ಪ್ರತಿಭಟನೆ ಭೀತಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ, ಬ್ಯಾಗ್ ನಿಷೇಧ

7
ವ್ಯಾಪಕ ಟೀಕೆ ಬಳಿಕ ಕಪ್ಪು ಬೂಟ್‌ಗೆ ಅನುಮತಿ

ಪ್ರತಿಭಟನೆ ಭೀತಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ, ಬ್ಯಾಗ್ ನಿಷೇಧ

Published:
Updated:

ಪಲಮು (ಜಾರ್ಖಂಡ್): ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಶಿಕ್ಷಕರು ಪ್ರತಿಭಟನೆ ನಡೆಸಬಹುದು ಎಂಬ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಬರುವವರಿಗೆ ಕಪ್ಪು ಬಟ್ಟೆ, ಬ್ಯಾಗ್, ಬೂಟು ಧರಿಸುವುದನ್ನೇ ನಿಷೇಧಿಸಿದ್ದಾರೆ ಜಾರ್ಖಂಡ್ ಪೊಲೀಸರು!

ಇದೇ 5ರಂದು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿರುವ ಪಲಮು ಎಸ್‌ಪಿ ಇಂದ್ರಜಿತ್ ಮಹತಾ, ಕಪ್ಪು ಬಣ್ಣದ ಶಾಲು, ಪ್ಯಾಂಟ್, ಅಂಗಿ, ಕೋಟ್‌, ಸ್ವೆಟರ್, ಮಫ್ಲರ್‌, ಸಾಕ್ಸ್, ಟೈ, ಬ್ಯಾಗ್‌ ಮತ್ತು ಬೂಟ್‌ ಧರಿಸಿ ಕಾರ್ಯಕ್ರಮಕ್ಕೆ ಬರುವುದನ್ನು ನಿಷೇಧಿಸಿದ್ದಾರೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕಪ್ಪು ಬೂಟ್‌ ಧರಿಸಲು ಹೇರಿರುವ ನಿಷೇಧ ಹಿಂಪಡೆಯಲಾಗಿದೆ.

‘ಪ್ರಧಾನಿಯವರು ಜನವರಿ 5ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವರಿಗೆ ಮುಂಚಿತವಾಗಿ ತಿಳಿಸುವುದೇನೆಂದರೆ; ಕಪ್ಪು ಬಟ್ಟೆ ಧರಿಸುವಂತಿಲ್ಲ ಮತ್ತು ಪ್ರತಿಯೊಬ್ಬರೂ ಗುರುತಿನ ಚೀಟಿ ಹೊಂದಿರಬೇಕು’ ಎಂದು ಲತೇಹರ್, ಗರ್ಹ್ವಾ, ಛಾತ್ರಾ ಮತ್ತು ಪಲಮು ಪೊಲೀಸ್ ಉಪ ಆಯುಕ್ತರಿಗೆ ಎಸ್‌ಪಿಯವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳು ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಘುವರದಾಸ್ ಅವರಿಗೆ ಶಿಕ್ಷಕರು ಕಪ್ಪುಬಾವುಟ ಪ್ರದರ್ಶಿಸಿದ್ದರು. ಉದ್ಯೋಗ ಖಾಯಂಗೊಳಿಸುವಂತೆ ಮತ್ತು ಸರ್ಕಾರಿ ಶಿಕ್ಷಕರಿಗೆ ಸಮನಾದ ವೇತನ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

‘ನಾವು ಅತಿಥಿಗಳ ಘನತೆ ಬಗ್ಗೆ ಕಾಳಜಿವಹಿಸಬೇಕಿದೆ. ಕಪ್ಪು ಬೂಟ್ ಧರಿಸುವುದಕ್ಕೆ ನಿರ್ಬಂಧವಿರುವುದಿಲ್ಲ’ ಎಂದು ಎಸ್‌ಪಿ ಮಹತಾ ತಿಳಿಸಿದ್ದಾರೆ.

‘ಕೆಲವು ಶಿಕ್ಷಕ ಸಂಘಟನೆಗಳ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದೇವೆ. ಪ್ರಧಾನಿಯವರ ಕಾರ್ಯಕ್ರಮದ ಸಂದರ್ಭ ಪ್ರತಿಭಟನೆ ನಡೆಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !