರ್‌ಎಸ್‌, ದೆಹಲಿಯ ಎಎಪಿ ಜತೆಗೂ ಮೈತ್ರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎರಡೂ ರಾಜ್ಯಗಳಲ್ಲಿ ಈ ಪಕ್ಷಗಳು ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಗಳಾಗಿವೆ. 

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಪಂಜಾಬ್‌, ಹರಿಯಾಣ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ತನ್ನ ಸಾಧನೆ ಗಣನೀಯವಾಗಿ ಉತ್ತಮಗೊಳ್ಳಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿತ್ತು. 

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಪ್ರತಿನಿಧಿಸುತ್ತಿರುವ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಬಾರಿ ಅವರು ಅಮೇಠಿಯಿಂದ ಸ್ಪರ್ಧಿಸವುದಿಲ್ಲ’ ಎಂಬ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ. ರಾಹುಲ್‌ ಅಮೇಠಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಸೋನಿಯಾ ಗಾಂಧಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಬಯಸಿದರೆ ರಾಯಬರೇಲಿ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !