ಶನಿವಾರ, ಮಾರ್ಚ್ 28, 2020
19 °C

‘ಲಾಕ್‌ಡೌನ್‌ ಮಾಡಿ, ಜನರಿಗೆ ನೆರವು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್–19 ವಿರುದ್ಧದ ಹೋರಾಟದ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಬೇಕು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒತ್ತಾಯಿಸಿದ್ದಾರೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ ಬೀಳಲಿದೆ, ಇದನ್ನು ಸುಧಾರಿಸಿಕೊಳ್ಳಲು ಸರ್ಕಾರವು ಬಡವರಿಗೆ, ದಿನಗೂಲಿ ನೌಕರರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಹಣಕಾಸು ನೆರವು ನೀಡಬೇಕು, ಉದ್ಯೋಗ ಕಡಿತ ಮಾಡದಂತೆ ಉದ್ಯಮಿಗಳಿಗೆ ಭದ್ರತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ

**

* ದೇಶದ ಹಲವೆಡೆ ಲಾಕ್‌ಡೌನ್‌ ಇದೆ. ಕೋವಿಡ್–19 ಅನ್ನು ಎದುರಿಸುವ ಕ್ರಮಗಳು ಕಠಿಣವಾಗುತ್ತಿವೆ. ನೀವು ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್‌ಗೆ ಒತ್ತಾಯಿಸುತ್ತಿದ್ದೀರಿ. ನಾವು ಸರಿಯಾದ ದಿಕ್ಕಿನಲ್ಲಿದ್ದೇವೆಯೇ?

ಹೌದು ಸರಿಯಾದ ದಿಕ್ಕಿನಲ್ಲಿದ್ದೇವೆ, ಆದರೆ ತೀರಾ ತಡವಾಗಿದೆ. ಭಾನುವಾರ ಜನತಾ ಕರ್ಫ್ಯೂ ಘೋಷಿಸಿದಾಗ ಪ್ರಧಾನಿ ಅವರು ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ ಮತ್ತು ಸಂಪೂರ್ಣ ಲಾಕ್‌ಡೌನ್ ಮಾಡಲು ಜನರನ್ನು ಸಿದ್ಧವಾಗಿಸುತ್ತಿದ್ದಾರೆ ಎಂದುಕೊಂಡಿದ್ದೆ. ಕಳೆದ (ಭಾನುವಾರ) ರಾತ್ರಿಯೇ ಅವರು ಎರಡು ವಾರಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಬೇಕಿತ್ತು.

* ಸಂಪೂರ್ಣ ಲಾಕ್‌ಡೌನ್‌ನಂತಹ ಕ್ರಮಗಳು ಆರ್ಥಿಕವಾಗಿ ಹೊಡೆತವೂ ಹೌದಲ್ಲವೇ? ದಿನಗೂಲಿ ಮೇಲೆ ಅವಲಂಬಿತರಾಗಿರುವವರು, ರಸ್ತೆಬದಿ ವ್ಯಾಪಾರಿಗಳ ಗತಿ ಏನು? ಅಂತಹವರಿಗಾಗಿ ಈವರೆಗೆ ಏನನ್ನೂ ಘೋಷಿಸಿಲ್ಲ. ಭಾರಿ ಪ್ರಮಾಣದ ಅಸಂಘಟಿತ ವಲಯಗಳಿರುವ ಮತ್ತು ಸಾಮಾಜಿಕ ಭದ್ರತೆ ಇಲ್ಲದ ಭಾರತದಂತಹ ದೇಶದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಒತ್ತಾಯಿಸುವ ಮುನ್ನ, ಅದರಿಂದಾಗುವ ಪರಿಣಾಮಗಳನ್ನು ನೀವು ಪರಿಶೀಲಿಸಿದ್ದೀರಾ?

ಈ ಬಗ್ಗೆ ನಾನು ಯೋಚಿಸಿದ್ದೇನೆ, ಕೆಲವು ಗೆಳೆಯರ ಜತೆ ಚರ್ಚಿಸಿಯೂ ಇದ್ದೇನೆ. ಇಂತಹ ಕ್ರಮವು ಆರ್ಥಿಕತೆಗೆ ಭಾರಿ ಹೊಡೆತ ನೀಡಲಿದೆ. ಬಹುಶಃ ಸರ್ಕಾರವು ₹ 5 ಲಕ್ಷ ಕೋಟಿ ತೆಗೆದಿರಿಸಬೇಕಾಗುತ್ತದೆ. ಈ ನಿಧಿಯನ್ನು ಬಳಸಿಕೊಂಡು ದಿನಗೂಲಿ ನೌಕರರು, ಸ್ವಉದ್ಯೋಗಿಗಳು, ಕೃಷಿ ಕಾರ್ಮಿಕರಂತಹ ಬಡವರಿಗೆ ತಿಂಗಳ ವೇತನ ನೀಡಬಹುದು. ಸಂಘಟಿತ ವಲಯದಲ್ಲಿ ಇರುವವರಿಗೆ ವೇತನ ಭದ್ರತೆ ನೀಡಬಹುದು.

* ಕೋವಿಡ್‌–19ನಿಂದ ಭಾರತವು ಆರ್ಥಿಕ ಹಿಂಜರಿತಕ್ಕೆ ಜಾರುವ ಸಾಧ್ಯತೆ ಇದೆಯೇ? ಈಗಿನ ಪರಿಸ್ಥಿತಿ ಇನ್ನೂ 15 ದಿನ ಅಥವಾ ತಿಂಗಳು ಅಥವಾ ಇನ್ನೂ ಹೆಚ್ಚಿನ ಅವಧಿಗೆ ಮುಂದುವರಿದರೆ ದೇಶದ ಆರ್ಥಿಕತೆ ಮೇಲೆ ಆಗುವ ಪರಿಣಾಮವೇನು? 

ಜಾಗತಿಕ ಮಟ್ಟದಲ್ಲಿ ಇರುವಂತೆ ಆರ್ಥಿಕತೆ ಕುಂಠಿತವಾಗುತ್ತದೆ, ಬಹುಶಃ ಶೇ 2ರಷ್ಟು. ಆದರೆ ಭಾರತವು ಹಿಂಜರಿತಕ್ಕೆ ಜಾರುವ ಸಾಧ್ಯತೆ ಇಲ್ಲ.

* ಜಗತ್ತಿನ ಬಹುತೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಇಳಿಕೆಯಂತಹ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಂತಹ ಕ್ರಮಗಳು ಈ ಪರಿಸ್ಥಿತಿಯಲ್ಲಿ ನೆರವಿಗೆ ಬರುತ್ತವೆಯೇ?

ಕೋವಿಡ್‌–19 ವಿರುದ್ಧ ಹೋರಾಡಲು ಆರ್ಥಿಕ ಕ್ರಮಗಳು ನೇರವಾಗಿ ನೆರವಿಗೆ ಬರುವುದಿಲ್ಲ. ಬಡ್ಡಿದರ ಕಡಿತ, ಹಣಕಾಸು ಒದಗಿಸುವಿಕೆ, ಸುಲಭದಲ್ಲಿ ಸಾಲ ನೀಡಿಕೆ ಮತ್ತು ನಿಯಮಾವಳಿಗಳನ್ನು ಸಡಿಲ ಮಾಡುವುದರಿಂದ, ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ವೇತನ ನೀಡುವಲ್ಲಿ ಉದ್ಯಮಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

* ನಮ್ಮ ಆರ್ಥಿಕತೆಯು ಈ ಸೋಂಕನ್ನು ಎದುರಿಸುವಲ್ಲಿ ಸರ್ಕಾರದಿಂದ ಯಾವೆಲ್ಲಾ ಕ್ರಮಗಳನ್ನು ನಿರೀಕ್ಷಿಸುತ್ತಿದ್ದೀರಿ?

ತಕ್ಷಣದ ಆರ್ಥಿಕ ಕ್ರಮಗಳ ಅನಿವಾರ್ಯತೆ ಇದೆ. ರೈತರ ಸಹಾಯಧನವನ್ನು ದುಪ್ಪಟ್ಟು ಮಾಡಬೇಕು, ಗೇಣಿರೈತರಿಗೂ ಇದನ್ನು ವಿಸ್ತರಿಸಬೇಕು. ತೆರಿಗೆ ಪಾವತಿಯನ್ನು ಮುಂದೂಡಬೇಕು, ಪರೋಕ್ಷ ತೆರಿಗೆಗಳನ್ನು ಕಡಿತ ಮಾಡಬೇಕು, ನಿರ್ಗತಿಕರಿಗೆ ನಗದು ವರ್ಗಾವಣೆ ಮಾಡಬೇಕು, ಅಗತ್ಯವಿದ್ದವರಿಗೆ 10 ಕೆ.ಜಿ.ಯಷ್ಟು ಆಹಾರ ಧಾನ್ಯವನ್ನು ಉಚಿತವಾಗಿ ನೀಡಬೇಕು, ಉದ್ಯೋಗ ಮತ್ತು ವೇತನ ಕಡಿತ ಮಾಡದಂತೆ ಉದ್ಯಮಿಗಳಿಗೆ ಭದ್ರತೆ ನೀಡಬೇಕು.

* ಲಾಕ್‌ಡೌನ್‌ ಇದ್ದರೂ ಸಂಸತ್ತು ಕಾರ್ಯನಿರ್ವಹಿಸಬೇಕು, ಸಂಸದರು ವೈದ್ಯರಂತೆ ಮತ್ತು ಸೈನಿಕರಂತೆ ದುಡಿದು ದೇಶಕ್ಕೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಬಿಜೆಪಿಯ ಸಂಸದರೊಬ್ಬರು ಹೇಳಿದ್ದಾರೆ. ನಿಮ್ಮ ಅಭಿಪ್ರಾಯವೇನು?

ಅವರ ಉತ್ಸಾಹವನ್ನು ನಾನು ಮೆಚ್ಚುತ್ತೇನೆ, ಆದರೆ ಅದು ಸರಿಯಾದುದಲ್ಲ. ಇಂತಹ ಸಂದರ್ಭದಲ್ಲಿ ಸಂಸದರು ತಮ್ಮತಮ್ಮ ಕ್ಷೇತ್ರಗಳಿಗೆ ಹಿಂತಿರುಗಿ ಸರ್ಕಾರದ ಕ್ರಮಗಳನ್ನು ಅನುಸರಿಸಿ, ಎಂದು ಜನರನ್ನು ಒತ್ತಾಯಿಸುವ ಕೆಲಸ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು