ಭಾನುವಾರ, ಆಗಸ್ಟ್ 18, 2019
26 °C

ಗೋರಕ್ಷಕರಿಂದ ಪೆಹ್ಲು ಖಾನ್ ಹತ್ಯೆ: ಪ್ರಕರಣದ 6 ಆರೋಪಿಗಳು ಖುಲಾಸೆ

Published:
Updated:

ನವದೆಹಲಿ: 2017ರಲ್ಲಿ ಗೋರಕ್ಷಕರಿಂದ ಹತ್ಯೆಯಾದ ಪೆಹ್ಲು ಖಾನ್ ಗುಂಪು ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 6 ಮಂದಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.  ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದಾರೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸರಿತಾ ಸ್ವಾಮಿ ಬುಧವಾರ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಎರಡೂ ಕಡೆಯವರ ವಾದ- ಪ್ರತಿವಾದಗಳು ಆಗಸ್ಟ್ 7ರಂದು ಪೂರ್ಣಗೊಂಡಿತ್ತು.

ಇದನ್ನೂ ಓದಿ:  ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಗೋ ರಕ್ಷಕರು

ಗೋಶಾಲೆಯ ಮೇಲ್ವಿಚಾರಕ ನೀಡಿದ ಹೇಳಿಕೆ ಮತ್ತು ಮೊಬೈಲ್ ಫೋನ್ ರೆಕಾರ್ಡ್ ಆಧರಿಸಿ ಈ ಹಿಂದೆ 6 ಮಂದಿ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು, 

ನ್ಯಾಯಾಲಯ ತೀರ್ಪು ನೀಡುವ ಮುನ್ನ ಪೆಹ್ಲು ಖಾನ್ ಪರ ವಾದಿಸಿದ್ದ ನ್ಯಾಯವಾದಿ ಖಾಸಿಂ ಖಾನ್, ಈ ಪ್ರಕರಣದಲ್ಲಿನ 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದರು.

ಈ ಪ್ರಕರಣದಲ್ಲಿ ರಾಜಕೀಯ ಒತ್ತಡವಿದೆ. ಇದರಲ್ಲಿರುವ ಏಳು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನಾನು ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ ಖಾಸಿಂ ಖಾನ್.

ಮೇವತ್ ಕಿಸಾನ್ ಪಂಚಾಯತ್ ಸದಸ್ಯರೂ ನ್ಯಾಯಾಲಯದಲ್ಲಿ  ಹಾಜರಾಗಿದ್ದರು.

ಇದನ್ನೂ ಓದಿ:  ವಿವಾದಕ್ಕೆ ಕಾರಣವಾದ ಆರೋಪ ಪಟ್ಟಿ

2017 ಏಪ್ರಿಲ್ 1ರಂದು ಹರ್ಯಾಣದ ನೂಹ್‌ಗೆ ಬರುತ್ತಿದ್ದ ವೇಳೆ ಗೋವು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಶಂಕಿಸಿ ಗೋ ರಕ್ಷಕರ ಗುಂಪೊಂದು ಪೆಹ್ಲು ಖಾನ್, ಅವರ ಇಬ್ಬರು ಮಕ್ಕಳು ಮತ್ತು ಇತರ ನಾಲ್ಕು ಮಂದಿ ಮೇಲೆ ಗುಂಪು ಹಲ್ಲೆ ನಡೆಸಿತ್ತು.  ಪೆಹ್ಲು  ಖಾನ್ ಅವರು ಜೈಪುರದಲ್ಲಿ ನಡೆದ ಗೋವು ಜಾತ್ರೆಯಲ್ಲಿ ಗೋವುಗಳನ್ನು ಖರೀದಿಸಿ ಮರುಳುತ್ತಿದ್ದ ವೇಳೆ ಈ ಹಲ್ಲೆ ನಡೆದಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡ ಪೆಹ್ಲು ಖಾನ್ ಮೂರು ದಿನಗಳ ನಂತರ ಅಲ್ವಾರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಈ ಗುಂಪು ಹಲ್ಲೆ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಆದಾಗ್ಯೂ, ಗುಂಪು ಹಲ್ಲೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ ರಾಜಸ್ಥಾನ ಗೋವು ಸಂರಕ್ಷಣೆ ( ಗೋಹತ್ಯೆ ನಿಷೇಧ ಮತ್ತು ಸಾಗಣೆ ಅಥವಾ ತಾತ್ಕಾಲಿಕ ವರ್ಗಾವಣೆ) ಕಾಯ್ದೆ, 1995 ಸೆಕ್ಷನ್ 6 ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅದೇ ವೇಳೆ ಪೆಹ್ಲು ಖಾನ್ ಅವರ ಮಗ ಇರ್ಷಾದ್ (25) ಮತ್ತು ಆರಿಫ್  (22) ವಿರುದ್ಧ ಇದೇ ಕಾಯ್ದೆಯ 5,8 ಮತ್ತು 9 ಸೆಕ್ಷನ್‌ನಡಿ ಆರೋಪ ಪಟ್ಟಿ ದಾಖಲಿಸಿದೆ.

 ಪೆಹ್ಲು ಖಾನ್ ಮೇಲೆ ಆರೋಪ ಹೊರಿಸಿರುವುದನ್ನು ಖಂಡಿಸಿದ ಈತನ ಕುಟುಂಬ ಗುಂಪು ಹಲ್ಲೆ ಪ್ರಕರಣದಲ್ಲಿ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದೆ. 

ಇದನ್ನೂ ಓದಿ: ಪೆಹ್ಲು ಖಾನ್‌ ಹತ್ಯೆ ಪ್ರಕರಣ: ಸಾಕ್ಷಿಗಳ ಮೇಲೆ ಗುಂಡಿನ ದಾಳಿ

Post Comments (+)