ಗುರುವಾರ , ನವೆಂಬರ್ 21, 2019
27 °C
ಜನ್ಮದಿನದಂದು ತಂದೆಗೆ ಪತ್ರ ಬರೆದ ಕಾರ್ತಿ ಚಿದಂಬರಂ

ಯಾವ ಐವತ್ತಾರರವರು ನಿಮ್ಮನ್ನು ತಡೆಯಲಾರರು : ಪಿ. ಚಿದಂಬರಂ

Published:
Updated:
Prajavani

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣದ ಆರೋಪಿಯಾಗಿ, ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ
ಪಿ. ಚಿದಂಬರಂ ಅವರು ಸೋಮವಾರ ಜೈಲಿನಲ್ಲೇ ತಮ್ಮ 74ನೇ ಜನ್ಮದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ತಂದೆಗೆ ಶುಭಾಶಯ ಪತ್ರವನ್ನು ಕಳುಹಿಸಿದ ಪುತ್ರ ಕಾರ್ತಿ ಚಿದಂಬರಂ, ‘ಐವತ್ತಾರರವರು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.

‘ಉತ್ತರಪ್ರದೇಶವನ್ನು ಗುಜರಾತ್‌ನಂತೆ ಅಭಿವೃದ್ಧಿಪಡಿಸಬೇಕಾದರೆ 56 ಇಂಚಿನ ಎದೆ ಬೇಕು’ ಎಂದು 2014ರಲ್ಲಿ ಮೋದಿ ಹೇಳಿದ್ದರು. ಮೋದಿ ಅವರ ಈ ಹೇಳಿಕೆಯನ್ನೇ ಕಾರ್ತಿ ಅವರು ಟೀಕೆಗೆ ಬಳಸಿಕೊಂಡಿದ್ದಾರೆ.

ಕಾರ್ತಿ ಅವರು ತಂದೆಗೆ ಬರೆದಿರುವ ಎರಡು ಪುಟಗಳ ಪತ್ರದಲ್ಲಿ, ‘ಇಂದು ದೇಶದಲ್ಲಿ ನಾವು ಸಣ್ಣಪುಟ್ಟ ವಿಚಾರಗಳನ್ನೂ ದೊಡ್ಡದಾಗಿ ಆಚರಿಸುತ್ತಿದ್ದೇವೆ. ಆದರೆ ನೀವು ಯಾವತ್ತೂ ಜನ್ಮದಿನವನ್ನು ಸಹ ದೊಡ್ಡ ಪ್ರಮಾಣದಲ್ಲಿ ಆಚರಿಸಿದವರಲ್ಲ. ನೀವು ನಮ್ಮ ಜೊತೆಗಿಲ್ಲದಿರುವ ನಿಮ್ಮ ಜನ್ಮದಿನದಂದು ನಮಗೆ ಯಾವುದೇ ಸಂಭ್ರಮ ಇಲ್ಲ.

‘ನೀವು ‘ದೆಹಲಿ ಗ್ಯಾಂಗ್‌’ನಲ್ಲಿ ಶಾಮೀಲಾದವರಲ್ಲ. ಪತ್ರಿಕೆಗಳಿಂದ ಮೆಚ್ಚುಗೆ ಪಡೆಯಲು ಹಾತೊರೆಯುವವರೂ ಅಲ್ಲ. ಅದೇನೇ ಇರಲಿ, ನಾನು ನಿಮ್ಮನ್ನು ಭೇಟಿಮಾಡಲು ಸಾಧ್ಯವಾಗುತ್ತಿದೆ ಮತ್ತು ಜನ್ಮದಿನದಂದು ನಿಮ್ಮ ಉತ್ಸಾಹವು ಹೆಚ್ಚಾಗಿದೆ ಎಂಬುದೇ ನನಗೆ ಖುಷಿಕೊಡುವ ವಿಚಾರ’ ಎಂದಿದ್ದಾರೆ.

ಚಂದ್ರಯಾನ–2, ಜಮ್ಮು ಕಾಶ್ಮೀರದ ಸ್ಥಿತಿ, ಬ್ರಿಟಿಷ್‌ ಸಂಸತ್ತಿನ ವಿಚಾರ, ಎನ್‌ಆರ್‌ಸಿ, ಹಾಂಗ್‌ಕಾಂಗ್‌ ಪ್ರತಿಭಟನೆ, ಗುರುತ್ವಾಕರ್ಷಣೆಯ ಬಗ್ಗೆ ಪೀಯೂಷ್‌ ಗೋಯಲ್‌ ಅವರು ಮಾಡಿದ್ದ ಭಾಷಣ... ಹೀಗೆ ಹತ್ತು ಹಲವು ವಿಚಾರಗಳನ್ನು ಕಾರ್ತಿ ಅವರು ಪತ್ರದಲ್ಲಿ ಪ್ರಸ್ತಾಪಿಸಿ, ಸರ್ಕಾರ ಹಾಗೂ ಕೆಲವು ಸಚಿವರನ್ನು ಲೇವಡಿ ಮಾಡಿದ್ದಾರೆ.

‘ದೇಶವನ್ನು ದೇವರು ಆಶೀರ್ವದಿಸಲಿ’

ತಮ್ಮ ಜನ್ಮದಿನದಂದು ದೇಶದ ಅರ್ಥವ್ಯವಸ್ಥೆಯ ಬಗ್ಗೆ ಟ್ವೀಟ್‌ ಮಾಡಿರುವ ಚಿದಂಬರಂ, ‘ಅರ್ಥವ್ಯವಸ್ಥೆಯ ಬಗ್ಗೆ ಇಂದು ಚಿಂತಿಸುತ್ತಿದ್ದೆ. ಒಂದೇ ಒಂದು ಅಂಕಿಅಂಶ ಇಡೀ ಕತೆಯನ್ನು ಹೇಳುತ್ತದೆ. ಆಗಸ್ಟ್‌ ತಿಂಗಳಲ್ಲಿ ರಫ್ತು ಅಭಿವೃದ್ಧಿಯು ಶೇ –6.05ರಷ್ಟಿತ್ತು. ರಫ್ತು ಪ್ರಮಾಣವು ಶೇ 20ರ ದರದಲ್ಲಿ ಏರಿಕೆ ದಾಖಲಿಸದಿರುವ ಯಾವ ದೇಶವೂ ಶೇ 8ರ ಜಿಡಿಪಿಯನ್ನು ಸಾಧಿಸಿಲ್ಲ. ಈ ದೇಶವನ್ನು ದೇವರು ಆಶೀರ್ವದಿಸಲಿ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)