ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಹೋರಾಟ ಕಾಶ್ಮೀರಿಗಳ ವಿರುದ್ಧವಲ್ಲ, ಭಯೋತ್ಪಾದನೆ ವಿರುದ್ಧ: ಪ್ರಧಾನಿ ಮೋದಿ

Last Updated 23 ಫೆಬ್ರುವರಿ 2019, 11:11 IST
ಅಕ್ಷರ ಗಾತ್ರ

ನವದೆಹಲಿ:ಭಾರತದ ಯುದ್ಧ ಏನಿದ್ದರೂ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಕಾಶ್ಮೀರ ಮತ್ತು ಕಾಶ್ಮೀರಿಗಳ ವಿರುದ್ಧ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದ ಟೊಂಕ್‌ನಲ್ಲಿ ಶನಿವಾರ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಹಲವೆಡೆ ಕಾಶ್ಮೀರಿ ಯುವಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಕಟುವಾಗಿ ಖಂಡಿಸಿದರು.

ಕಾಶ್ಮೀರದ ಯುವಕರು ಕೂಡ ಭಯೋತ್ಪಾದನೆಯ ಬಲಿಪಶುಗಳು. ಕಾಶ್ಮೀರದ ಪ್ರತಿಯೊಂದು ಮಗು ಕೂಡ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದ ಪರವಾಗಿದೆ. ಕಾಶ್ಮೀರಿ ಯುವಕರ ರಕ್ಷಣೆ ಎಲ್ಲರ ಹೊಣೆ ಎಂದು ಮನವಿ ಮಾಡಿದರು.

‘ಮಾಡಿದ ತಪ್ಪಿಗೆ ಪಾಕಿಸ್ತಾನ ಖಂಡಿತ ತಕ್ಕ ಶಿಕ್ಷೆ ಅನುಭವಿಸುತ್ತದೆ. ಈ ಬಾರಿ ಖಂಡಿತ ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ. ಉಗ್ರರನ್ನು ತಯಾರಿಸುವ ಕಾರ್ಖಾನೆಗಳಿಗೆ ಬೀಗ ಜಡಿಯುತ್ತೇವೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

‘ಪುಲ್ವಾಮಾ ಘಟನೆಯ ನಂತರ ಭಾರತ ತೆಗೆದುಕೊಂಡ ಕಠಿಣ ಕ್ರಮಗಳಿಂದ ಈಗಾಗಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಪರಮಾಪ್ತ ರಾಷ್ಟ್ರ ಸ್ಥಾನಮಾನ ರದ್ದು, ಪಾಕಿಸ್ತಾನದ ಸರಕುಗಳ ಮೇಲೆ ಶೇ 200ರಷ್ಟು ಸುಂಕ ಹೆಚ್ಚಳ ಮತ್ತು ಜಾಗತಿಕವಾಗಿ ಆ ದೇಶವನ್ನು ಏಕಾಂಗಿ ಮಾಡುವಲ್ಲಿ ನಾವು ಸಫಲರಾಗಿದ್ದೇವೆ’ ಎಂದು ಪ್ರಧಾನಿ ಹೇಳಿದರು.

‘ಇಮ್ರಾನ್‌ ಖಾನ್‌ ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಭಿನಂದಿಸಲು ದೂರವಾಣಿ ಕರೆ ಮಾಡಿದ್ದೆ. ಬಡತನ ಮತ್ತು ಅನಕ್ಷರತೆ ವಿರುದ್ಧ ಎರಡೂ ರಾಷ್ಟ್ರಗಳು ಹೋರಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದೆ. ಆಗ ಇಮ್ರಾನ್‌ ಖಾನ್‌ ‘ನಾನು ಪಠಾಣನ ಮಗ. ಕೊಟ್ಟ ಮಾತಿನಂತೆ ನಡೆಯುತ್ತೇನೆ’ ಎಂದು ವಾಗ್ದಾನ ನೀಡಿದ್ದರು’ ಎಂದು ಮೋದಿ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT