ದುರಂತೊ ಎಕ್ಸ್‌ಪ್ರೆಸ್‌ನಲ್ಲಿ ಹಳಸಿದ ಆಹಾರ ವಿತರಣೆ: ಪ್ರಯಾಣಿಕರ ಆಕ್ರೋಶ

7

ದುರಂತೊ ಎಕ್ಸ್‌ಪ್ರೆಸ್‌ನಲ್ಲಿ ಹಳಸಿದ ಆಹಾರ ವಿತರಣೆ: ಪ್ರಯಾಣಿಕರ ಆಕ್ರೋಶ

Published:
Updated:

ಸಿಕಂದರಾಬಾದ್‌: ಮುಂಬೈನಿಂದ ಹೈದರಾಬಾದ್‌ಗೆ ದುರಂತೊ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಒಂದು ತಿಂಗಳ ಹಿಂದೆಯೇ ದಿನಾಂಕ ಮುಗಿದಿರುವ(ಎಕ್ಸ್‌ಪೈರ್‌ ಡೇಟ್‌) ಬಿಸ್ಕೆಟ್‌, ಟೀ ಬ್ಯಾಗ್‌ ಹಾಗೂ ಇನ್ನಿತರ ತಿನಿಸುಗಳ ಪೊಟ್ಟಣಗಳನ್ನು ವಿತರಿಸಿರುವುದು ಬೆಳಕಿಗೆ ಬಂದಿದೆ.

ರುಚಿ ಕಳೆದುಕೊಂಡಿದ್ದ ಟೀ ಬ್ಯಾಗ್‌ ಹಾಗೂ ತೇವಾಂಶದಿಂದ ಕೂಡಿದ್ದ ಬಿಸ್ಕೆಟ್‌ ಸೇವಿಸಿದ ಪ್ರಯಾಣಿಕರು ರೈಲ್ವೆ ಇಲಾಖೆಯ ಕ್ಯಾಟರಿಂಗ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸರಿಯಾಗಿ ಪ್ರತಿಕ್ರಿಯಿಸಲು ಸಿಬ್ಬಂದಿ ವಿಫಲವಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ದೇವಾನ್ಶ್‌ ದಮಾನಿ ಎನ್ನುವವರು ಭಾರತೀಯ ರೈಲ್ವೆ ಆಹಾರ ವಿತರಣೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.

12 ಗಂಟೆಗಳ ಕಾಲ ಸುಮಾರು 773 ಕಿ.ಮೀ. ಸಂಚರಿಸುವ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕ್ಯಾಟರಿಂಗ್‌ ಸೇವೆಗಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಮುಂಬೈನಲ್ಲಿರುವ ಲೋಕಮಾನ್ಯ ತಿಲಕ್‌ ಟರ್ಮಿನಲ್‌ನಿಂದ ಬುಧವಾರ ರಾತ್ರಿ 11.05ರ ವೇಳೆಗೆ ರೈಲು ಪ್ರಯಾಣ ಆರಂಭಿಸಿತ್ತು.

‘ನಾನು ದುರಂತೊ ಎಕ್ಸ್‌ಪ್ರೆಸ್‌ ರೈಲಿನ B7 ಕೋಚ್‌ನಲ್ಲಿದ್ದೆ. ಉಪಹಾರಕ್ಕಾಗಿ ಟೀ ಜೊತೆ ಬಿಸ್ಕೆಟ್‌ ಪೊಟ್ಟಣಗಳನ್ನು ವಿತರಿಸಿದಾಗ ಎಲ್ಲ ಪ್ರಯಾಣಿಕರಂತೆ ನಾನೂ ಅಚ್ಚರಿಗೊಳಗಾದೆ. ನವೆಂಬರ್‌ ತಿಂಗಳಲ್ಲಿಯೇ ದಿನಾಂಕ ಮುಗಿದಿರುವ ಬಿಸ್ಕೆಟ್‌ ಅನ್ನು ವಿತರಿಸಲಾಗಿದೆ. ಪ್ರಯಾಣಕ್ಕಾಗಿ ನಾನು 3,690 ರೂಪಾಯಿಯನ್ನು ಪಾವತಿಸಿದ್ದೇನೆ. ಐಆರ್‌ಸಿಟಿಸಿ ಕನಿಷ್ಟ ಗುಣಮಟ್ಟದ ಆಹಾರವನ್ನಾದರೂ ವಿತರಿಸಲು ಐಆರ್‌ಸಿಟಿಸಿ ವಿಫಲವಾಗಿದೆ’ ಎಂದು ದಮಾನಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಯಾಣಿಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ತಿನಿಸುಗಳನ್ನು ರೈಲಿನಲ್ಲಿ ವಿತರಿಸಲಾಗಿದೆ. ವಿಷಯವನ್ನು ಸಿಬ್ಬಂದಿಯೊಬ್ಬರ ಗಮನಕ್ಕೆ ತಂದಾಗ ಐಆರ್‌ಸಿಟಿಸಿಯ ಸಿಕಂದರಾಬಾದ್‌ ಕಚೇರಿಗೆ ದೂರು ನೀಡುವಂತೆ ಸೂಚಿಸಿದರು’ ಎಂದು ಮತ್ತೊಬ್ಬ ಪ್ರಯಾಣಿಕ ಸಮೀರ್‌ ಸನಾ ಬೇಸರ ವ್ಯಕ್ತಪಡಿಸಿದರು.

ದುರಂತೊ, ರಾಜಧಾನಿ, ಶತಾಬ್ದಿ ಮುಂತಾದ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಕೈಗೆಟುಕುವ ದರದಲ್ಲಿ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡುವಂತೆ ಪ್ರಯಾಣಿಕರನ್ನು ಆಕರ್ಷಿಸಲು ಭಾರತೀಯ ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಇದೇ ವೇಳೆ ಇಂತಹ ಘಟನೆಗಳು ವರದಿಯಗಿರುವುದು ಇಲಾಖೆ ಪ್ರಯತ್ನದ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡಲಿವೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ ಅಧಿಕಾರಿಯೊಬ್ಬರು ಹೆಸರು ಹೇಳಲು ನಿರಾಕರಿಸಿ, ‘ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !