ಮತಯಂತ್ರ: ಮತ್ತೆ ವಿಪಕ್ಷ ತಕರಾರು

ಶುಕ್ರವಾರ, ಏಪ್ರಿಲ್ 19, 2019
22 °C

ಮತಯಂತ್ರ: ಮತ್ತೆ ವಿಪಕ್ಷ ತಕರಾರು

Published:
Updated:
Prajavani

ನವದೆಹಲಿ: ಮತಯಂತ್ರದ ವಿಶ್ವಾಸಾರ್ಹತೆ ಬಗ್ಗೆ ವಿರೋಧ ಪಕ್ಷಗಳು ಮತ್ತೆ ತಕರಾರು ಎತ್ತಿವೆ. ‘ಪ್ರತೀ ಲೋಕಸಭಾ ಕ್ಷೇತ್ರದ ಮತದಾನ ದೃಢೀಕರಣ ಯಂತ್ರಗಳಲ್ಲಿ (ವಿವಿಪ್ಯಾಟ್) ಶೇ 50ರಷ್ಟು ರಶೀದಿಗಳನ್ನು ಪರಿಶೀಲಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮತ್ತೆ ಹೋಗುತ್ತೇವೆ’ ಎಂದು 21 ವಿರೋಧ ಪಕ್ಷಗಳು ಹೇಳಿವೆ.

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸರಿಯಾಗಿ ಕೆಲಸ ಮಾಡದ ಸಂಬಂಧ ನವದೆಹಲಿಯಲ್ಲಿ ಭಾನುವಾರ ಸಭೆ ನಡೆಸಿದ 21 ವಿರೋಧ ಪಕ್ಷಗಳು ಈ ನಿರ್ಧಾರ ತೆಗೆದುಕೊಂಡಿವೆ.

ಇದೇ ಬೇಡಿಕೆ ಇಟ್ಟುಕೊಂಡು ವಿಪಕ್ಷಗಳು ಈ ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಹೋಗಿದ್ದವು. ಆದರೆ ಪ್ರತೀ ಕ್ಷೇತ್ರ
ದಲ್ಲಿ ಐದು ವಿವಿಪ್ಯಾಟ್‌ಗಳ ರಶೀದಿಗಳನ್ನು ತಾಳೆ ನೋಡಿದೆ ಸಾಕು ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ಹೇಳಿತ್ತು. ಮೊದಲ ಹಂತದ ಮತದಾನದಲ್ಲಿ ಮತಯಂತ್ರಗಳು ಕೆಟ್ಟು ಹೋದ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ ಆಯೋಗವು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

‘ಅಭಿವೃದ್ಧಿ ಹೊಂದಿದ ದೇಶಗಳೇ ಇವಿಎಂಗಳನ್ನು ಕೈಬಿಟ್ಟಿವೆ. ಅದಕ್ಕೆ ಕಾರಣಗಳನ್ನೂ ಅವು ಸ್ಪಷ್ಟಪಡಿಸಿವೆ. ಆಂಧ್ರಪ್ರದೇಶದಲ್ಲಿ ನಡೆದ ಮತದಾನದ ವೇಳೆ 4,583 ಇವಿಎಂಗಳು ತಾಂತ್ರಿಕ ಸಮಸ್ಯೆ ಎದುರಿಸಿದವು ಎಂದು ಅಧಿಕೃತ ಮೂಲಗಳು ಹೇಳುತ್ತಿವೆ. ಆದರೆ ಅಂಥದ್ದೇನು ಆಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇವಿಎಂಗಳ ಬಗ್ಗೆ ನಮಗೆ ವಿಶ್ವಾಸ ಮೂಡುತ್ತಿಲ್ಲ. ವಿವಿಪ್ಯಾಟ್‌ ರಶೀದಿಗಳ ಪರಿಶೀಲನೆಯಿಂದ ಮಾತ್ರ ಆ ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯ’ ಎಂದು ನಾಯ್ಡು ಹೇಳಿದ್ದಾರೆ.

ಕಾಂಗ್ರೆಸ್‌ನ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ವಿಪಕ್ಷಗಳ ಇತರ ನಾಯಕರು ಚಂದ್ರಬಾಬು ನಾಯ್ಡು ಅವರ ಪ್ರತಿಪಾದನೆಗೆ ದನಿಗೂಡಿಸಿದ್ದಾರೆ.

* ಇಂತಹ ಆಯೋಗವನ್ನು ನೋಡಿಯೇ ಇಲ್ಲ. ಅದು ‍ಪ್ರಜಾಪ್ರಭುತ್ವದ ಅಣಕ ಮಾಡುತ್ತಿದೆಯೇ? ಆಯೋಗವು ಬಿಜೆಪಿಯ ಶಾಖಾ ಕಚೇರಿಯಾಗಿದೆ

–ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸಿ.ಎಂ.

* ಸೂಕ್ತ ಪರಿಶೀಲನೆ ಇಲ್ಲದೆಯೇ ಲಕ್ಷಾಂತರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆ ವಿವರವನ್ನು ಆಯೋಗಕ್ಕೆ ನೀಡಿದ್ದೇವೆ 

– ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !