ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ್ದ ಸರ್ಕಾರಿ ಶಾಲೆ ಪುನರಾರಂಭ

ಮಕ್ಕಳ ಹಾಜರಾತಿ ಇಲ್ಲದ ಕಾರಣ ಕಳೆದ ವರ್ಷ ಮುಚ್ಚಿದ್ದ ಶಾಲೆ
Last Updated 12 ಜೂನ್ 2018, 8:42 IST
ಅಕ್ಷರ ಗಾತ್ರ

ಕುದೂರು (ಮಾಗಡಿ): ಕಳೆದ ವರ್ಷ ಮಕ್ಕಳ ಹಾಜರಾತಿ ಕಡಿಮೆ ಇದ್ದ ಕಾರಣ ಮುಚ್ಚಿದ್ದ ಬಸವನಗುಡಿ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರ ಮನವಿಯ ಮೇರೆಗೆ ಸೋಮವಾರ ಪುನರ್‌ ಪ್ರಾರಂಭಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ ಎಸ್‌.ಮಾತನಾಡಿ, ಸ್ನಾತಕೋತ್ತರ ಪದವಿಧರ ಶಿಕ್ಷಕರು ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅರ್ಪಣಾ ಭಾವನೆಯಿಂದ ದುಡಿಯುತ್ತಿದ್ದಾರೆ. ಪೋಷಕರು ಮನಸ್ಸು ಮಾಡಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ, ಅವರ ಭವಿಷ್ಯ ಉಜ್ವಲವಾಗಿಸಲು ಸಹಕರಿಸಬೇಕು ಎಂದರು.

ಖಾಸಗಿ ಶಾಲೆಗಳಲ್ಲಿ ತರಬೇತಿ ಪಡೆಯದವರು ಸಹ ಶಿಕ್ಷಕರಾಗಿದ್ದಾರೆ. ಸೂಟುಬೂಟು, ಕತ್ತಿನ ಪಟ್ಟಿ ಕಟ್ಟಿಕೊಂಡು ನೀವು ಕೊಟ್ಟ ವಂತಿಗೆ ಹಣದಲ್ಲಿ ಮನೆಯ ಬಳಿಗೆ ಬರುವ ವ್ಯಾನ್‌ನಲ್ಲಿ ಶಾಲೆಗೆ ತೆರಳಿದರೆ ಸಾಕೇ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೇಡವೇ ಎಂಬುದನ್ನು ಪೋಷಕರು ಯೋಚಿಸಬೇಕು. ಎಲ್ಲ ಕಾನ್ವೆಂಟಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲಿದೆ ಎಂಬುದು ದೂರದ ಬೆಟ್ಟ ನುಣ್ಣಗೆ ಮಾತಿನಂತೆ. ಸರ್ಕಾರಿ ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರು ಸಹ ಶಿಕ್ಷಕರೊಂದಿಗೆ ಚರ್ಚಿಸುವ ಅವಕಾಶವಿದೆ ಎಂದರು.

ಮಕ್ಕಳ ಹಾಜರಾತಿ ಇಲ್ಲದ ಕಾರಣ ಕಳೆದ ವರ್ಷ ಮುಚ್ಚಿದ್ದ ಬಸವನಗುಡಿ ಪಾಳ್ಯದ ಸರ್ಕಾರಿ ಕಿರಿಯ ಶಾಲೆಯಲ್ಲಿ ಈ ವರ್ಷ 10 ಮಕ್ಕಳು ದಾಖಲಾಗಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆ ಎಂದರೆ ಬಡವರ ಮಕ್ಕಳಿಗೆ ಕಾಮಧೇನುವಿದ್ದಂತೆ. ಇಲ್ಲಿ ಕಲಿತವರೆ ಉನ್ನತ ಉದ್ಯೋಗದಲ್ಲಿ ಇದ್ದಾರೆ. ಈ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾದರೆ ಇನ್ನೂ ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡುವುದಾಗಿ ಬಿಇಒ ತಿಳಿಸಿದರು.

ಬಿಆರ್‌ಪಿ ರಂಗರಾಜು, ಮುಖ್ಯಶಿಕ್ಷಕ ಯೋಗಾನರಸಿಂಹ ಮೂರ್ತಿ, ಶಿಕ್ಷಕ ಶಿವಾನಂದ ಗ್ರಾಮದ ಮುಖಂಡರಾದ ನಂಜುಂಡಯ್ಯ, ರವಿಕುಮಾರ್‌, ವಸಂತ ಕುಮಾರ್‌ ಸರ್ಕಾರಿ ಶಾಲೆ ಉಳಿಸುವುದಾಗಿ ತಿಳಿಸಿದರು. ಗ್ರಾಮಸ್ಥರು ಇದ್ದರು. ಶಾರದಾ ಮಾತೆ ಚಿತ್ರ ಇಟ್ಟು ಪೂಜಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT