ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳ ರೋಷಾವೇಷ: ಕಾವೇರಲಿದೆ ಅಧಿವೇಶನ

Last Updated 31 ಜನವರಿ 2020, 8:05 IST
ಅಕ್ಷರ ಗಾತ್ರ

ಸಂಸತ್ತಿನಲ್ಲಿಶುಕ್ರವಾರ ಆರಂಭವಾದ ಬಜೆಟ್ ಅಧಿವೇಶನದಲ್ಲಿರಾಷ್ಟ್ರಪತಿ ಭಾಷಣದ ಮೂಲಕನಿರೀಕ್ಷೆಯಂತೆಯೇ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವಿಚಾರಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ರಾಷ್ಟ್ರಪತಿಗಳ ಭಾಷಣದಲ್ಲಿ ಪಾಕಿಸ್ತಾನದ ಹೆಸರು ಪ್ರಸ್ತಾಪವಾಗಿದ್ದು ಸಹ ಅಧಿವೇಶನವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಹೇಗೆ ನಿರ್ವಹಿಸಲಿದೆ ಎನ್ನುವಕಾರ್ಯತಂತ್ರದಭಾಗವಾಗಿಯೇ ನೋಡಬೇಕಿದೆ. ಇಂದು ರಾಷ್ಟ್ರಪತಿಗಳ ಮೂಲಕ ಹೇಳಿಸಿದ ಮಾತನ್ನೇ ಈ ಹಿಂದೆ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ತಾರು ಸಲ ಹೇಳಿದ್ದರು.

ಸರ್ಕಾರ ಬಲವಾಗಿಸಮರ್ಥಿಸಿಕೊಳ್ಳುತ್ತಿರುವ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರಗಳು ಗುರುವಾರ (ಜ.30) ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೋಲಾಹಲಕ್ಕೂ ಕಾರಣವಾಗಿತ್ತು. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ತೊಡೆತಟ್ಟಲು ನಾವೂ ಸಿದ್ಧರಾಗಿದ್ದೇವೆ ಎನ್ನುವ ಸಂದೇಶವನ್ನು ಈ ಮೂಲಕ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಬಿಜೆಪಿಗೆ ರವಾನಿಸಿದ್ದರು.

ಹರಿಹಾಯ್ದ ಮಿತ್ರಪಕ್ಷಗಳು

ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ‘ಹಿಂದೂಸ್ತಾನ್ ಟೈಮ್ಸ್’, ಎನ್‌ಡಿಎ ಮಿತ್ರಪಕ್ಷಗಳೇ ಆಗಿರುವ ಶಿರೋಮಣಿ ಅಕಾಲಿ ದಳ ಮತ್ತು ಬಿಜು ಜನತಾ ದಳ (ಬಿಜೆಡಿ) ಸಹ ಬಿಜೆಪಿ ವಿರುದ್ಧ ಹರಿಹಾಯ್ದವು ಎಂದು ಹೇಳಿದೆ.

ಜನರನ್ನು ವಿಭಜಿಸುವ ಯಾವುದೇ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಬಾರದು ಎಂದು ಅಕಾಲಿ ದಳದ ನಾಯಕ ಬಲ್ವಿಂದರ್ ಸಿಂಗ್ ಬುಂದೆರ್ ಆಗ್ರಹಿಸಿದರು. ಸರಕು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ರಾಜ್ಯಕ್ಕೆ ಸಿಗಬೇಕಾದ ಪಾಲನ್ನು ಕೇಂದ್ರ ಸರ್ಕಾರ ನಾಲ್ಕು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ. ಹಲವು ರಾಜ್ಯಗಳ ಪ್ರತಿನಿಧಿಗಳು ಭಿಕ್ಷಾಪಾತ್ರೆ ಹೊತ್ತು ದೆಹಲಿಗೆ ಬರುವಂಥ ಸನ್ನಿವೇಶ ನಿರ್ಮಾಣವಾಗಿದೆ ಎಂದು ಬಿಜೆಡಿ ಸಂಸದೀಯ ನಾಯಕ ಪಿನಾಕಿ ಮಿಶ್ರಾ ಬೇಸರ ಹೊರಹಾಕಿದರು ಎಂದು ವರದಿ ಹೇಳಿದೆ.

ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಪ್ರಧಾನಿ

ಚರ್ಚೆ ಆರಂಭವಾದ ಕೆಲ ಸಮಯದ ನಂತರ ಸಭೆಗೆಬಂದ ಪ್ರಧಾನಿ ನರೇಂದ್ರ ಮೋದಿ, ‘ವಿಶ್ವದ ಆರ್ಥಿಕ ವ್ಯವಸ್ಥೆಯ ಸ್ಥಿತಿಗತಿ ಮತ್ತು ಅದನ್ನು ಭಾರತಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬಹುದು’ ಎಂಬ ಬಗ್ಗೆ ಸದನದ ಚರ್ಚೆಯನ್ನು ಕೇಂದ್ರೀಕರಿಸಿ.ಪ್ರತಿಪಕ್ಷಗಳು ಮತ್ತು ಮಿತ್ರಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ಯಾವುದೇ ವಿಚಾರದ ಬಗ್ಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಬಜೆಟ್ ಅಧಿವೇಶನದಲ್ಲಿ ಸರ್ಕಾರವು 45 ಮಸೂದೆಗಳನ್ನು ಎರಡು ಸುಗ್ರೀವಾಜ್ಞೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ’ ಎಂದು ಮಾಹಿತಿ ನೀಡಿದರು.

ಹರಿಹಾಯ್ದ ಪ್ರತಿಪಕ್ಷಗಳು

ಪೌರತ್ವ ಕಾಯ್ದೆ ಜಾರಿ, ನಿರುದ್ಯೋಗ, ಆರ್ಥಿಕ ಹಿಂಜರಿತದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದವು. ಎಐಎಡಿಎಂಕೆ ಹೊರತುಪಡಿಸಿ ಇತರೆಲ್ಲಾ ವಿರೋಧ ಪಕ್ಷಗಳ ನಾಯಕರು ಬಂಧನದಲ್ಲಿರುವ ಕಾಶ್ಮೀರ ನಾಯಕರ ಬಿಡುಗಡೆಗೆ ಒತ್ತಾಯಿಸಿದರು.

ಸಭೆಯ ವಿದ್ಯಮಾನಗಳ ಬಗ್ಗೆ ಟ್ವೀಟ್ ಮಾಡಿರುವ ಆರ್‌ಜೆಡಿ ಸಂಸದ ಮನೋಜ್ ಝಾ, ‘ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳು, ನಿರುದ್ಯೋಗ ಹಾಗೂ ಜಮ್ಮು ಕಾಶ್ಮೀರದಲ್ಲಿ ಬಂಧನದಲ್ಲಿರುವ ನಾಯಕರ ಬಿಡುಗಡೆ ಬಗ್ಗೆ ಚರ್ಚೆಯಾಯಿತು’ ಎಂದು ಹೇಳಿದ್ದಾರೆ.

ಕಣ್ಣೊರೆಸುವ ತಂತ್ರ: ಕಾಂಗ್ರೆಸ್

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಮಾತನಾಡಿ, ‘ಸರ್ಕಾರವು ಕಾನೂನುಗಳ ಮೂಲಕ ದೇಶವನ್ನು ವಿಭಜಿಸುತ್ತಿದೆ. ಕೇವಲ ಆಜ್ಞೆಗಳನ್ನು ಹೊರಡಿಸುವ ಪ್ರವೃತ್ತಿಯಿರುವೆಡೆಚರ್ಚೆಗೆ ಅವಕಾಶವೇ ಇರುವುದಿಲ್ಲ. ಈಗ ಕರೆದಿರುವ ಸರ್ವಪಕ್ಷಗಳ ಸಭೆ ಕೇವಲ ಶಿಷ್ಟಾಚಾರ ಮತ್ತು ಕಣ್ಣೊರೆಸುವ ತಂತ್ರ. ಸರ್ಕಾರವು ವಿರೋಧಪಕ್ಷಗಳ ಮುಕ್ತ ಕಾರ್ಯ ನಿರ್ವಹಣೆಗೆ ಅವಕಾಶ ಕೊಡುತ್ತಿಲ್ಲ’ ಎಂದು ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಅಧಿವೇಶನದಲ್ಲಿ ಕಾವೇರಿದ ಚರ್ಚೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗಳು ಕಾಯ್ದೆಯ ವಿರುದ್ಧ ಈಗಾಗಲೇ ಗೊತ್ತುವಳಿ ಅಂಗೀಕರಿಸಿವೆ. ಕೇರಳ ಸರ್ಕಾರ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಇದರ ಜೊತೆಗೆ ಭಾರತದ ಆರ್ಥಿಕತೆಯು ಮಾರ್ಚ್‌ 2013ರ ನಂತರ ದಾಖಲೆ ಪ್ರಮಾಣದ ಕುಸಿತ ಕಂಡಿದೆ. ಸೆಪ್ಟೆಂಬರ್ 2019ರ ಹೊತ್ತಿಗೆ ಆರ್ಥಿಕ ಪ್ರಗತಿ ದರವು ಶೇ 4.5 ಮಾತ್ರ ಇತ್ತು. ದೇಶದ ಆರ್ಥಿಕ ಹಿಂಜರಿತದ ಸ್ಥಿತಿ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬಜೆಟ್‌ ಬಗ್ಗೆ ಜನರಲ್ಲಿ ವ್ಯಾಪಕ ಕುತೂಹಲ ವ್ಯಕ್ತವಾಗಿದೆ. ಜನರು ಬಜೆಟ್ ಘೋಷಣೆಗಳ ಬಗ್ಗೆ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ

ಬಜೆಟ್ ಮಾಹಿತಿಗೆ:www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT