ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಢಚರ್ಯೆ: ಜಿಲ್ಲೆಗೂ ವಿಸ್ತರಣೆ

ಭಯೋತ್ಪಾದನೆ ತಡೆ ಕಾರ್ಯತಂತ್ರಕ್ಕೆ ಬಲ ತುಂಬಲು ಸಂಸದೀಯ ಸಮಿತಿ ಸಲಹೆ
Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ತಡೆ ಕಾರ್ಯತಂತ್ರಕ್ಕೆ ಇನ್ನಷ್ಟು ಬಲ ತುಂಬಲು ನಿರ್ಧರಿಸಲಾಗಿದೆ. ವಿವಿಧ ಸಂಸ್ಥೆಗಳಿಗೆ ಗುಪ್ತಚರ ಮಾಹಿತಿಯನ್ನು ನೀಡುವ ಬಹು ಸಂಸ್ಥೆ ಕೇಂದ್ರದ (ಎಂಎಸಿ) ಕಾರ್ಯಾಚರಣೆಯನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸುವ ಚಿಂತನೆ ನಡೆದಿದೆ. ಈಗ ಈಸಂಸ್ಥೆಯು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಗುಪ್ತಚರ ಮಾಹಿತಿ ಸಂಗ್ರಹದಲ್ಲಿ ರಾಜ್ಯಗಳ ಪಾತ್ರವನ್ನು ಬಲಪಡಿಸುವ ಉದ್ದೇಶವೂ ಈ ಕ್ರಮದ ಹಿಂದೆ ಇದೆ.

ಕಾರ್ಗಿಲ್‌ ಸಂಘರ್ಷದ ನಂತರ ರಾಷ್ಟ್ರ ಮಟ್ಟದಲ್ಲಿ ಎಂಎಸಿಯನ್ನು ಸ್ಥಾಪಿಸಲಾಗಿತ್ತು. ಇದರ ಕೇಂದ್ರ ಕಚೇರಿಯು ದೆಹಲಿಯಲ್ಲಿದೆ. ಎಲ್ಲ ರಾಜಧಾನಿಗಳಲ್ಲಿ ರಾಜ್ಯ ಮಟ್ಟದ ಎಂಎಸಿಗಳಿವೆ. ಸಂಗ್ರಹವಾಗಿರುವ ಗುಪ್ತಚರ ಮಾಹಿತಿಯನ್ನು ವಿಶ್ಲೇಷಿಸುವುದಕ್ಕಾಗಿ ಸಂಸ್ಥೆಯು ಪ್ರತಿ ದಿನವೂ ಸಭೆ ನಡೆಸುತ್ತದೆ.

ಗುಪ್ತಚರ ಬ್ಯೂರೊದ (ಐ.ಬಿ) ನೇತೃತ್ವದಲ್ಲಿ ಎಂಎಸಿ ಕೆಲಸ ಮಾಡುತ್ತದೆ. ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಗುಪ್ತಚರ ಮಾಹಿತಿ ವಿಶ್ಲೇಷಣೆ ನಡೆಯುತ್ತದೆ. ಜಿಲ್ಲೆಗಳನ್ನು ಹಂತ ಹಂತವಾಗಿ ಎಂಎಸಿ ಜಾಲಕ್ಕೆ ಸೇರಿಸುವ ಕೆಲಸವನ್ನು ಐ.ಬಿ. ಮಾಡಲಿದೆ.

ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ವರದಿಯಲ್ಲಿ ಈ ಮಾಹಿತಿ ಇದೆ. ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ನ ಆನಂದ್‌ ಶರ್ಮಾ ಅಧ್ಯಕ್ಷತೆಯ ಸಮಿತಿಯು ವರದಿಯನ್ನು ಸಂಸತ್ತಿನಲ್ಲಿ ಗುರುವಾರ ಮಂಡಿಸಿದೆ.

ಕಳೆದ ವರ್ಷಗಳಲ್ಲಿ ಎಂಎಸಿಗೆ ರಾಜ್ಯಗಳಿಂದ ದೊರೆಯುತ್ತಿರುವ ಮಾಹಿತಿ ಬಹಳ ಕಡಿಮೆ ಎಂದು ಐ.ಬಿ. ನಿರ್ದೇಶಕ ಅರವಿಂದ ಕುಮಾರ್‌ ಅವರು ಸಮಿತಿಗೆ ತಿಳಿಸಿದ್ದಾರೆ. ಭಯೋತ್ಪಾದನೆ ತಡೆ ಕಾರ್ಯಾಚರಣೆಯಲ್ಲಿ ಎಂಎಸಿಯ ಪಾತ್ರ ನಿರ್ಣಾಯಕ ಎಂದಿದ್ದಾರೆ.

ಇತರ ರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾತ್ರ ರಾಜ್ಯಗಳು ಎಂಎಸಿ ಜತೆಗೆ ಹಂಚಿಕೊಳ್ಳುತ್ತಿವೆ. ರಾಜ್ಯಗಳ ಕೆಲವು ಸಂಸ್ಥೆಗಳು ತಾವು ಸಂಗ್ರಹಿಸಿದ ಗುಪ್ತಚರ ಮಾಹಿತಿಯನ್ನು ಎಂಎಸಿ ಜತೆಗೆ ಹಂಚಿಕೊಳ್ಳುವುದಕ್ಕೆ ಹಿಂಜರಿದ ನಿದರ್ಶನಗಳೂ ಇವೆ ಎಂದೂ ಅರವಿಂದ ಅವರು ಸಮಿತಿಗೆ ತಿಳಿಸಿದ್ದಾರೆ.

ಕೇಂದ್ರದ ಎಂಎಸಿ ಮತ್ತು ರಾಜ್ಯದ ಎಂಎಸಿಗಳ ನಡುವಣ ಸಭೆಯಲ್ಲಿ, ಕಳೆದ 24 ತಾಸುಗಳಲ್ಲಿ ಸಂಗ್ರಹವಾದ ಮಾಹಿತಿಯ ಆಧಾರದಲ್ಲಿ ಏನು ಕಾರ್ಯಾಚರಣೆ ನಡೆಸಬೇಕು ಎಂಬುದು ನಿರ್ಧಾರವಾಗುತ್ತದೆ. ಯಾವುದೇ ಬೆದರಿಕೆ ಬಗ್ಗೆ ನಿರ್ದಿಷ್ಟ ಮಾಹಿತಿ ದೊರೆತಾಗ ಅದರ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳ ನಡುವೆ ಮಾತ್ರ ಚರ್ಚೆ ನಡೆಯುತ್ತದೆ.

ಸಮನ್ವಯದ ಸಮಸ್ಯೆ

ಐ.ಬಿ. ರಾ, ಸೇನೆ ಮತ್ತು ಇತರ ಸಂಸ್ಥೆಗಳು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುತ್ತವೆ. ಈ ಮಾಹಿತಿಯನ್ನು ಸಮನ್ವಯಗೊಳಿಸಿ, ಅದರ ಆಧಾರದಲ್ಲಿ ಕ್ರಮ ಕೈಗೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಸಂಸದೀಯ ಸಮಿತಿಯು ಹೇಳಿದೆ.

ಸಮನ್ವಯದ ಕೊರತೆ ಮತ್ತು ಗುಪ್ತಚರ ಸಂಸ್ಥೆಗಳ ನಡುವಣ ಅಪನಂಬಿಕೆಯಿಂದಾಗಿ ಭಯೋತ್ಪಾದನೆ ತಡೆಗೆ ಸಕಾಲದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದದ್ದಿದೆ. ಹಾಗಾಗಿ, ಸಮನ್ವಯದ ಹೊಣೆಯನ್ನು ಕೇಂದ್ರ ಗೃಹ ಸಚಿವಾಲಯ ವಹಿಸಿಕೊಳ್ಳಬೇಕು ಎಂದು ಸಮಿತಿಯು ಸಲಹೆ ಮಾಡಿದೆ.

ಗುಪ್ತಚರ ಸಂಸ್ಥೆಗಳು ಜಿಲ್ಲೆ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಮನ್ವಯ ಮತ್ತು ಸಹಕಾರವನ್ನು ಹೆಚ್ಚಿಸಬೇಕು. ಅಷ್ಟೇ ಅಲ್ಲದೆ, ಮಿತ್ರ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳ ಜತೆಗೆ ಉತ್ತಮ ಬಾಂಧವ್ಯ ಸ್ಥಾಪಿಸಬೇಕು. ಪರಸ್ಪರ ಸಹಕಾರದ ತತ್ವವನ್ನು ಅನುಸರಿಸಬೇಕು ಎಂದೂ ಸಮಿತಿಯು ಹೇಳಿದೆ.

*28 ಸಂಸ್ಥೆಗಳು ಎಂಎಸಿಯ ಭಾಗವಾಗಿವೆ

*ಭಯೋತ್ಪಾದನೆ ತಡೆ ಕೆಲಸದಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೂ ಎಂಎಸಿ ಸದಸ್ಯತ್ವ ಇದೆ

*ರಾಜ್ಯದಲ್ಲಿ ರಾಜ್ಯ ಮಟ್ಟದ ಎಂಎಸಿ
ಕಾರ್ಯನಿರ್ವಹಿಸುತ್ತಿದೆ

*ಎಂಎಸಿಯ ವಾರದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸುತ್ತಾರೆ

*ಎಂಎಸಿಗೆ ಸಂಬಂಧಿಸಿ ತ್ರೈಮಾಸಿಕ ಸಭೆಯನ್ನೂ ಐ.ಬಿ. ನಡೆಸುತ್ತದೆ. ಇದರಲ್ಲಿ, ಸೇನಾ ಗುಪ್ತಚರ ವಿಭಾಗದ ಮಹಾ ನಿರ್ದೇಶಕರುಭಾಗವಹಿಸುತ್ತಾರೆ. ಈ ಸಭೆಯು ಗಡಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT