ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆ ನಾಡಿನಲ್ಲಿ’ ನೀರಾವರಿ ಶ್ರೇಯಸ್ಸಿಗೆ ಕಿತ್ತಾಟ

ಯೋಗೇಶ್ವರ್‌ಗೆ ಸಡ್ಡು ಹೊಡೆಯಲು ಬಂದ ಎಚ್.ಡಿ. ಕುಮಾರಸ್ವಾಮಿ, ಎಚ್‌.ಎಂ. ರೇವಣ್ಣ: ತ್ರಿಕೋನ ಸ್ಪರ್ಧೆ ಸಾಧ್ಯತೆ
Last Updated 16 ಏಪ್ರಿಲ್ 2018, 11:04 IST
ಅಕ್ಷರ ಗಾತ್ರ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಅದರ ಶ್ರೇಯಸ್ಸಿಗಾಗಿ ಕಿತ್ತಾಟ ನಡೆದಿದೆ!

‘ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿ, ಅದಕ್ಕೆ ಬೆವರು ಹರಿಸಿದ್ದು ನಾನು. ಹೀಗಾಗಿ ಅದು ನನ್ನ ಸಾಧನೆ’ ಎನ್ನುವುದು ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ವಾದ. ‘ಯೋಜನೆ ಅವರದ್ದೇ ಇರಬಹುದು. ಅದಕ್ಕೆ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ಹೆಗಲು ಕೊಟ್ಟದ್ದು ನಾವು. ಹೀಗಾಗಿ ಅದು ನಮ್ಮ ಸರ್ಕಾರಕ್ಕೆ ಸಲ್ಲಬೇಕಾದ ಋಣ’ ಎನ್ನುವುದು ಕಾಂಗ್ರೆಸ್‌ನ ಪ್ರತಿವಾದ. ‘ಇಗ್ಗಲೂರು ಜಲಾಶಯ ಕಾಮಗಾರಿಗೆ ಪೂರ್ಣರೂಪ ಕೊಟ್ಟು ಅಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದು ಎಚ್‌.ಡಿ. ದೇವೇಗೌಡರು. ಈಗ ಅದೇ ಜಲಾಶಯದ ನೀರು ಬಳಸಿಕೊಂಡು ಸರ್ಕಾರದ ಅನುದಾನದಲ್ಲಿ ಯೋಗೇಶ್ವರ್‌ ಕೆರೆ ತುಂಬಿಸಿದ್ದಾರೆ ಅಷ್ಟೆ. ಹೀಗಾಗಿ ಇದು ನಮಗೇ ಸಲ್ಲಬೇಕಾದ ಶ್ರೇಯಸ್ಸು’ ಎನ್ನುವುದು ಜೆಡಿಎಸ್‌ ಪ್ರತಿಪಾದನೆ.

‘ಗೊಂಬೆಗಳ ನಾಡು’ ಎಂದೇ ಖ್ಯಾತಿಯಾದ ಚನ್ನಪಟ್ಟಣವು ಅಭಿವೃದ್ಧಿಗಿಂತ ರಾಜಕಾರಣಕ್ಕೇ ಸುದ್ದಿಯಾಗಿದ್ದು ಹೆಚ್ಚು. ಹಾಲಿ ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ಜೊತೆಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅವರ ಸ್ಪರ್ಧೆಯಿಂದಾಗಿ ಇದೀಗ ರಾಜ್ಯದ ಗಮನ ಸೆಳೆದಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಯೋಗೇಶ್ವರ್‌ ಅವರನ್ನು ಮಣಿಸಿದ ಅನುಭವ ಹೊಂದಿರುವ ಕುಮಾರಸ್ವಾಮಿ, ಅದೇ ಫಲಿತಾಂಶ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ. ಒಕ್ಕಲಿಗ ನಾಯಕರ ನಡುವಿನ ಸ್ಪರ್ಧೆಯ ತಿಕ್ಕಾಟದ ಲಾಭ ಪಡೆದು ಗೆಲುವು ಸಾಧಿಸುವ ವಿಶ್ವಾಸದೊಂದಿಗೆ ರೇವಣ್ಣ ಕಣಕ್ಕೆ ಇಳಿಯಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಅವರ ಗೆಲುವಿಗೆ ಮುಳುವಾಯಿತು. ಬಿಜೆಪಿ ತೊರೆದು ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದ ಯೋಗೇಶ್ವರ್‌, ಕಡೆಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 6,464 ಮತಗಳ ಅಂತರದಿಂದ ಅನಿತಾ ಅವರನ್ನು ಮಣಿಸಿದ್ದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಯೋಗೇಶ್ವರ್‌ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಹ ಸದಸ್ಯತ್ವ ಪಡೆದರು. ಅಧಿಕೃತವಾಗಿ ಕಾಂಗ್ರೆಸ್ ಸೇರದೇ ಹೋದರೂ ಪಕ್ಷದ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾ ಹೋದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಅವರ ಗೆಲುವಿಗೆ ಸಹಕರಿಸಿದ್ದಕ್ಕೆ ಪ್ರತಿಯಾಗಿ ಯೋಗೇಶ್ವರ್‌ ಸಹೋದರ ಸಿ.ಪಿ. ರಾಜೇಶ್‌ ಅವರನ್ನು ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹುದ್ದೆಗೇರಿಸಿದರು. ಚನ್ನಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿ ಯೋಗೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್ ಚಿಹ್ನೆಯಡಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಗೆದ್ದರು. ನಂತರ ಶಿವಕುಮಾರ್‌ ಅವರ ಜೊತೆಗಿನ ಮನಸ್ತಾಪದ ಕಾರಣ, 2017ರ ನವೆಂಬರ್‌ನಲ್ಲಿ ಯೋಗೇಶ್ವರ್‌ ಬಿಜೆಪಿ ಸೇರಿದರು.

ವರ್ಣರಂಜಿತ ರಾಜಕೀಯ: ಕನ್ನಡ ಚಿತ್ರರಂಗದಲ್ಲಿ ‘ಸೈನಿಕ’ನಾಗಿ ಮಿಂಚಿದ ಯೋಗೇಶ್ವರ್ ರಾಜಕೀಯ ಬದುಕು ಅಷ್ಟೇ ವರ್ಣರಂಜಿತವಾಗಿದೆ. ಇಲ್ಲಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಕಾಂಗ್ರೆಸ್, ಬಿಜೆಪಿ, ಸಮಾಜವಾದಿ... ಹೀಗೆ ನಾನಾ ಪಕ್ಷಗಳನ್ನು ಪ್ರತಿನಿಧಿಸಿದ್ದಾರೆ.

1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರದಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ (2004, 2008) ಶಾಸಕರಾಗುವ ಯೋಗ ಕೂಡಿ ಬಂದಿತು. ಬಳಿಕ ಬಿಜೆಪಿ ಸೇರ್ಪಡೆಗೊಂಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ಸಿ. ಅಶ್ವಥ್‌ ವಿರುದ್ಧ ಸೋತರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಶ್ವಥ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2011ರ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾದ ಅವರು, ಜೆಡಿಎಸ್‌ನ ಸಿಂ.ಲಿಂ. ನಾಗರಾಜು ಅವರನ್ನು ಮಣಿಸಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಅರಣ್ಯ ಸಚಿವರಾದರು.

ಯೋಗೇಶ್ವರ್‌ ಬೆಂಬಲಿಗರು ಹೇಳುವಂತೆ, ಕಳೆದ ಐದು ವರ್ಷದ ಅವಧಿಯಲ್ಲಿ ಚನ್ನಪಟ್ಟಣವು ನೀರಾವರಿ ಕ್ಷೇತ್ರದಲ್ಲಿ ಮಾದರಿ ಎನ್ನುವಂತಹ ಬದಲಾವಣೆ ಕಂಡಿದೆ. ಗರಕಹಳ್ಳಿ ಮತ್ತು ಕಣ್ವ ಏತ ನೀರಾವರಿ ಯೋಜನೆಗಳ ಮೂಲಕ 70–80ಕ್ಕೂ ಹೆಚ್ಚು ಬೃಹತ್‌ ಕೆರೆಗಳು ತುಂಬಿದ್ದು, ನೂರಾರು ಕಿಲೊ ಮೀಟರ್ ಪೈಪ್‌ಲೈನ್ ಮೂಲಕ ಇಗ್ಗಲೂರು ಬ್ಯಾರೇಜ್‌ನಿಂದ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಈ ಭಾಗದ ಅಂತರ್ಜಲ ವೃದ್ಧಿಯಾಗಿ, ಕೃಷಿಗೆ ಅನುಕೂಲವಾಗಿದೆ. ಹೈನುಗಾರಿಕೆ ಬೆಳೆಯುತ್ತಿದೆ. ಅಲ್ಲಲ್ಲಿ ರಸ್ತೆಗಳು ಸುಧಾರಣೆ ಕಂಡಿವೆ. ಕುಡಿಯುವ ನೀರಿಗೂ ಅನುಕೂಲ ಮಾಡಿಕೊಡಲಾಗಿದೆ.

‘ನೀರಾವರಿ ಒಂದೇ ಪ್ರಗತಿಯ ಸಂಕೇತವಲ್ಲ. ರೇಷ್ಮೆ, ಗೊಂಬೆಗಳ ತಯಾರಿಕೆಗೆ ಪೂರಕವಾಗಿ ಯಾವುದೇ ಕೈಗಾರಿಕೆಗಳನ್ನು ತಂದಿಲ್ಲ’ ಎನ್ನು
ವುದು ಜೆಡಿಎಸ್‌ನ ಆರೋಪ. ‘ಶಾಸಕರು ಕಮಿಷನ್‌ ದಂಧೆ ನಡೆಸುತ್ತಿದ್ದಾರೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ದೂರಿದ್ದಾರೆ.

ಸದ್ಯ ಯೋಗೇಶ್ವರ್‌ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಯ ಜವಾಬ್ದಾರಿ ಹೊತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಸಲುವಾಗಿಯೇ ಸ್ವತಃ ಕುಮಾರಸ್ವಾಮಿ ನೆರೆಯ ರಾಮನಗರದ ಜೊತೆಗೆ ಇಲ್ಲಿಯೂ ಕಣಕ್ಕೆ ಇಳಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಚನ್ನಪಟ್ಟಣ
ದಲ್ಲಿ ಒಕ್ಕಲಿಗರ ಜೊತೆಗೆ ಮುಸ್ಲಿಮರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲ ಸಮುದಾಯಗಳ ಬೆಂಬಲ ತಮಗೇ ಸಿಗಲಿದೆ ಎನ್ನುವ ಲೆಕ್ಕಾಚಾರ ಇಬ್ಬರೂ ನಾಯಕರದ್ದು. ಈಗಾಗಲೇ ಉಭಯ ಪಕ್ಷಗಳೂ ಚುನಾವಣಾ ರಣಕಹಳೆ ಊದಿದ್ದು, ಭರ್ಜರಿ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನವನ್ನೂ ಮಾಡಿವೆ.

ಸಮಗ್ರ ಅಭಿವೃದ್ಧಿ

ನೀರಾವರಿ ಕ್ಷೇತ್ರದಲ್ಲಿ ಇಂದು ಚನ್ನಪಟ್ಟಣ ಮಾದರಿಯಾಗಿದೆ. ಇದಕ್ಕೆ ನಾನು ಮತ್ತು ನನ್ನ ಕಾರ್ಯಕರ್ತರ ಪರಿಶ್ರಮ ಕಾರಣ. ಹಗಲೂ ರಾತ್ರಿ ನಿಂತು ನೂರಾರು ಕಿಲೊ ಮೀಟರ್ ಉದ್ದಕ್ಕೆ ಪೈಪ್‌ಲೈನ್‌ ಮಾಡಿ ಕೆರೆಗಳಿಗೆ ನೀರು ತುಂಬಿಸುತ್ತಿದ್ದೇವೆ. ಇದರಿಂದ ಇಲ್ಲಿನ ಕೃಷಿ ಚಟುವಟಿಕೆ, ಹೈನುಗಾರಿಕೆ ಅಭಿವೃದ್ಧಿಯಾಗಿದೆ. ದೇವೇಗೌಡರೊಬ್ಬರೇ ಇಗ್ಗಲೂರು ಬ್ಯಾರೇಜ್‌ ಕಟ್ಟಿಸಿಲ್ಲ. ಇಷ್ಟಕ್ಕೂ ಅಣೆಕಟ್ಟೆ ಕಟ್ಟಿಸಿದ ಮಾತ್ರಕ್ಕೆ ಎಲ್ಲವೂ ಆಗುವುದಿಲ್ಲ. ಹಾಗೆ ಆಗುವುದಿದ್ದರೆ ನಮಗಿಂತ ಮೊದಲು ಮದ್ದೂರು ತಾಲ್ಲೂಕಿನಲ್ಲಿ ನೀರಾವರಿ ಕ್ರಾಂತಿ ಆಗಬೇಕಿತ್ತು. ಚುನಾವಣೆಯ ಕಾರಣಕ್ಕೆ ಜೆಡಿಎಸ್‌ ನೀರಾವರಿ ಯೋಜನೆಯ ಲಾಭ ಪಡೆಯಲು ಯತ್ನಿಸುತ್ತಿರುವುದು ಸರಿಯಲ್ಲ – ಸಿ.ಪಿ. ಯೋಗೇಶ್ವರ್‌, ಶಾಸಕ

ಕಾಂಗ್ರೆಸ್‌ನಿಂದ ಅಚ್ಚರಿಯ ನಡೆ

ಚನ್ನಪಟ್ಟಣ ರಾಜಕಾರಣದ ವಿಷಯದಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ್ದ ಕಾಂಗ್ರೆಸ್‌, ಸಚಿವ ಎಚ್‌.ಎಂ. ರೇವಣ್ಣ ಅವರನ್ನು ಕಣಕ್ಕೆ ಇಳಿಸುವ ಮೂಲಕ ಅಚ್ಚರಿಯ ನಡೆ ಪ್ರದರ್ಶಿಸಿದೆ.

ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರೇವಣ್ಣ 2004ರ ಚುನಾವಣೆಯಲ್ಲಿ ಎಚ್.ಸಿ. ಬಾಲಕೃಷ್ಣ ಅವರ ವಿರುದ್ಧ ಪರಾಭವಗೊಂಡಿದ್ದರು. ಬಳಿಕ ಕ್ಷೇತ್ರ ಬದಲಿಸಿಕೊಂಡು 2008ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಕಣಕ್ಕೆ ಇಳಿದು ಅಲ್ಲಿಯೂ ಸೋಲು ಅನುಭವಿಸಿದ್ದರು. ಎರಡು ವರ್ಷದ ಹಿಂದಷ್ಟೇ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡು, ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಅವರನ್ನು ಮಣಿಸಲೇಬೇಕು ಎನ್ನುವ ಹಟಕ್ಕೆ ಬಿದ್ದಿರುವ ಶಿವಕುಮಾರ್‌, ಸಹೋದರ ಡಿ.ಕೆ. ಸುರೇಶ್‌ ಅವರನ್ನು ಇಲ್ಲಿಂದಲೇ ಕಣಕ್ಕೆ ಇಳಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು. ನಂತರದಲ್ಲಿ ಅವರ ಭಾವ ಶರತ್‌ಚಂದ್ರ ಅವರ ಹೆಸರೂ ಕೇಳಿಬಂದಿತ್ತು. ಇದೀಗ ಜಿಲ್ಲೆಯವರೇ ಆದ ಕುರುಬ ಸಮುದಾಯದ ಎಚ್‌.ಎಂ. ರೇವಣ್ಣ ಅವರನ್ನು ಸ್ಪರ್ಧೆಗೆ ಇಳಿಸಲಾಗುತ್ತಿದೆ.

ಕಡೆಯ ಕ್ಷಣದಲ್ಲಿ ಸ್ಪರ್ಧೆಗೆ ಸೂಚಿಸಿದರೆ ಗೆಲ್ಲುವುದು ಕಷ್ಟ ಎಂಬ ಕಾರಣಕ್ಕೆ ರೇವಣ್ಣ ಕ್ಷೇತ್ರದಿಂದ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಆದರೆ ಹೈಕಮಾಂಡ್‌ ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇಲ್ಲಿ ಕಾಂಗ್ರೆಸ್ ಇನ್ನಷ್ಟೇ ಪ್ರಚಾರ ಕಾರ್ಯ ಆರಂಭಿಸಬೇಕಿದೆ.

**

ಯೋಗೇಶ್ವರ್ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿಲ್ಲ. ರಸ್ತೆಗಳು ಅಧೋಗತಿಗೆ ಇಳಿದಿವೆ. ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳು ಇಲ್ಲ. ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಅರ್ಧಕ್ಕೇ ನಿಂತಿದೆ. ಕೇವಲ ನೀರಾವರಿ ಎನ್ನದೆ ಎಲ್ಲಾ ರೀತಿಯ ಅಭಿವೃದ್ಧಿಗೆ ಒತ್ತು ನೀಡಬೇಕಾದುದು ಶಾಸಕರ ಕರ್ತವ್ಯ –  ಜಿ.ಎನ್. ನಿಂಗೇಗೌಡ, ಪ್ರಗತಿಪರ ರೈತ.

**

ಯೋಗೇಶ್ವರ್ ತಾಲ್ಲೂಕಿನಲ್ಲಿ ನೀರಾವರಿಗೆ ಒತ್ತು ನೀಡಿದ್ದಾರೆ. ಕೆರೆಗಳಲ್ಲಿ ನೀರು ನಿಂತು ಜನ ಜಾನುವಾರುಗಳಿಗೆ ಅನುಕೂಲವಾಗಿದೆ. ಹಸಿರು ಕಾಣುವಂತಾಗಿದೆ. ಇದರ ಜೊತೆಗೆ ಶಾಸಕರು ತಾಲ್ಲೂಕಿನ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಮಾಡಿದ್ದಾರೆ – ಸಿ.ಪುಟ್ಟರಾಜು, ಬೀಡಾ ವ್ಯಾಪಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT