ಶುಕ್ರವಾರ, ನವೆಂಬರ್ 22, 2019
22 °C
ಮರುನಾಮಕರಣಕ್ಕೆ ಸ್ಥಳೀಯರ ಆಗ್ರಹ

ಬಿಹಾರದಲ್ಲೊಂದು ‘ಪಾಕಿಸ್ತಾನ’!

Published:
Updated:

ಪಟ್ನಾ: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ‘ಪಾಕಿಸ್ತಾನ’ದ ಹೆಸರನ್ನು ಬದಲಾಯಿಸಲೇಬೇಕು ಎಂದು ಬಿಹಾರದ ಪುಟ್ಟ ಗ್ರಾಮವೊಂದರ ಜನರು ಪಟ್ಟು ಹಿಡಿದ್ದಾರೆ.

ಬಿಹಾರದಲ್ಲಿ ಪಾಕಿಸ್ತಾನ ಎಂಬ ಹೆಸರಿನ ಪುಟ್ಟ ಗ್ರಾಮವೊಂದಿದೆ. ಅಲ್ಲಿಯೇ ಶ್ರೀನಗರ ಎಂಬ ಹೆಸರಿನ ಊರೂ ಇದೆ. ಈ ಸ್ಥಳಗಳಿಗೂ, ನೆರೆ ರಾಷ್ಟ್ರಕ್ಕೂ ಅಥವಾ ಜಮ್ಮು– ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ. 

ಪಟ್ನಾದಿಂದ 375 ಕಿ.ಮೀ ದೂರದಲ್ಲಿರುವ ಪೂರ್ನಿಯಾ ಜಿಲ್ಲೆಯಲ್ಲಿನ ಶ್ರೀನಗರ ತಾಲ್ಲೂಕಿನಲ್ಲಿ ಈ ಗ್ರಾಮವಿದೆ. ಬುಡಕಟ್ಟು ಜನಾಂಗದ, ಕೇವಲ 150 ಜನರಿರುವ ಈ ಗ್ರಾಮಕ್ಕೆ ಪಾಕಿಸ್ತಾನ ಎಂಬ ಹೆಸರು ಏಕೆ ಬಂದಿದೆ ಎಂಬುದು ಅಲ್ಲಿನವರಿಗೆ ಗೊತ್ತಿಲ್ಲ. ಇಲ್ಲಿ ಮುಸ್ಲಿಂ ಸಮುದಾಯದ ಒಂದೂ ಕುಟುಂಬವಿಲ್ಲ. 

ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ ಗೌರವಾರ್ಥ ಪಾಕಿಸ್ತಾನ ಗ್ರಾಮವನ್ನು ಬಿರ್ಸಾ ನಗರ ಎಂದು ನಾಮಕರಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಗ್ರಾಮದಲ್ಲಿ ಬುಡಕಟ್ಟು ಜನಾಂಗದವರು ಮಾತ್ರ ಇದ್ದಾರೆ. ಆಧಾರ್‌ ಕಾರ್ಡ್‌ನಲ್ಲಿ ಗ್ರಾಮದ ಹೆಸರು ಪಾಕಿಸ್ತಾನ ಎಂದು ಕಾಣುತ್ತಿರುವುದರಿಂದ ಮುಜುಗರ ಆಗುತ್ತಿದೆ. ಆದ್ದರಿಂದ ಹೆಸರನ್ನು ಬದಲಾಯಿಸಬೇಕು’ ಎಂದು ಗ್ರಾಮಸ್ಥರು ಪೂರ್ನಿಯಾದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗೆ ಹಾಗೂ ವೃತ್ತ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಹೆಸರು ಹೇಗೆ ಬಂತು?: ಈ ಗ್ರಾಮದಲ್ಲಿ ಮೊದಲು ಮುಸ್ಲಿಂ ಕುಟುಂಬಗಳು ವಾಸವಿದ್ದವು. 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಮರೆಲ್ಲರೂ ಪೂರ್ವ ಪಾಕಿಸ್ತಾನಕ್ಕೆ (ಈಗಿನ ಬಾಂಗ್ಲಾ ದೇಶ) ತೆರಳಿದರು. ಮುಸ್ಲಿಮರು ಗ್ರಾಮದಲ್ಲಿ ಹೊಂದಿದ್ದ ತಮ್ಮ ಭೂಮಿಯನ್ನು ಬುಡಕಟ್ಟು ಜನಾಂಗ
ದವರಿಗೆ ಕೊಡುಗೆಯಾಗಿ ನೀಡಿ, ಇದಕ್ಕೆ ಪಾಕಿಸ್ತಾನ ಎಂಬ ಹೆಸರನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರು ಇನ್ನೂ ಚಾಲ್ತಿಯಲ್ಲಿದೆ. ‘ಗ್ರಾಮಸ್ಥರ ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಕಳುಹಿಸಲಾಗಿದೆ’ ಎಂದು ಶ್ರೀನಗರದ ವೃತ್ತ ಅಧಿಕಾರಿ ನಂದನ್‌ ಕುಮಾರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)