ಸೋಮವಾರ, ಮೇ 23, 2022
30 °C

ಲೋಕಸಭೆಯ ಮುಂಗಾರು ಅಧಿವೇಶನ ಆರಂಭ: ಪ್ರತಿಪಕ್ಷಗಳಿಂದ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆಯ ಮುಂಗಾರು ಅಧಿವೇಶನ ಬುಧವಾರ ಬೆಳಿಗ್ಗೆ ಆರಂಭಗೊಂಡಿದೆ.

ಪ್ರಶ್ನೋತ್ತರ ಅವಧಿ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷಗಳ ಸಂಸದರು, ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ತೆಲುಗುದೇಶಂ ಪಕ್ಷದ ಸಂಸದರು ಸ್ಪೀಕರ್ ಪೀಠದ ಬಳಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು.

ಸುಗಮ ಕಲಾಪಕ್ಕೆ ಮೋದಿ ಮನವಿ: ಮುಂಗಾರು ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳನ್ನು ಒತ್ತಾಯಿಸಿದರು.

ಕಲಾಪದ ಆರಂಭಕ್ಕೂ ಮುನ್ನ ಸಂಸತ್‌ ಭವನದ ಬಳಿ ಮಾತನಾಡಿದ ಅವರು, ‘ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ವಿಷಯಗಳು ನಮ್ಮ ಮುಂದಿವೆ. ಎಲ್ಲ ಅನುಭವಿ ಸಂಸದರಿಂದ ಉತ್ತಮ ಸಲಹೆಗಳು ದೊರೆಯಲಿವೆ ಮತ್ತು ಈ ವಿಷಯಗಳ ಬಗ್ಗೆ ಚರ್ಚೆಯಾಗಲಿವೆ ಎಂಬ ಆಶಾವಾದವಿದೆ. ಸಂಸತ್ತಿನಲ್ಲಿ ತಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ನಾನು ಯಾವಾಗಲೂ ಎಲ್ಲರ ಬಗ್ಗೆಯೂ ಆಶಾವಾದ ಹೊಂದಿರುತ್ತೇನೆ. ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಯಾವುದೇ ಪಕ್ಷ ಅಥವಾ ನಾಯಕ ಯಾವುದೇ ವಿಷಯದ ಬಗ್ಗೆ ಮಾತನಾಡಲು ಬಯಸಿದರೆ ಅದನ್ನು ಸದನದಲ್ಲಿ ಚರ್ಚಿಸಬಹುದು. ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ’ ಎಂದು ಮೋದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು