ಈಗ ಘಟಬಂಧನ್ ಎನ್ನುವವರು ಸಮಯ ಕಾದು ಎನ್‌ಡಿಎಗೆ ಬರ್ತಾರೆ: ರಾಮ್‌ ಮಾಧವ್

7

ಈಗ ಘಟಬಂಧನ್ ಎನ್ನುವವರು ಸಮಯ ಕಾದು ಎನ್‌ಡಿಎಗೆ ಬರ್ತಾರೆ: ರಾಮ್‌ ಮಾಧವ್

Published:
Updated:

ನವದೆಹಲಿ: ಈಗ ಮಹಾಘಟಬಂಧನ ಎಂದು ಒಗ್ಗೂಡುತ್ತಿರುವ ಪಕ್ಷಗಳು ಲೋಕಸಭೆ ಚುನಾವಣೆ ಮುಗಿದ ಬಳಿಕೆ ಮತ್ತು ಎನ್‌ಡಿಎ ತೆಕ್ಕೆಗೆ ಮರಳಲಿವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಿಶ್ಲೇಷಿಸಿದರು.

ಈ ಹಿಂದೆ ಎನ್‌ಡಿಎ ಭಾಗವಾಗಿದ್ದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಹೊಸ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ರಾಮ್ ಮಾಧವ್ ಅವರ ಮಾತಿಗೂ ಇದೇ ಕಾರಣಕ್ಕೆ ವಿಶೇಷ ಅರ್ಥ ಬಂದಿದೆ.

ಪತ್ರಕರ್ತೆ ಪತ್ರಿಯಾ ಸೆಹ್ಗಾಲ್ ಅವರ ಪುಸ್ತಕ ‘ದಿ ಕಂಟೆಂಡರ್ಸ್: ಹೂ ವಿಲ್ ಲೀಡ್ ಇಂಡಿಯಾ ಟುಮಾರೊ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಹಾಘಟಬಂಧನ್‌ನ ಪ್ರಯತ್ನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇಂದು ಒಂದು ಪಕ್ಷ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಎನ್ನಬಹುದು. ಆದರೆ ನಾಳೆ ವಿಚ್ಛೇದನ ಆಗಬಾರದು ಎಂದೇನೂ ಇಲ್ಲವಲ್ಲ. ಇಂದು ನಮ್ಮ ಪ್ರಬಲ ವಿರೋಧಿಗಳು ಎನಿಸಿಕೊಂಡಿರುವವರು ನಾಳೆ ನಮ್ಮ ಪರವಾಗಿ ನಿಲ್ಲಬಹುದು’ ಎಂದು ರಾಮ್ ಮಾಧವ್ ವಿಶ್ಲೇಷಿಸಿದರು. 

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ರಾಜಸ್ಥಾನದ ಕಾಂಗ್ರೆಸ್ ಮುಖ್ಯಸ್ಥ ಸಚಿನ್ ಪೈಲಟ್ ಮತ್ತು ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ ಯಾರೊಬ್ಬರೂ ಮಾಧವ್ ಅವರ ವಿಶ್ಲೇಷಣೆಗೆ ಪ್ರತಿಕ್ರಿಯಿಸಲು ಮುಂದಾಗಲಿಲ್ಲ.

‘ಮಾಧವ್ ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, 2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮೋದಿ ಅವರಿಗೆ ಇತರ ಪಕ್ಷಗಳ ಸಹಕಾರ ಬೇಕಿದೆ ಎನಿಸುತ್ತದೆ. ಮೋದಿ ಅಸಹಾಯಶೂರ ಎಂದು ಹಲವು ಹೇಳುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ಅಂಥ ವಾತಾವರಣ ಇಲ್ಲ’ ಎಂದು ಒಮರ್ ಅಬ್ದುಲ್ ಹೇಳಿದರು.

ಪ್ರಧಾನಿಯಾಗುವ ಆಸೆ ನನಗಿಲ್ಲ

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ನಾಯಕ ಅಖಿಲೇಶ್ ಯಾದವ್, ‘ನನಗೆ ಪ್ರಧಾನಿಯಾಗುವ ಆಸೆಯಿಲ್ಲ. ಉತ್ತರ ಪ್ರದೇಶದಲ್ಲಿಯೇ ಇರಲು ನನಗಿಷ್ಟ’ ಎಂದು ಘೋಷಿಸುವ ಮೂಲಕ ತಮ್ಮ ಪಕ್ಷದ ಪಾರಂಪರಿಕ ವೈರಿ ಮತ್ತು ಪ್ರಸ್ತುತ ಮಿತ್ರಪಕ್ಷವಾಗಿರುವ ಬಹುಜನ್ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಆಕಾಂಕ್ಷೆಗೆ ಹಸಿರು ಬಾವುಟ ತೋರಿದರು.

‘ಪ್ರಧಾನಿಯಾಗುವ ಆಸೆ ಇರುವ ಯಾರೇ ಆದರೂ ಉತ್ತರ ಪ್ರದೇಶದಿಂದಲೇ ಸ್ಪರ್ಧಿಸಬೇಕು’ ಎಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗಿನ ಮೈತ್ರಿಯ ಒಲವನ್ನೂ ಬಿಂಬಿಸಿಕೊಂಡರು.

‘ಮಹಾಘಟಬಂಧನ್ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರದ ಚಂದ್ರಬಾಬು ನಾಯ್ಡು ಅವರಿಂದ ಕಲಿಯುವುದು ಸಾಕಷ್ಟಿದೆ. ಅವರು ಎನ್‌ಡಿಎ ತೆಕ್ಕೆಯಿಂದ ಬೇಗನೇ ಕಳಚಿಕೊಂಡು ಹೊಸ ಗೆಳೆಯರನ್ನು ಸಂಪಾದಿಸಲು ಯತ್ನಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪ್ರಧಾನಿಯಾಗುವ ಹಿಂದೆ ಅನೇಕ ಸಂಗತಿಗಳು ಕೆಲಸ ಮಾಡುತ್ತವೆ. ರಾಜಕಾರಣದಲ್ಲಿ ಉಳಿಯಲು ಪ್ರಧಾನಿಯಾಗುವ ಆಸೆಯೊಂದನ್ನೇ ದೃಷ್ಟಿಯಲ್ಲಿರಿಸಿಕೊಳ್ಳುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ನ ಸಚಿನ್ ಪೈಲಟ್ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !