ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅಧಿಕಾರಿಯ ಪರಿಶ್ರಮದಿಂದ ಡೆಂಗ್ಯೂ ಪೀಡಿತ ಜಿಲ್ಲೆಯ ಚಿತ್ರಣವೇ ಬದಲು

Last Updated 8 ನವೆಂಬರ್ 2019, 5:45 IST
ಅಕ್ಷರ ಗಾತ್ರ

ಹೈದರಾಬಾದ್:ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವುದು ‘ಪೆದ್ದಪಲ್ಲಿ‘ ಜಿಲ್ಲೆ. 2016 ರ ಮೊದಲು ಪೆದ್ದಪಲ್ಲಿ ಕರೀಂ ನಗರ ಜಿಲ್ಲೆಯ ಭಾಗವಾಗಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಉದಯಿಸಿದ ಪೆದ್ದಪಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದ ಮತ್ತು ಡೆಂಗ್ಯೂ ಪೀಡಿತ ಪ್ರದೇಶವೆಂಬ ಅಪಕೀರ್ತಿಗೆ ಗುರಿಯಾಗಿತ್ತು. ಬಡತನ, ಮಳೆಕೊರತೆ ಮತ್ತು ಶುಚಿತ್ವದ ಬಗ್ಗೆ ಜನರಿಗಿರುವ ತಾತ್ಸಾರದಿಂದಾಗಿ ಪೆದ್ದಪಲ್ಲಿ ಜಿಲ್ಲೆ ಮನುಷ್ಯರು ಬದುಕಲು ಯೋಗ್ಯವಲ್ಲದ ಸ್ಥಳವಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಒಬ್ಬ ಐಎಎಸ್‌ ಅಧಿಕಾರಿಯ ಪರಿಶ್ರಮದಿಂದ ಕೇವಲ ಎರಡು ವರ್ಷಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಆ ಜಿಲ್ಲಾಧಿಕಾರಿಯ ಹೆಸರು ‘ದೇವಸೇನಾ‘.

ಮಹಾತ್ಮ ಗಾಂಧೀಜಿಯವರ 150 ನೇ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸ್ಚಚ್ಛಭಾರತ್‌ ದಿವಸ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ದೇವಸೇನಾರ ಮಹತ್ವದ ಕಾರ್ಯ ಮೆಚ್ಚಿ ಪುರಸ್ಕರಿಸಿದ್ದರು. ದೇಶದ 690 ಜಿಲ್ಲೆಗಳ ಸುಮಾರು 17400 ಗ್ರಾಮಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಸಮೀಕ್ಷೆಯಲ್ಲಿ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆ ಭಾರತದ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ಜಿಲ್ಲೆಯಾಗಿ ಹೆಸರು ಮಾಡಿತ್ತು. ದೇವಸೇನಾ ಅವರು ಪೆದ್ದಪಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಡಿದ ಮಹತ್ವದ ಕಾರ್ಯ ಜಿಲ್ಲೆಗೆ ಹಿರಿಮೆ ತಂದುಕೊಟ್ಟಿತ್ತು. ಪೆದ್ದಪಲ್ಲಿ ಭಾರತದ ಆದರ್ಶ ಜಿಲ್ಲೆಯ ಪರಿವರ್ತನೆಗೊಂಡಿತ್ತು.

ಬೀಸಿತು ಬದಲಾವಣೆಯ ಗಾಳಿ:ದೇವಸೇನಾ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ತೆರಳಿ ಜನರಿಗೆ ಶುಚಿತ್ವ, ಆರೋಗ್ಯ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕೈಗೊಂಡರು. ಪ್ರತಿ ಗ್ರಾಮದ ಸರಪಂಚರು, ಸ್ಥಳೀಯ ಹಾಗೂ ಮಹಿಳಾ ಮುಖಂಡರನ್ನು ಒಂದುಗೂಡಿಸಿ ತಮ್ಮ ಮುಂದಿನ ಯೋಜನೆಯ ಬಗ್ಗೆ ತಿಳಿಹೇಳಿದರು. ಮೊದಲ ಹಂತವಾಗಿ ಜಿಲ್ಲೆಯಲ್ಲಿ ‘ಸ್ವಚ್ಛ ಶುಕ್ರವಾರಂ‘ ಎಂಬ ಅಭಿಯಾನ ಆರಂಭಿಸಿದರು. ವಾರದ ಪ್ರತಿ ಶುಕ್ರವಾರದ ದಿನ ಸ್ಥಳೀಯ ಮುಖಂಡರು, ಅಧಿಕಾರಿಗಳು ಮತ್ತು ಯುವಕರು ತಮ್ಮ ಸುತ್ತಲಿನ ರಸ್ತೆ, ಸಾರ್ವಜನಿಕ ಸ್ಥಳ ಮತ್ತು ಮನೆಗಳನ್ನು ಶುಚಿಗೊಳಿಸುವ ಮಹತ್ವದ ಕಾರ್ಯ ಇದಾಗಿದೆ.

ನಿರ್ಮಾಣವಾದವು ಮಳೆಕೊಯ್ಲಿನ ಗುಂಡಿಗಳು: ಬರಪೀಡಿತ ಪ್ರದೇಶವಾದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನೀರಿನ ಬವಣೆ ಹೇಳತೀರದಾಗಿತ್ತು. ಆ ಕಾರಣ, ಬಿದ್ದ ಅಲ್ಪಮಳೆ ನೀರನ್ನೇ ಸಂಗ್ರಹಿಸುವ ಯೋಜನೆಯೊಂದನ್ನು ಜಿಲ್ಲಾಧಿಕಾರಿ ದೇವಸೇನಾ ಹಮ್ಮಿಕೊಂಡರು. ಹಳ್ಳಿಗಳ ಪ್ರತಿ ಮನೆಯ ಹಿಂದೆ ಮಳೆಕೊಯ್ಲಿನ ಗುಂಡಿಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಸೀಮೆಂಟಿನ ಮೇಲು ಹೊದಿಕೆ ಹಾಕಲಾಯಿತು. ನೀರಿನ ಬವಣೆ ಸಂದರ್ಭ ಜನರಿಗೆ ಈ ಗುಂಡಿಗಳು ಸಹಾಯಕ್ಕೆ ಬರತೊಡಗಿದವು. ದೇವಸೇನಾ ಅವರು ತೆರೆದ ಚರಂಡಿ ವ್ಯವಸ್ಥೆಯಿಂದ ಜಿಲ್ಲೆಯನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರು. ಇವತ್ತು ಪೆದ್ಡಪಲ್ಲಿ ಜಿಲ್ಲೆ ಇಡೀ ರಾಷ್ಟ್ರದಲ್ಲೇ ತೆರೆದ ಚರಂಡಿ ಮುಕ್ತ ಜಿಲ್ಲೆಯೆಂಬ ಕೀರ್ತಿಗೆ ಭಾಜನವಾಗಿದೆ.

ಮೊದಲ ಆದ್ಯತೆಗಳಾದವು ಆರೋಗ್ಯ ಮತ್ತು ನೈರ್ಮಲ್ಯ:ಡೆಂಗ್ಯೂ ಪೀಡಿತ ಜಿಲ್ಲೆಯೆಂದೇ ಕುಖ್ಯಾತಿ ಹೊಂದಿದ್ದ ಪೆದ್ದಪಲ್ಲಿಯಲ್ಲೀಗ ಶೇ.90 ರಷ್ಟು ಡೆಂಗ್ಯೂ ರೋಗ ನಿವಾರಣೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಇದಕ್ಕೆ ಹಲವು ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ದೇವಸೇನಾ ಅವರು ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಭಜನೆ, ಪ್ಲಾಸ್ಟಿಕ್‌ ಮತ್ತು ಮರುಬಳಕೆ ಮಾಡಲಾಗದ ವಸ್ತುಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಂಡರು. ನರೇಗಾ ಯೋಜನೆಯಡಿ ಪ್ರತಿ ಹಳ್ಳಿಗೊಂದರಂತೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಿದರು. ಇವತ್ತು ಜಿಲ್ಲೆಯ 263 ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಮಾರ್ಪಟ್ಟಿವೆ ಎಂದು ದಾಖಲೆಗಳು ಹೇಳುತ್ತಿವೆ. ಮಹಿಳೆಯರಿಗೆ ಜೈವಿಕ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವುದು, ರಕ್ತಹೀನತೆ ಮತ್ತು ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳ ಸುರಕ್ಷತೆ ಕೈಗೊಳ್ಳುವ ಮೂಲಕ ಸದೃಢ ಸಮುದಾಯ ನಿರ್ಮಾಣ ಮಾಡುವ ಯೋಜನೆಗಳನ್ನು ದೇವಸೇನಾ ಅನುಷ್ಠಾನಗೊಳಿಸಿದ್ದಾರೆ. ಆ ಮೂಲಕ ಹಿಂದುಳಿದ ಪೆದ್ದಪಲ್ಲಿಯನ್ನು ದೇಶದ ಅತ್ಯಂತ ಆರೋಗ್ಯ ಮತ್ತು ನಿರ್ಮಲ್ಯ ಜಿಲ್ಲೆಯನ್ನಾಗಿ ನಿರ್ಮಿಸಿ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT