ಬುಧವಾರ, ಅಕ್ಟೋಬರ್ 16, 2019
21 °C

ರಾಜನಾಥ್ ಸಿಂಗ್ ಮಾಡಿದ ರಫೇಲ್ ಪೂಜೆಗೆ ಪಾಕ್ ಸೇನಾ ವಕ್ತಾರರ ಸಮರ್ಥನೆ

Published:
Updated:
Rajanath Singh

ನವದೆಹಲಿ: ‘ಕೇವಲ ಯಂತ್ರಗಳಿಂದ ಏನೂ ಆಗಲ್ಲ. ಅದನ್ನು ನಡೆಸುವವರ ಭಾವನೆ ಮುಖ್ಯ. ರಫೇಲ್ ಯುದ್ಧ ವಿಮಾನಕ್ಕೆ ಭಾರತದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಪೂಜೆ ಸಲ್ಲಿಸಿರುವುದರಲ್ಲಿ ಯಾವ ತಪ್ಪೂ ಇಲ್ಲ’  ಎಂದು ಪಾಕ್ ಸೇನೆಯ ವಕ್ತಾರ ಆಸೀಫ್ ಗಫೂರ್ ಹೇಳಿದ್ದಾರೆ.

ಭಾರತೀಯ ಸೇನೆ ಮತ್ತು ಸರ್ಕಾರವನ್ನು ಸದಾ ಟೀಕಿಸುವ ಗಫೂರ್ ಅವರ ಈ ಹೇಳಿಕೆ ಇದೀಗ ಎಲ್ಲರ ಗಮನ ಸೆಳೆದಿದೆ. 

‘ರಫೇಲ್‌ ಪೂಜೆಯಲ್ಲಿ ಯಾವುದೇ ತಪ್ಪಿಲ್ಲ. ಅದೊಂದು ಧಾರ್ಮಿಕ ಆಚರಣೆ. ಅದನ್ನು ಗೌರವಿಸಬೇಕು. ದಯವಿಟ್ಟು ನೆನಪಿಡಿ, ಕೇವಲ ಯಂತ್ರಗಳಿಂದ ಏನೂ ಸಾಧಿಸಲು ಆಗದು. ಅದನ್ನು ನಿರ್ವಹಿಸುವವರ ಆಸಕ್ತಿ, ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಅತಿಮುಖ್ಯ. ಪಾಕ್‌ ವಾಯುಪಡೆಯ ಯೋಧರ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಗಫೂರ್‌ ಗುರುವಾರ ಟ್ವೀಟ್ ಮಾಡಿದ್ದಾರೆ.

ಭಾರತ ಸರ್ಕಾರವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಉಭಯ ರಾಷ್ಟ್ರಗಳ ಸಂಬಂಧ ಹಾಳಾಗಿದೆ. ಈ ಹೊತ್ತಿನಲ್ಲಿ ಪಾಕ್ ಸೇನೆಯ ವಕ್ತಾರ ಭಾರತದ ರಕ್ಷಣಾ ಸಚಿವರ ಕಾರ್ಯ ಸಮರ್ಥಿಸಿ ಟ್ವೀಟ್ ಮಾಡಿರುವುದನ್ನು ಹಲವು ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಲಾಗುತ್ತಿದೆ.


ರಫೇಲ್ ವಿಮಾನದ ಚಕ್ರಗಳಿಗೆ ನಿಂಬೆಹಣ್ಣು

ಅ.8ರ ವಿಜಯದಶಮಿಯಂದು ರಾಜನಾಥ್ ಸಿಂಗ್ ಅವರು ಫ್ರಾನ್ಸ್‌ನ ಬೊರ್ಡಿಯಕ್ಸ್‌ನಲ್ಲಿ ರಫೇಲ್‌ ಯುದ್ಧವಿಮಾನಕ್ಕೆ ‘ಶಸ್ತ್ರ ಪೂಜೆ’ ನೆರವೇರಿಸಿದ್ದರು. ವಿಮಾನದ ಮೇಲೆ ಓಂ ಎಂದು ಬರೆದು, ತೆಂಗಿನಕಾಯಿ ಮತ್ತು ನಿಂಬೆಹಣ್ಣಿನಿಂದ ಪೂಜೆ ಮಾಡಿದ್ದರು.

ಸಿಂಗ್ ಅವರ ಈ ಕ್ರಮಕ್ಕೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ಷೇಪಣೆ ವ್ಯಕ್ತವಾಗಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಫೇಲ್ ಪೂಜೆಯನ್ನು ‘ತಮಾಷೆ’ ಎಂದು ಹೇಳಿದ್ದರು.  ಮತ್ತೋರ್ವ ಕಾಂಗ್ರೆಸ್ ನಾಯಕ ಉದಿತ್ ರಾಜ್, ‘ಭಾರತದಲ್ಲಿ ಮೂಢನಂಬಿಕೆ ಕೊನೆಗೊಂಡ ದಿನ, ಇಲ್ಲಿಯೇ ಯುದ್ಧ ವಿಮಾನಗಳು ತಯಾರಾಗುತ್ತವೆ’ ಎಂದು ಹೇಳಿದ್ದರು.

Post Comments (+)