ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಶೆಲ್‌ ದಾಳಿ: ಮಹಿಳೆ ಸಾವು

ಪೂಂಚ್‌ ಜಿಲ್ಲೆ ಗಡಿಯಲ್ಲಿ ಘಟನೆ l ಉಗ್ರರಿಂದ ಲಾರಿಗೆ ಬೆಂಕಿ – ಚಾಲಕ ಮೃತ
Last Updated 15 ಅಕ್ಟೋಬರ್ 2019, 19:29 IST
ಅಕ್ಷರ ಗಾತ್ರ

ಜಮ್ಮು/ಶ್ರೀನಗರ: ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಸೇನೆ ಮಂಗಳವಾರ ನಡೆಸಿದ ಭಾರಿ ಶೆಲ್‌ ದಾಳಿಗೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿದೆ.

ಈ ದಾಳಿಯಲ್ಲಿ 24 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಸ್ಥರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿತ್ತು.

ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ಕಿರ್ಣಿ ಮತ್ತು ಪೂಂಚ್‌ ವಲಯದಲ್ಲಿ ಬೆಳಗಿನ ಜಾವ 9.30ಕ್ಕೆ ಶೆಲ್‌ ದಾಳಿ ನಡೆಸಿದೆ. ಭಾರತೀಯ ಸೇನೆಯೂ ಪ್ರತಿ ದಾಳಿ ನಡೆಸಿದೆ. ಆದರೆ, ಪಾಕಿಸ್ತಾನದಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ಇಲ್ಲ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ದಾಳಿಯಿಂದಾಗಿ ಗಡಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶೆಲ್‌ ದಾಳಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್‌ಗೆ ಬೆಂಕಿ:ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆಯಲ್ಲಿ ಸೋಮವಾರ ಸಂಜೆ ಸೇಬು ಹಣ್ಣು ತುಂಬಿದ ಟ್ರಕ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಬೆಂಕಿ ಹಚ್ಚಿದ್ದರಿಂದ ಚಾಲಕ ಮೃತಪಟ್ಟಿದ್ದಾರೆ.

ರಾಜಸ್ಥಾನದ ಶರೀಫ್‌ ಖಾನ್‌ ಹತ್ಯೆಯಾದವರು.ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಿಂಧು– ಶಿರ್ಮಾಲ್‌ ಪ್ರದೇಶದಲ್ಲಿ ಉಗ್ರರು ಗುಂಡುಗಳನ್ನು ಹಾರಿಸಿದ್ದರಿಂದ ಚಾಲಕನಿಗೆ ತಗುಲಿ ಸಾವಿಗೀಡಾಗಿದ್ದಾರೆ. ಕೆಲವು ಗುಂಡುಗಳು ಇಂಧನ ಟ್ಯಾಂಕ್‌ಗೆ ತಗುಲಿದ್ದರಿಂದ ಟ್ರಕ್‌ ಬೆಂಕಿಗೆ ಆಹುತಿಯಾಗಿದೆ. 370 ವಿಧಿ ರದ್ಧತಿ ನಂತರ ವ್ಯಾಪಾರ ನಡೆಸದಂತೆ ಸ್ಥಳೀಯ ಹಣ್ಣಿನ ವ್ಯಾಪಾರಿಗಳಿಗೆ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ.

ಫಾರೂಕ್‌ ಸೋದರಿ, ತಂಗಿ ವಶಕ್ಕೆ
ಶ್ರೀನಗರ: 370ನೇ ವಿಧಿ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.‌

ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಂಗಿ ಸುರೈಯಾಅಬ್ದುಲ್ಲಾ, ಮಗಳು ಸಫಿಯಾ ಅಬ್ದುಲ್ಲಾ ಖಾನ್ ಇವರಲ್ಲಿ ಸೇರಿದ್ದಾರೆ. ತೋಳಿಗೆ ಕಪ್ಪು ಪಟ್ಟಿ ಧರಿಸಿ ಮತ್ತು ಫಲಕಗಳನ್ನು ಹಿಡಿದು ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸಭೆ ಸೇರಲು ಪೊಲೀಸರು ಅನುಮತಿ ನೀಡಲಿಲ್ಲ.

‘ಕಣಿವೆ ರಾಜ್ಯಗಳಲ್ಲಿ ನಾಗರಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಮರು ಸ್ಥಾಪಿಸಬೇಕು. ಕೇಂದ್ರ ಸರ್ಕಾರ ನಮಗೆ ದ್ರೋಹ ಎಸಗಿದೆ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಶಸ್ತ್ರೀಕರಣಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮಾಧ್ಯಮಗಳು ಕಾಶ್ಮೀರ ನೆಲದ ನೈಜತೆಯ ವರದಿ ಮಾಡಲು ಸೋತಿವೆ. ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿ ಪ್ರಕಟಿಸುತ್ತಿವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಎಂಎಸ್‌ ಸೇವೆ ಸ್ಥಗಿತ
ಕಾಶ್ಮೀರದಲ್ಲಿಪೋಸ್ಟ್‌ಪೇಯ್ಡ್‌ ಸಂಪರ್ಕವನ್ನು ಕಲ್ಪಿಸಿದ ಕೆಲವೇ ಗಂಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಎಂಎಸ್‌ ಸೇವೆ ಸ್ಥಗಿತಗೊಳಿಸಲಾಗಿದೆ.

72 ದಿನಗಳ ನಂತರ ಸೋಮವಾರ ಮಧ್ಯಾಹ್ನದಿಂದ ಕಣಿವೆ ರಾಜ್ಯದಲ್ಲಿ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸಂಪರ್ಕ ಪುನರಾರಂಭಗೊಂಡಿತು. ಆದರೆ, ಅಂತರ್ಜಾಲ, ವಾಟ್ಸ್‌ಆ್ಯಪ್‌ ಮತ್ತು 25 ಲಕ್ಷ ಪ್ರೀ–ಪೇಯ್ಡ್‌ ಸಂಪರ್ಕಗಳ ಸೌಲಭ್ಯ ಕಡಿತಗೊಳಿಸಿರುವುದು ಇನ್ನು ಮುಂದುವರಿದಿದೆ.

ಸೋಮವಾರ ಸಂಜೆ 5 ಗಂಟೆಯಿಂದ ಎಸ್‌ಎಂಎಸ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.

ಶೀಘ್ರವೇ ಅಂತರ್ಜಾಲ ಸೌಲಭ್ಯವನ್ನು ಪುನರಾರಂಭಿಸಲಾಗುವುದು ಎಂದು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ತಿಳಿಸಿದ್ದಾರೆ. ಆದರೆ, ಭದ್ರತಾ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದು, ಎರಡು ತಿಂಗಳು ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT