ಮಂಗಳವಾರ, ಮಾರ್ಚ್ 31, 2020
19 °C

ಬಿಎಸ್‌ಎನ್‌ಎಲ್‌ನ 93 ಸಾವಿರ ನೌಕರರಿಂದ ಸ್ವಯಂ ನಿವೃತ್ತಿಗೆ ಅರ್ಜಿ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್‌ನ 93 ಸಾವಿರ ನೌಕರರುಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದಾರೆ. ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದರು.

ಬಿಎಸ್‌ಎನ್‌ಎಲ್‌ನ ಒಟ್ಟು 79 ಸಾವಿರ ಉದ್ಯೋಗಿಗಳು ಹಾಗೂ ಎಂಟಿಎನ್‌ಎಲ್‌ನ 20 ಸಾವಿರದ ಪೈಕಿ 14 ಸಾವಿರ ಉದ್ಯೋಗಿಗಳು ಸ್ವಯಂ ನಿವೃತ್ತಿಗೆ ನಿರ್ಧರಿಸಿದ್ದಾರೆ. ಆರ್ಥಿಕ ನಷ್ಟದಿಂದ ಪಾರಾಗಲು ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯನ್ನು ಕಡಿತೊಳಿಸುವ ಉದ್ದೇಶದಿಂದ ಸ್ವಯಂ ನಿವೃತ್ತಿ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. 

ಎರಡೂ ಸಂಸ್ಥೆಗಳ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಕಡಿತಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಇಲಾಖೆಯ ರಾಜ್ಯಸಚಿವ ಸಂಜಯ್ ಧೋತ್ರೆ ತಿಳಿಸಿದ್ದಾರೆ. ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವಅಥವಾ ಮಾರಾಟ ಮಾಡುವ ಯಾವುದೇಪ್ರಸ್ತಾವ ಸರ್ಕಾರದ ಪರಿಗಣನೆಯಲ್ಲಿ
ಇಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.  

ಚಿಟ್‌ಫಂಡ್ ಮಸೂದೆ ಅಂಗೀಕಾರ: ನವೆಂಬರ್ 20ರಂದು ಲೋಕಸಭೆಯ ಅಂಗೀಕಾರ ಪಡೆದಿದ್ದ ಚಿಟ್‌ಫಂಡ್ ಮಸೂದೆಗೆ ರಾಜ್ಯಸಭೆಗುರುವಾರ ಅನುಮೋದನೆ ನೀಡಿದೆ. ಚಿಟ್‌ ಫಂಡ್‌ ಚಂದಾದಾರರಿಗೆ ರಕ್ಷಣೆ, ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ಕ್ರಮಗಳ ಜಾರಿ– ಈ ಮಸೂದೆಯ ಉದ್ದೇಶ. 

ನಾಲ್ವರಿಗಿಂತ ಕಡಿಮೆ ಪಾಲುದಾರರನ್ನು ಒಳಗೊಂಡ ಗುಂಪು ಗರಿಷ್ಠ ₹3ಲಕ್ಷ ಹಣ ಸಂಗ್ರಹಿಸಬಹುದು. ನಾಲ್ಕಕ್ಕಿಂತ ಹೆಚ್ಚು ಪಾಲುದಾರರು ಇರುವ ಘಟಕವು ಗರಿಷ್ಠ ₹6ರಿಂದ ₹18 ಲಕ್ಷ ಹಣ ಸಂಗ್ರಹಿಸಬಹುದು ಎಂಬ ನಿಯಮಗಳನ್ನು ಈ ಮಸೂದೆ ಹೊಂದಿದೆ. 

ಹೆಚ್ಚುವರಿ ವೆಚ್ಚಕ್ಕೆ ಕೋರಿಕೆ: ₹21,246 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಕೋರಿದರು. ಎರಡೂ ಸದನಗಳಲ್ಲಿ ಅವರು ಹೆಚ್ಚುವರಿಬೇಡಿಕೆ ಪ್ರಸ್ತಾವವನ್ನು ಮಂಡಿಸಿದರು. ಹೊಸದಾಗಿ ರಚನೆಯಾಗಿರುವ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ₹8,820 ಕೋಟಿ ಅನುದಾನ ನೀಡಿಕೆಯೂ ಇದರಲ್ಲಿ ಸೇರಿದೆ. 

ಜುಲೈನಲ್ಲಿ ಮಂಡನೆಯಾಗಿದ್ದ ಕೇಂದ್ರ ಹಣಕಾಸು ಬಜೆಟ್‌ನಲ್ಲಿ ₹27.86 ಲಕ್ಷ ಕೋಟಿ ವೆಚ್ಚ ಪ್ರಸ್ತಾಪಿಸಲಾಗಿತ್ತು. 

ಆರ್ಥಿಕ ಕುಸಿತ ಚರ್ಚೆ ತೀವ್ರ

ಆರ್ಥಿಕ ಕುಸಿತ ಕುರಿತಂತೆ ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದು, ಈ ಸಂಬಂಧ ಶುಕ್ರವಾರ ಪ್ರತ್ಯೇಕ ಖಾಸಗಿ ನಿರ್ಣಯ ಮಂಡಿಸಲು ಕೇರಳದ ಇಬ್ಬರು ಸಂಸದರು ನಿರ್ಧರಿಸಿದ್ದಾರೆ. ಸಿಪಿಐ ಸಂಸದ ಬಿನಯ್ ವಿಶ್ವಂ ರಾಜ್ಯಸಭೆಯಲ್ಲಿ ಮತ್ತು ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಅವರು ಲೋಕಸಭೆಯಲ್ಲಿ ನಿರ್ಣಯ ಮಂಡಿಸಲಿದ್ದಾರೆ. 

ಖಾಸಗಿ ರಂಗದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ನೀಡುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಕೋರುವ ಮಸೂದೆ ಮಂಡಿಸಲು ಬಿಜೆಪಿಯ ರಾಜ್ಯಸಭಾ ಸದಸ್ಯ ಪ್ರಕಾಶ್ ಸಿನ್ಹಾ ಮುಂದಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು