ಸೋಮವಾರ, ಏಪ್ರಿಲ್ 6, 2020
19 °C
ಪ್ರತಿಪಕ್ಷಗಳ ಸದಸ್ಯರ ಟೀಕೆ

ದೆಹಲಿ ಹಿಂಸಾಚಾರ ನಿಯಂತ್ರಿಸಲು ವಿಫಲ: ಶಾ ರಾಜೀನಾಮೆಗೆ ಪಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷಗಳು, ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು ಎಂದು ಲೋಕಸಭೆಯಲ್ಲಿ ಬುಧವಾರ ಪಟ್ಟು ಹಿಡಿದವು.

ಸದನದಲ್ಲಿ ಹಿಂಸಾಚಾರದ ಬಗ್ಗೆ ಬಿರುಸಿನ ಚರ್ಚೆಗಳು ನಡೆದವು. ಹಿಂಸಾಚಾರ ಸಂಭವಿಸುವ ಮುನ್ನ ದ್ವೇಷದ ಭಾಷಣಗಳನ್ನು ಮಾಡಿರುವ ಬಗ್ಗೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಸದಸ್ಯರು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದರು.

ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ‘ದೆಹಲಿ ಹೊತ್ತಿ ಉರಿಯುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸ್ವಾಗತ ಸಮಾರಂಭ ಆಯೋಜಿಸಿದ್ದರು. ಹಿಂಸಾಚಾರದಲ್ಲಿ ಕೆಲವರು ಹಿಂದೂಗಳು ಜಯಗಳಿಸಿದರು ಎಂದು ಹೇಳಿದರು. ಕೆಲವರು ಮುಸ್ಲಿಮರು ಗೆದ್ದರು ಎಂದು ಹೇಳಿದರು. ಆದರೆ, ವಾಸ್ತವವಾಗಿ ಮಾನವೀಯತೆಗೆ ಸೋಲಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸರ ಕ್ರಮವನ್ನು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌. ಮುರುಳಿಧರ್ ಅವರು ಪ್ರಶ್ನಿಸಿದ್ದರು. ಆದರೆ, ನ್ಯಾಯಮೂರ್ತಿಗಳನ್ನೇ ವರ್ಗಾವಣೆ ಮಾಡಲಾಯಿತು. ಆದ್ದರಿಂದ, ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು. ಟಿಎಂಸಿ ಮತ್ತು ಸಿಪಿಐ ಸದಸ್ಯರು ಸಹ ಚೌಧರಿ ಅವರಿಗೆ ದನಿಗೂಡಿಸಿದರು.

ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಬಿಜೆಪಿ ಸದಸ್ಯರು, ಪರಿಸ್ಥಿತಿಯನ್ನು ಗೃಹ ಸಚಿವರು ಮತ್ತು ಅಧಿಕಾರಿಗಳು ಸರಿಯಾಗಿ ನಿಭಾಯಿಸಿದ್ದಾರೆ ಎಂದರು.

ಹಿಂಸಾಚಾರದ ಹಿಂದೆ ಸಂಚು ಅಡಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ನಡೆಸಿದ ಪ್ರತಿಭಟನೆಯಿಂದ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ದೂರಿದರು.  ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಯಿತು. ಈ ಬಗ್ಗೆ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಸದಸ್ಯರು ದೂರಿದರು.

ಬಿಜೆಪಿಯ ನಿಷಿಕಾಂತ್‌ ದುಬೆ ಮಾತನಾಡಿ, ‘ನ್ಯಾಯಮೂರ್ತಿ ಅವರ ವರ್ಗಾವಣೆಯು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸಿನ ಅನ್ವಯ ನಡೆದಿದ್ದು, ಸರ್ಕಾರ ಹಸ್ತಕ್ಷೇಪ ಮಾಡಿಲ್ಲ’ ಎಂದರು.

 ಬಿಜೆಪಿಯ ಮೀನಾಕ್ಷಿ ಲೇಖಿ ಮಾತನಾಡಿ, ‘ಹಿಂಸಾಚಾರದಿಂದ ಕೆಲವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

 ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 337 ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 291 ಹಿಂಸಾಚಾರ ಪ್ರಕರಣಗಳು ನಡೆದಿದ್ದವು ಎಂದು ವಿವರಿಸಿದರು.

‘ಪೂರ್ವಯೋಜಿತ’
‘ಯಾವುದೇ ಧರ್ಮ, ಜಾತಿ ಮತ್ತು ಪಕ್ಷದವರಿದ್ದರೂ ಹಿಂಸಾಚಾರದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಭರವಸೆ ನೀಡಿದರು.

 ಚರ್ಚೆಗೆ ಉತ್ತರಿಸಿದ ಅವರು, ‘ಮೇಲ್ನೋಟಕ್ಕೆ ಹಿಂಸಾಚಾರ ಪೂರ್ವಯೋಜಿತ ಎಂದು ಕಂಡು ಬಂದಿದೆ. ಕೇವಲ 36 ಗಂಟೆಗಳಲ್ಲಿ ದೆಹಲಿ ಪೊಲೀಸರು ಹಿಂಸಾಚಾರವನ್ನು ನಿಯಂತ್ರಿಸಿದ್ದಾರೆ. 2,647 ಮಂದಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು