ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಶುಕ್ರವಾರ ಬಂಧಮುಕ್ತ

ಅಭಿನಂದನ್‌ ಬಿಡುಗಡೆ ವಿಚಾರವನ್ನು ಸಂಸತ್‌ನಲ್ಲಿ ಘೋಷಿಸಿದ ಇಮ್ರಾನ್‌
Last Updated 1 ಮಾರ್ಚ್ 2019, 4:21 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನವು ಸೆರೆ ಹಿಡಿದಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಬಿಡುಗಡೆ ವಿಚಾರದಲ್ಲಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಲಭಿಸಿದೆ.

ಜಾಗತಿಕ ಒತ್ತಡಕ್ಕೆ ಪಾಕಿಸ್ತಾನ ಮಣಿದಿದೆ. ಭಾರತ–ಪಾಕಿಸ್ತಾನ ನಡುವಣ ಸಂಘರ್ಷಕ್ಕೆ ಸಂಬಂಧಿಸಿ ಸಾಕಷ್ಟು ಒಳ್ಳೆಯ ಸುದ್ದಿ ಶೀಘ್ರದಲ್ಲಿ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಕೆಲವೇ ತಾಸಿನಲ್ಲಿ ಒಳ್ಳೆಯ ಸುದ್ದಿ ಪ್ರಕಟವಾಗಿದೆ.

ಭಾರತದ ಜತೆಗೆ ಶಾಂತಿ ಕಾಯ್ದುಕೊಳ್ಳುವುದಕ್ಕಾಗಿ ಮತ್ತು ಸಂಧಾನಕ್ಕೆ ಬಾಗಿಲು ತೆರೆಯುವ ಮೊದಲ ಹೆಜ್ಜೆಯಾಗಿ ಭಾರತೀಯ ವಾಯುಪಡೆಯ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನದ ಸಂದರ್ಭದಲ್ಲಿ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ವಿಷಮ ಸ್ಥಿತಿಯನ್ನು ಶಮನ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ಮಾತುಕತೆ ನಡೆಸಲು ಇಮ್ರಾನ್‌ ಖಾನ್‌ ಸಿದ್ಧವಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಹೇಳಿದ್ದ ತಾಸಿನೊಳಗೆ ಈ ಘೋಷಣೆ ಹೊರಬಿದ್ದಿದೆ.

ಇಮ್ರಾನ್‌ ಅವರು ಈ ವಿಚಾರ ಪ್ರಕ ಟಿಸುತ್ತಿದ್ದಂತೆಯೇ ಅಲ್ಲಿನ ಸಂಸದರು ಮೇಜು ಕುಟ್ಟಿ ಸಂತಸ ಕ್ತಪಡಿಸಿದರು.

ಅಭಿನಂದನ್‌ ಅವರನ್ನು ಚೌಕಾಶಿಯ ವಸ್ತುವಾಗಿ ಮಾಡಲು ಅವಕಾಶ ಕೊಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಒಪ್ಪಂದ ಇಲ್ಲ, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರ ಅದಕ್ಕೂ ಮೊದಲು ಸ್ಪಷ್ಟವಾಗಿ ಹೇಳಿತ್ತು.

ಭಾರತದ ಜತೆಗೆ ಉಂಟಾಗಿರುವ ಸಂಘರ್ಷಮಯ ಸನ್ನಿವೇಶದ ಬಗ್ಗೆ ಚರ್ಚಿಸುವುದಕ್ಕಾಗಿ ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನ ಕರೆಯಲಾಗಿತ್ತು.

ದೌರ್ಬಲ್ಯ ಅಲ್ಲ:ಭಾರತದ ಕಡೆಯಿಂದ ಉಂಟಾಗುವ ಯಾವುದೇ ತಪ್ಪು ನಡೆ ದುರಂತವಾಗಿ ಕೊನೆಗೊಳ್ಳಬಹುದು. ತಪ್ಪು ನಡೆಗಳಿಂದಾಗಿ ದೇಶಗಳು ನಾಶವಾಗಿವೆ. ಯುದ್ಧಯಾವುದಕ್ಕೂ ಪರಿಹಾರ ಅಲ್ಲ. ಭಾರತ ದಾಳಿ ಮುಂದುವರಿಸಿದರೆ ಅದಕ್ಕೆ ತಿರುಗೇಟು ನೀಡಲು ಸಿದ್ಧ. ಪರಿಸ್ಥಿತಿ ಶಮನಗೊಳ್ಳಬೇಕು ಎಂಬ ಪಾಕಿಸ್ತಾನದ ಇಚ್ಛೆಯನ್ನು ದೌರ್ಬಲ್ಯವಾಗಿ ಕಾಣಬಾರದು ಎಂದು ಇಮ್ರಾನ್‌ ಹೇಳಿದ್ದಾರೆ.

‘ನಮ್ಮ ಸಶಸ್ತ್ರ ಪಡೆಗಳು ಕಠಿಣವಾಗಿವೆ ಮತ್ತು ಯಾವುದೇ ಅತಿಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಸಜ್ಜಾಗಿವೆ. ಆದರೆ, ಪಾಕಿಸ್ತಾನವು ಶಾಂತಿ ಪ್ರೇಮಿ ದೇಶ’ ಎಂದು ಹೇಳಿದ್ದಾರೆ.

ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಎರಡೂ ದೇಶಗಳ ನಡುವಣ ಬಿಗುವನ್ನು ಕಡಿಮೆ ಮಾಡಲು ಅಂತರ
ರಾಷ್ಟ್ರೀಯ ಸಮುದಾಯ ನೆರವಾಗಬೇಕು ಎಂದೂ ಅವರು ಕೋರಿದ್ದಾರೆ.

ಯಡಿಯೂರಪ್ಪ ವಿರುದ್ಧ ಬಿಜೆ‍ಪಿ ಹೈಕಮಾಂಡ್ ಗರಂ: ತೀವ್ರ ತರಾಟೆ

‘ಪಾಕಿಸ್ತಾನದಲ್ಲಿನ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಪಡೆಗಳು ನಡೆಸಿದ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲಿದೆ’ ಎಂಬ ಹೇಳಿಕೆ ನೀಡಿರುವ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

‘ಈ ಹೇಳಿಕೆಯಿಂದಾಗಿ ಪಕ್ಷವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುವಂತಾಗಿದೆ. ಹಾಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗುರುವಾರ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನಿಮ್ಮ ಹೇಳಿಕೆಗೆ ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತ ವಾಗಿದೆ. ಇಂತಹ ಹೇಳಿಕೆಗಳು ಹಿರಿಯರಿಗೆ ತಕ್ಕುದಾದದಲ್ಲ ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT