ಇದು ಸಂಸತ್ತು, ಬಿಜೆಪಿಯ ಕಚೇರಿಯಲ್ಲ

7
ಎನ್‌ಆರ್‌ಸಿ ಚರ್ಚೆ ಮಧ್ಯೆ ಎಂಎಸ್‌ಪಿ ಮಾತು ಆರಂಭಿಸಿದ ಅಮಿತ್ ಷಾಗೆ ಟಿಎಂಸಿ ತರಾಟೆ

ಇದು ಸಂಸತ್ತು, ಬಿಜೆಪಿಯ ಕಚೇರಿಯಲ್ಲ

Published:
Updated:

ನವದೆಹಲಿ: ‘ಇದು ಸಂಸತ್ತು. ಬಿಜೆಪಿಯ ಅಧ್ಯಕ್ಷರಷ್ಟೇ ಮಾತನಾಡಲು ಇದು ಆ ಪಕ್ಷದ ಕಚೇರಿ ಅಲ್ಲ’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸದಸ್ಯ ಡೆರೆಕ್ ಒಬ್ರಿಯಾನ್ ರಾಜಸ್ಯಸಭೆಯಲ್ಲಿ ಕಿಡಿಕಾರಿದರು.

ರಾಜ್ಯಸಭೆಯಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ –ಎನ್‌ಆರ್‌ಸಿ’ ಬಗ್ಗೆ ನಡೆಯುತ್ತಿದ್ದ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿ, ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮಾತು ಆರಂಭಿಸುತ್ತಿದ್ದಂತೆ ಟಿಎಂಸಿ ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದರು.

‘ರೈತರ ಸಮಸ್ಯೆ ಬಗ್ಗೆ ನಾನು ಮಾತನಾಡಲು ನೀವು ಅಡ್ಡಿ ಮಾಡುತ್ತಿದ್ದೀರಿ’ ಎಂದು ಅಮಿತ್ ಷಾ ಅಸಮಾಧಾನ ವ್ಯಕ್ತಪಡಿಸಿದರು. 

ಇದರಿಂದ ಕೆರಳಿದ ಟಿಎಂಸಿ ಸದಸ್ಯರು ಷಾ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಸಂಸತ್ತನ್ನು ಬಿಜೆಪಿಯು ತನ್ನ ಹಿತ್ತಲಿನಂತೆ ಬಳಸಿಕೊಳ್ಳಲು ನಾವು ಬಿಡುವುದಿಲ್ಲ.‌ ಅಮಿತ್ ಷಾ ಮಾತನಾಡಲೇಬೇಕು ಎಂದಿದ್ದರೆ, ಅವರ ವೈಭವೋಪೇತವಾದ ಪಕ್ಷದ ಕಚೇರಿಗೆ ಹೋಗಿ ಮಾತನಾಡಲಿ. ಎನ್‌ಆರ್‌ಸಿ ಬಗ್ಗೆ ಸಂಸತ್ತಿನಲ್ಲಿ ನಾವು ಗೃಹ ಸಚಿವರ ಪ್ರತಿಕ್ರಿಯೆ ಬಯಸುತ್ತಿದ್ದೇವೆ’ ಎಂದು ಒಬ್ರಿಯಾನ್ ಹೇಳಿದರು.

‘ನಿಮಗೆ ಪ್ರತಿಕ್ರಿಯೆ ನೀಡಲು ಗೃಹಸಚಿವರು ಮೂರು ದಿನಗಳಿಂದ ಕಾಯುತ್ತಿದ್ದಾರೆ. ಆದರೆ ಅವರು ಮಾತನಾಡಲು ನೀವುಗಳೇ ಅವಕಾಶ ನೀಡುತ್ತಿಲ್ಲ. ಟಿಎಂಸಿ ಮತ್ತು ಕಾಂಗ್ರೆಸ್‌ ರೈತ ವಿರೋಧಿ ಪಕ್ಷಗಳು’ ಎಂದು ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದರು.

ಸಭಾಪತಿ ವೆಂಕಯ್ಯ ನಾಯ್ಡು ಸಹ ಟಿಎಂಸಿ ಸದಸ್ಯರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ನಿಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ನಂತರವೂ, ನೀವು ಗೃಹ ಸಚಿವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಆ ಮೂಲಕ ನೀವು ಗೃಹ ಸಚಿವರಿಗೆ ಅನ್ಯಾಯ ಮಾಡಿದ್ದೀರಿ’ ಎಂದರು. ‘ನಿಮ್ಮದು ಪ್ರತಿ ದಿನ ಇದೇ ಆಯಿತು. ಕಲಾಪ ನೇರಪ್ರಸಾರವಾಗಬೇಕು. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ದೇಶವೆಲ್ಲಾ ನೋಡಲಿ. ರೈತರ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯುವುದು ನಿಮಗೆ ಬೇಕಿಲ್ಲ’ ಎಂದು ಅವರು ಕಿಡಿ ಕಾರಿದರು.

ಗೃಹ ಸಚಿವರ ಪ್ರತಿಕ್ರಿಯೆಗೆ ಆಗ್ರಹಿಸಿ ಟಿಎಂಸಿ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ ಕಾರಣ ರಾಜ್ಯಸಭೆಯಲ್ಲಿ ಇಡೀ ದಿನ ಯಾವುದೇ ಕಲಾಪ ನಡೆಯಲಿಲ್ಲ. ಮಧ್ಯಾಹ್ನ ಅಮಿತ್ ಷಾ ಮಾತು ಆರಂಭಿಸುತ್ತಿದ್ದಂತೆ ಪ್ರತಿಭಟನೆ ತೀವ್ರವಾಯಿತು. ಹೀಗಾಗಿ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !