ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲ್ಗರ್‌ ಗಲಭೆ ಪ್ರಕರಣ | 7 ಆರೋಪಿಗಳ ಬಂಧನ

Last Updated 14 ಮೇ 2020, 11:17 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಹಳ್ಳಿಯೊಂದರ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳು ಮತ್ತು ಅವರನ್ನು ಕರೆತಂದಿದ್ದ ಕಾರಿನ ಚಾಲಕನನ್ನು ಕಳೆದ ತಿಂಗಳು ಹೊಡೆದು ಕೊಂದಿದ್ದರು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಗುರುವಾರ ಒಬ್ಬ ಬಾಲಕ ಸೇರಿ ಒಟ್ಟು ಏಳುಆರೋಪಿಗಳನ್ನು ಬಂಧಿಸಲಾಗಿದೆ.

‘ಗಲಭೆ ಸಂದರ್ಭದಲ್ಲಿ ಸಾಧುಗಳಾದ ಮಹಾಂತ್‌ ಕಲ್ಪವೃಕ್ಷ ಗಿರಿ (70), ಸುಶೀಲ್‌ ಗಿರಿ ಮಹಾರಾಜ್‌ (35) ಹಾಗೂ ಚಾಲಕ ನಿಲೇಶ್‌ ತೆಲ್ಗಡೆ (31) ಮೃತಪಟ್ಟಿದ್ದರು. ಈ ಪ್ರಕರಣದ ಆರೋಪದ ಮೇಲೆ, ಆರು ಪುರುಷರು ಮತ್ತು ಒಬ್ಬ ಬಾಲಕನನ್ನು ಬಂಧಿಸಿದ್ದೇವೆ. ಅವರನ್ನು ದಹನು ಪಟ್ಟಣದ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ಮೇ 19ರ ವರೆಗೆ ಪೊಲೀಸ್‌ ವಶದಲ್ಲಿ ಇರಿಸಲಾಗುವುದು’ ಎಂದು ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅತುಲ್‌ಚಂದ್ರ ಕುಲಕರ್ಣಿ ತಿಳಿಸಿದ್ದಾರೆ.

ಸಾಧುಗಳಿದ್ದ ಕಾರು ಸೂರತ್‌ನತ್ತ ತೆರಳುತ್ತಿದ್ದ ವೇಳೆ, ಗಡ್ಡಿಂಚಾಲೆ ಗ್ರಾಮದ ಜನರು ದಾಳಿ ನಡೆಸಿದ್ದರು.ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ ಪೊಲೀಸರ ತಡೆಯನ್ನು ಜನರು ಸುಲಭವಾಗಿ ಮೀರಿ ಗಲಭೆ ನಡೆಸಿರುವುದು ಮೊಬೈಲ್‌ಗಳಲ್ಲಿ ಸೆರೆಯಾಗಿರುವ ವಿಡಿಯೊಗಳಲ್ಲಿ ದಾಖಲಾಗಿದೆ. ಈ ಸಂಬಂಧ ಕೂಡಲೇ 101 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಬಂಧಿತರ ವಿರುದ್ಧ ನಮ್ಮ ಬಳಿ ಹಲವು ಸಾಕ್ಷ್ಯಗಳಿವೆ. ಅವುಗಳನ್ನು ದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕುಲಕರ್ಣಿ ಹೇಳಿದ್ದಾರೆ.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಾಗನಿಂದಸಿಐಡಿ ಪೊಲೀಸರುಇದುವರೆಗೆ 37 ಶಂಕಿತರನ್ನು ಬಂಧಿಸಿದ್ದಾರೆ.

ಏತನ್ಮಧ್ಯೆ ಗಡ್ಡಿಂಚಾಲೆ ಸುತ್ತಮುತ್ತಲಿನ ಗ್ರಾಮದ ಜನರು ಘಟನೆ ನಡೆದಾಗ ಸ್ಥಳದಲ್ಲಿದ್ದರು ಎಂಬ ಕಾರಣಕ್ಕೆ ಹಲವರನ್ನು ಬಂಧಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಬಂದನಕ್ಕೊಳಗಾಗಿರುವ ರುಸ್ತೊಮ್‌ ಎಂಬಾತನ ಸಹೋದರ‌ ಸಂದೀಪ್‌ ಬೋರ್ಸಾ ಎಂಬಾತ, ಘಟನೆ ನಡೆದಾಗ ತಮ್ಮ ಸಹೋದರ ಮನೆಯಲ್ಲಿ ಮಲಗಿದ್ದ ಎಂದು ಹೇಳಿದ್ದಾರೆ. ‘ನಿಜವಾಗಿಯೂ ಈ ಕೃತ್ಯವೆಸಗಿದವರು ಓಡಿಹೋಗಿದ್ದಾರೆ. ಬೇರೆಡೆ ಕೆಲಸ ಮಾಡುತ್ತಿರುವ ಅವರೆಲ್ಲ ಮನೆಗಳನ್ನು ಖಾಲಿ ಮಾಡಿದ್ದಾರೆ. ಹೊಡೆದಾಟದಲ್ಲಿ ಭಾಗಿಯಾದವವರು ಯಾರು ಎಂಬುದು ವಿಡಿಯೊಗಳಲ್ಲಿ ಸ್ಪಷ್ಟವಾಗಿದೆ’ ಎಂದಿದ್ದಾರೆ‌.

ಎಸ್‌ಪಿಗೆ ಕಡ್ಡಾಯ ರಜೆ ನೀಡಿದ್ದನ್ನು ವಿರೋಧಿಸಿ ಆನ್‌ಲೈನ್‌ ಚಳವಳಿ
ಪಾಲ್ಗರ್‌ ಎಸ್‌ಪಿ ಗೌರವ್‌ ಸಿಂಗ್‌ ಅವರನ್ನು ಏಕಾಏಕಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದು, ಇದರ ವಿರುದ್ಧ ಸ್ಥಳೀಯರು ಆನ್‌ಲೈನ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಐಪಿಎಸ್‌ ಅಧಿಕಾರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಆದೇಶಿಸಿರುವಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶ್‌ಮುಖ್‌ ಅವರಿಗೆಗಲಭೆ ಪ್ರಕರಣದೊಂದಿಗೆ ನಂಟು ಇದೆ ಎಂಬುದು ಪ್ರತಿಭಟನಾಕಾರರ ಆರೋಪ.

ಪಾಲ್ಗರ್‌ನಲ್ಲಿ ಜಿಮ್‌ ನಡೆಸುತ್ತಿರುವ ಸುಜಿತ್‌ ಸಿಂಗ್‌ ಮತ್ತು ಸಾಮಾಜಿಕ ಹೋರಾಟಗಾರ ಕರಣ್‌ ಚೌಧರಿ ಎನ್ನುವವರು ಈ ಹೋರಾಟಕ್ಕೆ ಕರೆ ನೀಡಿದ್ದಾರೆ. ಗೌರವ್ ಸಿಂಗ್‌ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಇತರ ನಾಯಕರಲ್ಲಿ ಮನವಿ ಮಾಡಿದ್ದಾರೆ.

change.org ವೆಬ್‌ಸೈಟ್‌ ಮೂಲಕ ಆರಂಭವಾಗಿರುವ ಈ ಹೋರಾಟವನ್ನು ಬೆಂಬಲಿಸಿ ಇದುವರೆಗೆ ಸುಮಾರು 400ಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT