ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನಿರ್ಲಕ್ಷ್ಯ: ಇಸ್ಲಾಂಗೆ ಮತಾಂತರಗೊಳ್ಳಲು 100 ಮಂದಿ ದಲಿತರ ನಿರ್ಧಾರ!

Last Updated 27 ಡಿಸೆಂಬರ್ 2019, 12:26 IST
ಅಕ್ಷರ ಗಾತ್ರ

ಚೆನ್ನೈ: ಸರ್ಕಾರದ ನಿರ್ಲಕ್ಷ್ಯ, ಜಾತಿ ತಾರತಮ್ಯ, ಆಸ್ಪೃಶ್ಯತೆಯಿಂದ ಬೇಸತ್ತಿರುವ ತಮಿಳುನಾಡಿನ ದಲಿತರ ಗುಂಪೊಂದು ಇಸ್ಲಾಂಗೆ ಮತಾಂತರಗೊಳ್ಳಲು ನಿರ್ಧರಿಸಿದೆ.

ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನ ನಡೂರು ಗ್ರಾಮದ 100 ಮಂದಿ ದಲಿತರು ಇದೇ ಜನವರಿ 5ರಂದು ಇಸ್ಲಾಂಗೆ ಮತಾಂತರಗೊಳ್ಳುವ ನಿಲುವು ತಳೆದಿದ್ದಾರೆ.

ನಡೂರು ಗ್ರಾಮದಲ್ಲಿ ಡಿ.2ರಂದು ಬೃಹತ್‌ ಗೋಡೆಯೊಂದು ದಲಿತರ ಮನೆಗಳ ಮೇಲೆ ಕುಸಿದು ಬಿದ್ದು 17 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ತಮ್ಮ ಜಮೀನಿಗೆ ದಲಿತರ ಮನೆಗಳು ಹೊಂದಿಕೊಂಡಿವೆ ಎಂಬ ಕಾರಣಕ್ಕೆ, ಅವರಿಂದ ಅಂತರ ಕಾಯ್ದುಕೊಳ್ಳಲು ಜವಳಿ ಉದ್ಯಮಿ ಶಿವಸುಬ್ರಹಣ್ಯನ್‌ ಎಂಬುವವರು ಜಮೀನಿಗೆ ಬೃಹತ್‌ ಗೋಡೆ ನಿರ್ಮಿಸಿದ್ದರು. ಅಸ್ಪೃಶ್ಯತೆ ಆಚರಣೆಯ ಸಂಕೇತದಂತಿದ್ದ ಗೋಡೆ ಕುಸಿದು ದುರಂತ ಸಂಭವಿಸಿತ್ತು.

ಘಟನೆ ಹಿನ್ನೆಲೆಯಲ್ಲಿ ಶಿವಸುಬ್ರಹ್ಮಣ್ಯನ್‌ ವಿರುದ್ಧ ಸೆಕ್ಷನ್‌ 304 ( ಅಜಾಗರೂಕತೆಯಿಂದ ಇನ್ನೊಬ್ಬರ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಾಮೀನಿನ ಮೇಲೆ ಈಗಾಗಲೇ ಬಿಡುಗಡೆಯಾಗಿದ್ದಾನೆ. ಇದನ್ನು ವಿರೋಧಿಸಿರುವ ‘ತಮಿಳ್‌ ಪುಲಿಗಳ್‌ ಕಚ್ಚಿ‘ (ತಮಿಳು ಹುಲಿಗಳ ಪಕ್ಷ) ಶಿವಸುಬ್ರಹ್ಮಣ್ಯನ್‌ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ. ಪಕ್ಷದ ಅಧ್ಯಕ್ಷರೂ ಸೇರಿ ಹಲವರು ಹೋರಾಟ ನಡೆಸಿ ಬಂಧನಕ್ಕೊಳಗಾಗಿದ್ದಾರೆ. ಆದರೆ, ಆರೋಪಿ ವಿರುದ್ಧ ಕಾಯ್ದೆ ಪ್ರಯೋಗಿಸದ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಸಂಘಟನೆ ಮತ್ತು ಮೃತರ ಕುಟುಂಬದ ಸದಸ್ಯರು, ‘ಸರ್ಕಾರವೇ ನಮ್ಮನ್ನು ನಿರ್ಲಕ್ಷಿಸಿದ ಮೇಲೆ ನಾವ್ಯಾಕೆ ಹಿಂದೂ ಧರ್ಮದಲ್ಲಿ ಮುಂದುವರಿಯಬೇಕು, ನಾವ್ಯಾಕೆ ದಲಿತರಾಗಿ ಉಳಿಯಬೇಕು,’ ಎಂಬ ನಿಲುವು ತಳೆದಿದ್ದಾರೆ. ಪರಿಣಾಮವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.

ಗ್ರಾಮದ ಹಲವರು ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಕುರಿತು ಮಾತನಾಡಿರುವ ಗ್ರಾಮದ ಮುಖ್ಯಸ್ಥರೊಬ್ಬರು, ಮುಸ್ಲಿಮರಾಗಿ ಮತಾಂತರಗೊಳ್ಳುತ್ತಿರುವ ಅವರಿಗೆ ಸಹಜವಾಗಿಯೇ ಸಾಮಾಜಿಕವಾಗಿ ಗೌರವ ಹೆಚ್ಚಾಗುತ್ತದೆ. 40 ವರ್ಷಗಳ ಹಿಂದೆ ತಿರುನಲ್ವೇಲಿ ಜಿಲ್ಲೆಯ ಮೀನಾಕ್ಷಿಪುರದಲ್ಲಿ ನೂರಾರು ದಲಿತ ಕುಟುಂಬಗಳ ಸಾವಿರಾರು ಮಂದಿ ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಗೌರವದಿಂದ ಬದುಕುತ್ತಿದ್ದಾರೆ. ಅವರು ಮೇಲ್ವರ್ಗದವರೆಂದು ಗುರುತಿಸಿಕೊಂಡಿದ್ದಾರೆ,’ ಎಂದು ಹೇಳಿದ್ದಾರೆ.

‘ತಮಿಳ್‌ ಪುಲಿಗಳ್‌ ಪಕ್ಷದ ಸದಸ್ಯರು ಮತ್ತು ಡಿ.2ರ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರೂ ಸೇರಿ ಮೊದಲ ಹಂತದಲ್ಲಿ 100 ಮಂದಿ ಜ. 5 ರಂದು ಮತಾಂತರಗೊಳ್ಳಲು ನಿರ್ಧರಿಸಿದ್ದೇವೆ. ನಂತರ ಸಂಘಟನೆ 25000 ಸದಸ್ಯರ ಪೈಕಿ 3000 ಮಂದಿ ಮತಾಂತರಗೊಳ್ಳಲಿದ್ದಾರೆ. ಈ ವಿಚಾರ ಬಹಿರಂಗಗೊಳ್ಳುತ್ತಲೇ ಪೊಲೀಸರು, ಮುಖಂಡರು ಬಂದು ನಮ್ಮ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ 100 ಮಂದಿಯಾದರೂ ನಾವು ಮತಾಂತರವಾಗುತ್ತೇವೆ. ಬಹುಪಾಲು ದಲಿತರು ತಾರತಮ್ಯ, ಅಸ್ಪೃಶ್ಯತೆಗೆ ಬೇಸತ್ತು ಮತಾಂತರಗೊಳ್ಳುತ್ತಿದ್ದಾರೆ,’ ಎಂದುಮುತ್ತುಕುಮಾರ್‌ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT