ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸೋಪಾನ

ರಾಷ್ಟ್ರೀಯ ಟೆನಿಸ್‌ ಟೂರ್ನಿ ಉದ್ಘಾಟಿಸಿದ ಲೆಫ್ಟಿನಂಟ್‌ ಕರ್ನಲ್‌ ಸಿ.ಎಂ. ಅಪ್ಪಣ್ಣ
Last Updated 22 ಮೇ 2018, 8:09 IST
ಅಕ್ಷರ ಗಾತ್ರ

ದಾವಣಗೆರೆ: ಟೆನಿಸ್‌ ಞಸೇರಿ ಎಲ್ಲ ಕ್ರೀಡೆಗಳೂ ವ್ಯಕ್ತಿತ್ವ ನಿರ್ಮಾಣಕ್ಕೆ ಇರುವ ಮೆಟ್ಟಿಲುಗಳಾಗಿವೆ ಎಂದು ನಂ.3 ಎಂಜಿನಿಯರಿಂಗ್‌ ಬೆಟಾಲಿಯನ್‌ನ ಲೆಫ್ಟಿನಂಟ್‌ ಕರ್ನಲ್‌ ಸಿ.ಎಂ. ಅಪ್ಪಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಟೆನಿಸ್‌ ಸಂಸ್ಥೆ ಜಿಲ್ಲಾ ಟೆನಿಸ್‌ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಐದು ದಿನಗಳ ಪುರುಷರ ಮತ್ತು ಮಹಿಳೆಯರ ‘50 ಕೆ’ ಟೆನಿಸ್‌ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡೆಯನ್ನು ಬರಿ ಆಟ ಎಂದು ಪರಿಗಣಿಸಬಾರದು. ಇದು ನಿಮ್ಮ ವ್ಯಕ್ತಿತ್ವ, ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮಗೆ ಒಂದು ತಂಡವಾಗಿ ಕಾರ್ಯನಿರ್ವಹಿಸುವ ಕೌಶಲ, ಕ್ರೀಡಾ ಮನೋಭಾವವನ್ನು ಕಲಿಸಿಕೊಡುತ್ತದೆ’ ಎಂದು ಹೇಳಿದರು.

‘ಕ್ರೀಡೆಯು ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಇಂದು ‘ಆರೋಗ್ಯವೇ ಭಾಗ್ಯ’ವಾಗಿದೆ. ನೀವು ಆರೋಗ್ಯವಂತರಾಗಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಕ್ರೀಡಾ ರಂಗದಲ್ಲಿ ನೀವು ಬೆಳೆಯುವುದರ ಜೊತೆಯಲ್ಲೇ ವೈಯಕ್ತಿಕವಾಗಿಯೂ ನಿಮ್ಮ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ’ ಎಂದು ಅಪ್ಪಣ್ಣ ಅಭಿಪ್ರಾಯಪಟ್ಟರು.

‘ದಾವಣಗೆರೆ ಇಂದು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿಗೆ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಲವು ಪ್ರತಿಭಾವಂತ ಕ್ರೀಡಾಪಟುಗಳು ಇರುವುದನ್ನು ನೋಡಿದ್ದೇನೆ. ಕ್ರೀಡಾ ಕ್ಷೇತ್ರದಲ್ಲಿನ ಬೆಳವಣಿಗೆಗೆ ಇಲ್ಲಿ ವಿಪುಲ ಅವಕಾಶಗಳಿವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಟೆನಿಸ್‌ ಸಂಸ್ಥೆಯ ನಿರ್ದೇಶಕ ಡಾ. ಬಿ.ಎಸ್‌. ಕರ್ಜಗಿ, ‘ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಏರ್ಪಿಡಿಸುವ ಮೂಲಕ ದೇಶದಲ್ಲಿ ದಾವಣಗೆರೆಯೂ ಟೆನಿಸ್‌ ಕೇಂದ್ರವಾಗಿ ಬೆಳೆಯುತ್ತಿದೆ. ಹೊರ ರಾಜ್ಯಗಳಿಗೆ ಹೋದಾಗ ದಾವಣಗೆರೆಯಲ್ಲಿ ಯಾವಾಗ ಟೂರ್ನಿ ಆಯೋಜಿಸುತ್ತೀರಿ ಎಂದು ಕ್ರೀಡಾಪಟುಗಳು ಆತ್ಮೀಯತೆಯಿಂದ ನಮ್ಮನ್ನು ಕೇಳುತ್ತಿದ್ದಾರೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಟೆನಿಸ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ, ‘2002ರಲ್ಲಿ ನಮ್ಮ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಇದುವರೆಗೆ ಎರಡು ಅಂತರರಾಷ್ಟ್ರೀಯ ಮಟ್ಟದ ಟೂರ್ನಿ, ಒಂದು ರಾಷ್ಟ್ರೀಯ ಟೂರ್ನಿಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದ್ದೇವೆ. ಇದು ಎರಡನೇ ರಾಷ್ಟ್ರೀಯ ಟೂರ್ನಿಯಾಗಿದೆ. ಮುಂಬೈ ಹಾಗೂ ತ್ರಿವೇಂಡ್ರಂನಲ್ಲಿ ಇದೇ ಸಮಯದಲ್ಲಿ ರಾಷ್ಟ್ರೀಯ ಟೂರ್ನಿ ನಡೆಯುತ್ತಿರುವುದರಿಂದ ಇಲ್ಲಿಗೆ ಉತ್ತರ ಭಾರತದ ಕ್ರೀಡಾಪಟು ಕಡಿಮೆ ಪ್ರಮಾಣದಲ್ಲಿ ಬಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಎಚ್‌.ಎಲ್‌. ಸುಬ್ಬಾರಾವ್‌ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ರಘುನಂದನ್‌ ಅಂಬರಕರ್‌, ಸಂಸ್ಥೆಯ ನಿರ್ದೇಶಕ ನಂದಗೋಪಾಲ ಜಿ.ಇ ಅವರೂ ಇದ್ದರು.

ಕರ್ನಾಟಕ, ತಮಿಳುನಾಡು, ಆಂಧ್ರಪದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಒಟ್ಟು 70 ಪುರುಷ ಹಾಗೂ 20 ಮಹಿಳಾ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT