ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟ, 19 ಲಕ್ಷ ಮಂದಿ ಸ್ಥಿತಿ ಅತಂತ್ರ

ಪಟ್ಟಿಯಲ್ಲಿ 3.11 ಕೋಟಿ ಜನ
Last Updated 31 ಆಗಸ್ಟ್ 2019, 6:56 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನಲ್ಲಿ ಕೈಗೊಳ್ಳಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿಯು ಶನಿವಾರ ಪ್ರಕಟವಾಗಿದ್ದು, ಒಟ್ಟು 3.11 ಕೋಟಿ ಜನರ ಹೆಸರನ್ನು ಒಳಗೊಂಡಿದೆ. 19 ಲಕ್ಷ ಜನರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ.

68 ವರ್ಷಗಳ ನಂತರ ಅಸ್ಸಾಂನಲ್ಲಿ ಪೌರತ್ವ ಪಟ್ಟಿ ಪರಿಷ್ಕರಿಸಲಾಗಿದೆ. ಅಕ್ರಮ ವಲಸಿಗರ ಪತ್ತೆಗಾಗಿ ಎನ್‌ಆರ್‌ಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಭಾರತೀಯ ನಾಗರಿಕರಾಗಿ ಪಟ್ಟಿಯಲ್ಲಿ ಸೇರ್ಪಡೆಯಾಗಲು ಬಯಸಿ 3.29 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 19,06,657 ಅರ್ಜಿದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಒಟ್ಟು3,11,21,004 ಜನರುಎನ್‌ಆರ್‌ಸಿ ಅಂತಿಮ ಪಟ್ಟಿಯಲ್ಲಿದ್ದಾರೆ.

2017ರ ಡಿಸೆಂಬರ್‌ 31ರಂದು ಎನ್‌ಆರ್‌ಸಿಯ ಮೊದಲ ಕರಡು ಪ್ರಕಟಿಸಲಾಗಿತ್ತು. 2018ರ ಜುಲೈ 30ರಂದು ಅಂತಿಮ ಕರಡು ಪ್ರಕಟವಾಗಿತ್ತು. ಸೇವಾ ಕೇಂದ್ರಗಳ ಮೂಲಕ ಎನ್‌ಆರ್‌ಸಿ ಪರಿಷ್ಕರಣೆ ನಡೆಸಲಾಗಿದೆ. ರಾಜ್ಯದಲ್ಲಿ ಒಟ್ಟು 2,500 ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಕಳೆದ ಜುಲೈನಲ್ಲಿ ಪ್ರಕಟಿಸಲಾಗಿದ್ದ ಪಟ್ಟಿಯಲ್ಲಿ 41 ಲಕ್ಷ ಜನರ ಹೆಸರು ಕೈಬಿಡಲಾಗಿತ್ತು.

www.nrcassam.nic.in ವೆಬ್‌ಸೈಟ್‌ ಮೂಲಕ ಸೇರ್ಪಡೆಯಾಗಿರುವ ಹಾಗೂ ಬಿಟ್ಟಿರುವ ಹೆಸರುಗಳನ್ನು ಕಾಣಬಹುದು. ಭದ್ರತೆಗಾಗಿ ಪ್ಯಾರಾಮಿಲಿಟರಿ ಪಡೆ ನಿಯೋಜಿಸಲಾಗಿದೆ.

ಪೂರ್ವ ಪಾಕಿಸ್ತಾನದಿಂದ 1951ರಲ್ಲಿ ಭಾರೀ ವಲಸೆ ಜರುಗಿದ ಸಂದರ್ಭದಲ್ಲಿ ಮೊದಲ ಎನ್‌ಆರ್‌ಸಿ ತಯಾರಿಸಲಾಗಿತ್ತು. 1971ರ ಮಾರ್ಚ್ 24ಕ್ಕೆ ಮುನ್ನ ಅಸ್ಸಾಂನಲ್ಲಿ ವಾಸವಿದ್ದವರನ್ನು ಪೌರರೆಂದು ಗುರುತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸೆಗಾರರನ್ನು ಗುರುತಿಸುವಂತೆ 1979–1985ರ ವರೆಗೆ ಆರು ವರ್ಷಗಳು ಅಖಿಲ ಭಾರತ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ಚಳವಳಿ ನಡೆಸಿತ್ತು. ಅಕ್ರಮ ವಲಸೆಗಾರರನ್ನು ಗುರುತಿಸಿ ಅವರವರ ದೇಶಗಳಿಗೆ ವಾಪಸು ಕಳಿಸಲಾಗುವುದು ಎಂಬ ಆಶ್ವಾಸನೆ ನೀಡುವ ಒಪ್ಪಂದವೊಂದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ 1985ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT