ಗುರುವಾರ , ನವೆಂಬರ್ 14, 2019
19 °C

ಬಜೆಟ್‌ ಘೋಷಣೆಯಂತೆ ಇಂಧನ ದರ ಏರಿಕೆ: ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?

Published:
Updated:

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಮರುದಿನವೇ ದೇಶಾದ್ಯಂತ ಇಂಧನದ ಬೆಲೆ ಏರಿಕೆ ಬಿಸಿ ನಾಗರಿಕರಿಗೆ ತಟ್ಟಿದೆ. ಈ ಮೂಲಕ ಜನಸಾಮಾನ್ಯರ ಪ್ರಯಾಣದ ಹೊರೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ ದರದಲ್ಲಿ ₹2.45 ರೂ, ಡೀಸೆಲ್‌ ದರದಲ್ಲಿ ₹2.36 ಏರಿಕೆಯಾಗಿದೆ. ಅದರಂತೆ ಪೆಟ್ರೋಲ್‌ ₹72.96ಗಳಾಗಿದ್ದರೆ, ಡೀಸೆಲ್‌ ₹66.96ಗಳಾಗಿದೆ. 

ವಾಣಿಜ್ಯ ನಗರಿ ಮುಂಬೈನಲ್ಲಿ ನಿನ್ನೆ ₹76.15 ಇದ್ದ ಪೆಟ್ರೋಲ್‌ ಇಂದು ₹2.42 ಏರಿಕೆ ಮೂಲಕ ₹78.57 ಮಾರಾಟವಾಗುತ್ತಿದೆ. ₹67.40 ಇದ್ದ ಡೀಸೆಲ್‌ ಇಂದು ₹2.50 ಏರಿಕೆಯೊಂದಿಗೆ ₹69.90ಗೆ ಮಾರಾಟವಾಗುತ್ತಿದೆ. 

ಇನ್ನು ಬೆಂಗಳೂರಿನಲ್ಲಿ ಬಜೆಟ್‌ ಮಂಡನೆಯ ದಿನವಾದ ಶುಕ್ರವಾರ ₹72.83 ಇದ್ದ ಪೆಟ್ರೋಲ್‌ ಇಂದು ₹2.54 ಏರಿಕೆಯೊಂದಿಗೆ ₹75.37ಗೆ ತಲುಪಿದೆ.  ₹66.45 ಇದ್ದ ಡೀಸೆಲ್‌ ₹2.43 ಏರಿಕೆಯೊಂದಿಗೆ ₹68.88 ಗೆ ತಲುಪಿದೆ. 

ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ ₹ 1 ರಂತೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ₹ 1 ರಂತೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಸೇರಿ ಒಟ್ಟಾರೆ ₹ 2 ಏರಿಕೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶುಕ್ರವಾರ ಹೇಳಿತ್ತು. 

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣ ದರ ಏರಿಸಬೇಕೆಂಬ ಚಿಂತನೆಯಲ್ಲಿದೆ. ಆದರೆ, ಸ್ವತಃ ಮುಖ್ಯಮಂತ್ರಿಗಳೇ ಟಿಕೆಟ್‌ ದರ ಪರಿಷ್ಕರಣೆಗೆ ಹಿಂದೇಟು ಹಾಕಿದ್ದಾರೆ. ಬಸ್‌ ಟಿಕೆಟ್‌ ದರ ಏರಿಸಲು ಸದ್ಯ ಸೆಸ್‌ ಏರಿಕೆಯು ರಾಜ್ಯ ಸರ್ಕಾರಕ್ಕೆ ನೆಪವಾಗಲಿದೆ. 

ಇನ್ನೊಂದೆಡೆ ಸೆಸ್‌ ಏರಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಟೀಕಿಸಿದ್ದರು. ‘ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದರಿಂದ ಸಹಜವಾಗಿಯೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ. ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ,’ ಎಂದಿದ್ದರು. 

ಪ್ರತಿಕ್ರಿಯಿಸಿ (+)