ಗುರುವಾರ , ಡಿಸೆಂಬರ್ 12, 2019
17 °C

ದೊಂಬಿ ಹತ್ಯೆ ತಡೆಗೆ ವರದಿ ಸಲ್ಲಿಸಿದ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೊಂಬಿ ಹತ್ಯೆ ತಡೆಗೆ ಕಾನೂನು ರೂಪಿಸುವ ಸಲುವಾಗಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಚಿವರ ಗುಂಪಿಗೆ ವರದಿ ಸಲ್ಲಿಸಿದೆ.

ಕಾನೂನು ರೂಪಿಸುವ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವರ ಗುಂಪು ಈ ವರದಿಯ ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಗೃಹ ಸಚಿವರ ನೇತೃತ್ವದಲ್ಲಿ ಸಚಿವರ ಗುಂಪು ಮತ್ತು ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಯನ್ನು ರಚಿಸಿತ್ತು. ನಾಲ್ಕು ವಾರಗಳ ಒಳಗಾಗಿ ಶಿಫಾರಸು ಸಲ್ಲಿಸುವಂತೆ ಸಮಿತಿಗೆ ಗಡುವು ನೀಡಿತ್ತು.

ಗೃಹ ಸಚಿವರ ನೇತೃತ್ವದ ಈ ಸಮಿತಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್ ಕೂಡ ಇದ್ದಾರೆ.

ಕಳೆದ ಒಂದು ವರ್ಷದಲ್ಲಿ ಒಂಬತ್ತು ರಾಜ್ಯಗಳಲ್ಲಿ ಸುಮಾರು 40 ಜನರನ್ನು ಮಕ್ಕಳ ಕಳ್ಳರೆಂದು ಶಂಕಿಸಿ, ಗುಂಪು ದಾಳಿ ಮಾಡಿ ಹತ್ಯೆ ಮಾಡಿರುವ ಪ್ರಕರಣಗಳು ನಡೆದಿವೆ. ಇದರಿಂದಾಗಿ ಗುಂಪು ಹಲ್ಲೆ, ಹತ್ಯೆ ಹಾಗೂ ಹಿಂಸಾಚಾರ ತಡೆಯಲು ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು