ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ತನಿಖೆ ಬೆದರಿಕೆಗೆ ಜಗ್ಗುವುದಿಲ್ಲ –ಪವಾರ್

ಪೊಲೀಸ ಮನವಿ ಬಳಿಕ ಇ.ಡಿ ಕಚೇರಿಗೆ ಭೇಟಿ ಕೈಬಿಟ್ಟ ಎನ್‌ಸಿಪಿ ಅಧ್ಯಕ್ಷ
Last Updated 27 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಚೇರಿಗೆ ಸದ್ಯಕ್ಕೆ ಭೇಟಿ ನೀಡುವುದಿಲ್ಲ. ಆದರೆ, ತನಿಖಾ ಸಂಸ್ಥೆಗಳ ಮೂಲಕ ಹಾಕುವ ಬೆದರಿಕೆಗೆ ಮಣಿಯುವುದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿದ್ದಾರೆ.

ಪವಾರ್ ಹೇಳಿಕೆಯಿಂದ ಪೊಲೀಸರು, ಸಾರ್ವಜನಿಕರಲ್ಲಿ ಸಮಾಧಾನ ಮೂಡಿಸಿದೆ. ಇದಕ್ಕೂ ಮುನ್ನ ಪವಾರ್ ನಿವಾಸಕ್ಕೆ ಭೇಟಿ ನೀಡಿದ್ದ ಮುಂಬೈ ಪೊಲೀಸ್ ಕಮಿಷನರ್‌ ಸಂಜಯ್‌ ಬಾರ್ವೆ, ‘ಕಾನೂನು ಸ್ಥಿತಿ ಹದಗೆಡುವ ಸ್ಥಿತಿ ಇದೆ. ಸದ್ಯ ಭೇಟಿ ನೀಡಬೇಡಿ’ ಎಂದು ಕೋರಿದ್ದರು.

ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನ ಹಣ ವರ್ಗಾವಣೆ ಪ್ರಕರಣದಲ್ಲಿ ಪವಾರ್‌ ಅವರ ಹೆಸರು ಉಲ್ಲೇಖವಾಗಿದೆ. ಇ.ಡಿ ಈ ಬಗ್ಗೆ ಇನ್ನೂ ಸಮನ್ಸ್‌ ಜಾರಿ ಮಾಡಿಲ್ಲ. ಆದರೂ, ‘ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಭೇಟಿ ನೀಡುತ್ತೇನೆ’ ಎಂದು ಪವಾರ್‌ ಪ್ರಕಟಿಸಿದ್ದರು.

‘ನಾನು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸಾರ್ವಜನಿಕವಾಗಿ ಮೂಡುವುದು ಬೇಡ. ಇ.ಡಿ ಕಚೇರಿಗೆ ಸ್ವಯಂ ತೆರಳುತ್ತೇನೆ. ತನಿಖೆಗೆ ಅಗತ್ಯ ಸಹಕಾರ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದ್ದರು.

‘ನನ್ನಿಂದ ಯಾವುದೇ ರೀತಿಯ ತಪ್ಪು ಆಗಿಲ್ಲ. ಸಹಕಾರ ಬ್ಯಾಂಕ್‌ ಜೊತೆಗೆ ನನಗೆ ಯಾವುದೇ ಸಂಬಂಧವಿಲ್ಲ’ ಎಂದೂ 78 ವರ್ಷ ವಯಸ್ಸಿನ ಪವಾರ್‌ ಸ್ಪಷ್ಟಪಡಿಸಿದರು.

ಕಚೇರಿಗೆ ಭೇಟಿ ನೀಡುವುದಾಗಿ ಪವಾರ್ ಪ್ರಕಟಿಸಿದ ಬಳಿಕ ಪೊಲೀಸರು ದಕ್ಷಿಣ ಮುಂಬೈನಲ್ಲಿ ಇರುವ ಇ.ಡಿ ಕಚೇರಿಯ ಆಸುಪಾಸಿನಲ್ಲಿ ಮುಂಜಾಗ್ರತೆ ಕ್ರಮವಾಗಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಬಂದೋಬಸ್ತ್ ಕೈಗೊಂಡಿದ್ದರು.

‘ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಮನಮೋಹನ್‌ ಸಿಂಗ್‌, ಶಿವಸೇನಾ ಹಿರಿಯ ರಾಷ್ಟ್ರೀಯ ಮುಖಂಡರು ನನಗೆ ಬೆಂಬಲಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಅಗತ್ಯಬಿದ್ದರೆ ತಿಳಿಸುತ್ತೇವೆ: ಈ ಮಧ್ಯೆ, ಶರದ್‌ ಪವಾರ್ ಅವರಿಗೆ ಇ–ಮೇಲ್‌ ಸಂದೇಶ ಕಳುಹಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ‘ಸದ್ಯ, ತಾವು ತನಿಖೆಗೆ ಹಾಜರಾಗುವ ಅಗತ್ಯವಿಲ್ಲ. ಬೇಕಿದ್ದರೆ ನಾವೇ ತಿಳಿಸುತ್ತೇವೆ’ ಎಂದಿದ್ದಾರೆ.

ಪ್ರಕರಣದ ಹೆಸರಿಸಲಾದವರನ್ನು ಪ್ರಶ್ನಿಸುವುದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಷಯ. ಅಗತ್ಯ ಬಿದ್ದಾಗ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

‘ಪವಾರ್ ವಿರುದ್ಧ ರಾಜಕೀಯ ದ್ವೇಷ’

‘ಮಹಾರಾಷ್ಟ್ರದಲ್ಲಿ ಚುನಾವಣೆ ಹತ್ತಿರವಾದಂತೆ ನರೇಂದ್ರ ಮೋದಿ ಸರ್ಕಾರ ಶರದ್‌ ಪವಾರ್‌ ಅವರನ್ನು ಗುರಿಯಾಗಿಸಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟೀಕಿಸಿದ್ದಾರೆ.

‘ಕೇಂದ್ರದ ದ್ವೇಷದ ರಾಜಕಾರಣಕ್ಕೆ ಗುರಿಯಾಗುತ್ತಿರುವ ವಿಪಕ್ಷ ನಾಯಕರ ಪಟ್ಟಿಗೆ ಪವಾರ್‌ ಹೊಸ ಸೇರ್ಪಡೆ. ಇದು, ಕೇಂದ್ರ ರಾಜಕೀಯ ಅವಕಾಶವಾದಿತನವನ್ನು ಬಿಂಬಿಸಲಿದೆ’ ಎಂದು ಟ್ವೀಟ್ ಮಾಡಿದ್ದರು.

***

ಅಗತ್ಯ ಬಿದ್ದರೆ ಇ.ಡಿ ಕಚೇರಿಗೆ ಭೇಟಿ ನೀಡುತ್ತೇನೆ. ನಾವು ರಾಜಕಾರಣದಲ್ಲಿ ಇದ್ದೇವೆ. ತನಿಖಾ ಏಜೆನ್ಸಿಗಳ ಮೂಲಕ ನಮಗೆ ಬೆದರಿಸಲು ಬಯಸಿದರೆ ಅವರಿಗೆ ಅದರಲ್ಲಿ ಯಶಸ್ಸು ಸಿಗದು.

-ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT