ದೇಶಾದ್ಯಂತ ಪಕ್ಷಾಂತರದ ಏಟಿಗೆ ಕಾಂಗ್ರೆಸ್‌ ಅಪ್ಪಚ್ಚಿ

ಭಾನುವಾರ, ಜೂಲೈ 21, 2019
27 °C
ಮೂರನೇ ಎರಡಷ್ಟು ಜನಪ್ರತಿನಿಧಿಗಳ ನಿಷ್ಠೆ ಬದಲು: ಬಿಜೆಪಿ ವಿರೋಧಿ ಪಕ್ಷಗಳು ಕಂಗಾಲು

ದೇಶಾದ್ಯಂತ ಪಕ್ಷಾಂತರದ ಏಟಿಗೆ ಕಾಂಗ್ರೆಸ್‌ ಅಪ್ಪಚ್ಚಿ

Published:
Updated:
Prajavani

ನವದೆಹಲಿ: ಕರ್ನಾಟಕದ ಆಡಳಿತಾರೂಢ ಮೈತ್ರಿಕೂಟದ 16 ಶಾಸಕರು ರಾಜೀನಾಮೆ ಕೊಟ್ಟ ವಿಚಾರದಲ್ಲಿ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅದೇ ಹೊತ್ತಿನಲ್ಲಿ ಗೋವಾ ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಮಂದಿ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಆ ಪಕ್ಷಕ್ಕೆ ಸೇರ್ಪಡೆಯಾದರು. 

ನಾಯಕತ್ವದ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷಕ್ಕೆ ಈ ಎರಡೆರಡು ಹೊಡೆತ ತಾಳಿಕೊಳ್ಳುವುದು ಕಷ್ಟ. ರಾಜ್ಯಸಭೆಯಲ್ಲಿ ಮಾತನಾಡಿದ ಆ ಪಕ್ಷದ ಉಪನಾಯಕ ಆನಂದ್‌ ಶರ್ಮಾ ಅವರು ಸಿಟ್ಟಾಗಿದ್ದರು. ‘ಕರ್ನಾಟಕದ ಸರ್ಕಾರವನ್ನು ಅವರು ಉರುಳಿಸಲು ಬಯಸಿದ್ದಾರೆ. ಆದರೆ, ಗೋವಾದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಹಾಗಿದ್ದರೂ ಈ ಪಕ್ಷಾಂತರದ ಅಗತ್ಯ ಏನಿತ್ತು’ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಿಜೆಪಿ ದಮನಿಸುತ್ತಿದೆ ಎಂದು ಆನಂದ್‌ ಶರ್ಮಾ ಆರೋಪಿಸಿದರು. ಆದರೆ, ಅದೇ ಹೊತ್ತಿಗೆ, ಕಾಂಗ್ರೆಸ್‌ ಶಾಸಕರು ನಗುನಗುತ್ತಲೇ ಕೈಯಲ್ಲಿ ಹೂಗುಚ್ಛ ಹಿಡಿದು ಬಿಜೆಪಿ ಸೇರುತ್ತಿರುವ ಚಿತ್ರಗಳನ್ನು ಪ್ರಕಟಿಸಲಾಗಿದೆ.

18 ಶಾಸಕರ ರಾಜೀನಾಮೆಯ ಕಾರಣದಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಕರ್ನಾಟಕದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ನ ಅಂಗಳ ತಲುಪಿದೆ. 

ಪಕ್ಷಾಂತರದ ಬಿರುಸಿಗೆ ತತ್ತರಿಸಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ ಮಾತ್ರವಲ್ಲ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಹೆಚ್ಚಿನ ವಿರೋಧ ಪಕ್ಷಗಳಿಗೆ ಈ ಬಿಸಿ ತಟ್ಟಿದೆ. ‘ಗೋವಾ ಮಾದರಿ’ಯ ಪರಿಣಾಮ ದೇಶದ ಉದ್ದಗಲಕ್ಕೂ ವ್ಯಾಪಿಸಿದೆ.

ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿಯಿಂದ ದೂರ ಸರಿದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಬಿಜೆಪಿ ವಿರುದ್ಧ ಬೆಂಬಲ ಕ್ರೋಡೀಕರಿಸುವ ಕೆಲಸ ಮಾಡಿದ್ದರು. ರಾಜ್ಯಸಭೆಯಲ್ಲಿ ಟಿಡಿಪಿಯ ಆರು ಸದಸ್ಯರಿದ್ದರು. ಅವರಲ್ಲಿ ನಾಲ್ವರನ್ನು ಜೂನ್‌ 20ರಂದು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿಯೇ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆ ಕೊಟ್ಟಿದ್ದರು. ಅವರ ಪಕ್ಷದ 40 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಅದಾಗಿ ಒಂದು ತಿಂಗಳ ಬಳಿಕ, ಒಂದು ಕಾಲದಲ್ಲಿ ಮಮತಾ ಅವರ ಆಪ್ತರಾಗಿದ್ದ ಮುಕುಲ್‌ ರಾಯ್‌ ಅವರ ಮಗ ಸುಭ್ರಾಂಶು ಮತ್ತು ಇಬ್ಬರು ಶಾಸಕರು ಮೇ ಕೊನೆಯ ವಾರ ಬಿಜೆಪಿ ಸೇರಿದರು. ಅವರ ಜತೆಗೆ 50 ಕಾರ್ಪೊರೇಟರ್‌ಗಳೂ ಇದ್ದರು. ಬಳಿಕ, ಮುಖಂಡರು ಟಿಎಂಸಿಯಿಂದ ಬಿಜೆಪಿಗೆ ಸೇರುವ ಪ್ರಕ್ರಿಯೆ ಮುಂದುವರಿದಿದೆ. 

ವಿರೋಧ ಪಕ್ಷಗಳ ಶಾಸಕರ ಮೂರನೇ ಎರಡರಷ್ಟು ಮಂದಿಯನ್ನು ಪಕ್ಷಾಂತರ ಮಾಡಿಸುವುದು ಈಗಿನ ಹೊಸ ಪ್ರವೃತ್ತಿ. ಇದರಿಂದ ಈ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಬಹುದು. ಇದು, ಈಗಾಗಲೇ ನೆಲಕಚ್ಚಿರುವ ವಿರೋಧ ಪಕ್ಷಗಳು ತಲೆಯೇ ಎತ್ತದಂತೆ ಮಾಡಬಲ್ಲವು. 

ಚಂದ್ರಬಾಬು ನಾಯ್ಡು ಅವರ ಪಕ್ಷದ ರಾಜ್ಯಸಭೆ ಸದಸ್ಯರ ಪಕ್ಷಾಂತರದಲ್ಲಿಯೂ ಇದೇ ಮಾದರಿ ಅನುಸರಿಸಲಾಗಿದೆ. ಆ ಪಕ್ಷದ ರಾಜ್ಯಸಭೆಯ ಮೂರನೇ ಎರಡಷ್ಟು ಸದಸ್ಯರು ಪಕ್ಷಾಂತರ ಮಾಡಿದ್ದರಿಂದ ಅವರ ವಿರುದ್ಧ ನಾಯ್ಡು ಯಾವುದೇ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿಲ್ಲ. ಗೋವಾದಲ್ಲಿಯೂ ಹಾಗೆಯೇ ಆಗಿದೆ. ಕಾಂಗ್ರೆಸ್‌ ಪಕ್ಷವು ಆಕ್ರೋಶದಿಂದ ಕುದಿಯುತ್ತಿದೆ. ಆದರೆ, ಶಾಸಕರನ್ನು ತಡೆಯಲು ಆ ಪಕ್ಷದ ಬಳಿಯಲ್ಲಿ ಯಾವ ಅಸ್ತ್ರವೂ ಇಲ್ಲ. 

2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಹೀಗೆಯೇ ಆಗಿತ್ತು. ಅದು ಇನ್ನೂ ದೊಡ್ಡ ಪ್ರಮಾಣದಲ್ಲಿತ್ತು. ಕಾಂಗ್ರೆಸ್‌ನ 44 ಶಾಸಕರ ಪೈಕಿ 43 ಮಂದಿ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದಲ್ಲಿ ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲವನ್ನು (ಪಿಪಿಎ) ಸೇರಿದ್ದರು. ಪಿಪಿಪಿ, ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿತ್ತು.

ಕಾಂಗ್ರೆಸ್‌ಗೆ ಎಲ್ಲೆಡೆಯಿಂದ ಏಟು
ಕಾಂಗ್ರೆಸ್‌ಗೆ ಬೆದರಿಕೆ ಇರುವುದು ಬಿಜೆಪಿಯಿಂದ ಮಾತ್ರ ಅಲ್ಲ; ಪ್ರಾದೇಶಿಕ ಪಕ್ಷಗಳೂ ಈ ರಾಷ್ಟ್ರೀಯ ಪಕ್ಷವನ್ನು ಕಾಡುತ್ತಿವೆ. ತೆಲಂಗಾಣ ಕಾಂಗ್ರೆಸ್‌ನ 18 ಶಾಸಕರ ಪೈಕಿ 12 ಶಾಸಕರು ಆಡಳಿತಾರೂಢ ಟಿಆರ್‌ಎಸ್‌ ಸೇರಿದ್ದಾರೆ. 18ರಲ್ಲಿ 12 ಮಂದಿ ಪಕ್ಷ ಬಿಟ್ಟರೆ ಅದು ಮೂರನೇ ಎರಡಷ್ಟಾಗುತ್ತದೆ. ಹಾಗಾಗಿ, ಕಾಂಗ್ರೆಸ್‌ ಪಕ್ಷವು ಈ ಏಟನ್ನು ಮರುಮಾತಿಲ್ಲದೆ ಸಹಿಸಿಕೊಂಡಿತು. 

ಗೋವಾ ಸಂಪುಟ ಪುನರ್‌ರಚನೆ?
ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆ. ಹೊಸ ಬೆಳವಣಿಗೆಯ ಕಾರಣಕ್ಕೆ ರಾಜ್ಯದ ಸಚಿವ ಸಂಪುಟ ಪುನರ್‌ರಚನೆ ಕುರಿತು ಮಾತುಕತೆ ಆಗಿದೆ. ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಕಲ್ಪಿಸುವುದಕ್ಕಾಗಿ ಬಿಜೆಪಿಯ ಮಿತ್ರ ಪಕ್ಷಗಳ ಕೆಲವರನ್ನು ಕೈಬಿಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಿರುವ ಕಾರಣಕ್ಕೆ ಬೇರೆ ಸಣ್ಣ ಪಕ್ಷಗಳ ಬೆಂಬಲ ಈಗ ಬೇಕಾಗಿಲ್ಲ.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 2

  Sad
 • 1

  Frustrated
 • 13

  Angry

Comments:

0 comments

Write the first review for this !