ಬುಧವಾರ, ಸೆಪ್ಟೆಂಬರ್ 18, 2019
23 °C
ಅವ್ಯವಹಾರದ ಆರೋಪ

ಏರ್‌ ಇಂಡಿಯಾ ವಿಮಾನ ಖರೀದಿ ಒಪ್ಪಂದ: ಚಿದಂಬರಂಗೆ ಜಾರಿ ನಿರ್ದೇಶನಾಲಯ ಸಮನ್ಸ್‌

Published:
Updated:

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಏರ್‌ ಇಂಡಿಯಾ ಸಂಸ್ಥೆಗೆ ವಿಮಾನ ಖರೀದಿಸಿದ ಒಪ್ಪಂದಕ್ಕೆ ಸಂಬಂದಿಸಿ ಇದೇ 23ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸೂಚಿಸಿದೆ. ದಶಕದ ಹಿಂದಿನ ಈ ಒಪ್ಪಂದವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಏರ್‌ ಇಂಡಿಯಾಗೆ ಮತ್ತಷ್ಟು ನಷ್ಟ ಉಂಟು ಮಾಡಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ಏರ್‌ ಇಂಡಿಯಾಗೆ 111 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಚಿದಂಬರಂ ನೇತೃತ್ವದ ಸಚಿವರ ಸಮಿತಿ ಅನುಮೋದನೆ ನೀಡಿತ್ತು. ಸುಮಾರು ₹70 ಸಾವಿರ ಕೋಟಿ ವೆಚ್ಚದಲ್ಲಿ ಏರ್‌ಬಸ್‌ನಿಂದ 43 ಮತ್ತು ಬೋಯಿಂಗ್‌ನಿಂದ 68 ವಿಮಾನ ಖರೀದಿಸುವ ಒಪ್ಪಂದ ಇದಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಏರ್‌ ಇಂಡಿಯಾಗೆ ಬೋಯಿಂಗ್‌ನಿಂದ 68 ವಿಮಾನಗಳನ್ನು ಖರೀದಿಸಲು 2005ರ ಡಿಸೆಂಬರ್‌ನಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದಾಗಿ ವರ್ಷದ ನಂತರ ಏರ್‌ಬಸ್‌ನಿಂದ 43 ವಿಮಾನಗಳನ್ನು ಖರೀದಿಸಲು ಇಂಡಿಯನ್‌ ಏರ್‌ಲೈನ್ಸ್‌ ಒಪ್ಪಂದ ಮಾಡಿಕೊಂಡಿತ್ತು. 2007ರಲ್ಲಿ ಏರ್ ಇಂಡಿಯಾ ಜತೆ ಇಂಡಿಯನ್‌ ಏರ್‌ಲೈನ್ಸ್‌ ವಿಲೀನಗೊಂಡಿತ್ತು. ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆಗೆ ಸುಪ್ರೀಂ ಕೋರ್ಟ್‌ ಸೂಚನೆಯಂತೆ 2017ರ ಮೇನಲ್ಲಿ ಸಿಬಿಐ ಮೂರು ಪ್ರಕರಣಗಳನ್ನು ದಾಖಲಿಸಿತ್ತು ಎಂದು ವರದಿ ಉಲ್ಲೇಖಿಸಿದೆ.

Post Comments (+)