ಗುರುವಾರ , ನವೆಂಬರ್ 21, 2019
23 °C
ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಪರಿಣಾಮ

ತೈಲ ಬಿಕ್ಕಟ್ಟು|ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ₹5ರಿಂದ ₹6 ಹೆಚ್ಚಳದ ಅಂದಾಜು

Published:
Updated:

ನವದೆಹಲಿ: ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆದಿರುವುದರಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗಲಿರುವ ವ್ಯತ್ಯಯ ಮತ್ತು ಬೆಲೆ ಹೆಚ್ಚಳ ಸಾಧ್ಯತೆಯಿಂದಾಗಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಪ್ರತಿ ಲೀಟರ್‌ ಮಾರಾಟ ಬೆಲೆ ₹ 5 ರಿಂದ ₹ 6ರಂತೆ ಹೆಚ್ಚಳದ ಆತಂಕ ಎದುರಾಗಿದೆ.

ತೈಲ ಬಿಕ್ಕಟ್ಟಿನಿಂದಾಗಿ ಸೋಮ ವಾರದ ವಹಿವಾಟಿನಲ್ಲಿ ದೇಶಿ ಷೇರುಪೇಟೆ ಸೂಚ್ಯಂಕ, ಕರೆನ್ಸಿ ವಿನಿಮಯ ದರ ಮತ್ತು ತೈಲ ಮಾರಾಟ ಸಂಸ್ಥೆಗಳ ಷೇರು ಬೆಲೆ ಕುಸಿತ ಕಂಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 10ರಿಂದ 12 ಡಾಲರ್‌ನಂತೆ ಹೆಚ್ಚಳಗೊಳ್ಳಲಿದೆ. ಇದು ಕಚ್ಚಾ ತೈಲ ಖರೀದಿ ವೆಚ್ಚ ಹೆಚ್ಚಿಸಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊ ರೇಷನ್‌ಗಳ (ಬಿಎಚ್‌ಸಿಎಲ್‌) ಇಂಧನ ಮಾರಾಟದ ಲಾಭದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ನಷ್ಟ ಭರ್ತಿ ಮಾಡಿಕೊಳ್ಳಲು ಈ ಸಂಸ್ಥೆಗಳಿಗೆ ಬೆಲೆ ಏರಿಕೆಯು ಅನಿವಾರ್ಯವಾಗಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವು ಶೇ 10ರಷ್ಟು ಏರಿಕೆಯಾದರೆ ತೈಲ ಮಾರಾಟ ಸಂಸ್ಥೆಗಳು ಮುಂದಿನ 15 ದಿನಗಳಲ್ಲಿ ಇಂಧನಗಳ ಬೆಲೆಯನ್ನು ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌ನ ಸಂಶೋಧನಾ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ದೇಶಿ ಆಮದು ಪ್ರಮಾಣದಲ್ಲಿ ಕಚ್ಚಾ ತೈಲದ ಪಾಲು ದೊಡ್ಡದಿರುವುದರಿಂದ ಇದು ಭಾರತದ ವ್ಯಾಪಾರ ಕೊರತೆ ಹೆಚ್ಚಳಕ್ಕೂ ಕಾರಣವಾಗಲಿದೆ.

ಸ್ಥಗಿತಗೊಂಡ ಉತ್ಪಾದನೆಗೆ ಮತ್ತೆ ಚಾಲನೆ ದೊರೆತರೆ, ಭಾರತದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಇರಾನ್‌ ಮತ್ತು ಸೌದಿ ಅರೇಬಿಯಾ ನಡುವಣ ಉದ್ವಿಗ್ನ ಪರಿಸ್ಥಿತಿ ವಿಷಮ ಗೊಂಡರೆ ಕಚ್ಚಾ ತೈಲ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಲಿದೆ. ದುಬಾರಿ ಕಚ್ಚಾ ತೈಲವು ಭಾರತದ ವ್ಯಾಪಾರ ಸಮತೋಲನ ಮತ್ತು ಕರೆನ್ಸಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

59 ಡಾಲರ್‌: ಡ್ರೋನ್‌ ದಾಳಿ ಮುಂಚಿನ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಜಾಗತಿಕ ಬೆಲೆ

***

ಉತ್ಪಾದನೆ ಕುಸಿತವು, ತೈಲ ಬಳಕೆಯಲ್ಲಿ ವಿಶ್ವದ 3ನೇ ಅತಿದೊಡ್ಡ ದೇಶವಾಗಿರುವ ಭಾರತದ ಪೂರೈಕೆಗೆ ಅಡಚಣೆ ಒಡ್ಡಲಾರದು.

- ಧರ್ಮೇಂದ್ರ ಪ್ರಧಾನ್, ಪೆಟ್ರೋಲಿಯಂ ಸಚಿವ

***

ಚಿನ್ನ ದುಬಾರಿ

l ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಬೆಲೆ 10ಗ್ರಾಂಗೆ ಗರಿಷ್ಠ ₹460ರಂತೆ ಏರಿಕೆ

l ದೆಹಲಿಯಲ್ಲಿ ₹ 38,860

l ಬೆಂಗಳೂರಿನಲ್ಲಿ ₹ 398ರಂತೆ ಹೆಚ್ಚಾಗಿ ₹ 37,980ಕ್ಕೆ ಏರಿಕೆ

l ರೂಪಾಯಿ ಮೌಲ್ಯ ಇಳಿಕೆ ಮತ್ತು ಕಚ್ಚಾ ತೈಲ ದರದಲ್ಲಿ ಏರಿಕೆ ಆಗುತ್ತಿರುವುದರಿಂದ ಹೂಡಿಕೆದಾರರು ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ

ರೂಪಾಯಿ 68 ಪೈಸೆ ಕುಸಿತ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 68 ಪೈಸೆ ಕುಸಿದು, ಒಂದು ಡಾಲರ್‌ಗೆ
₹ 71.60ರಂತೆ ವಿನಿಮಯಗೊಂಡಿತು. ಕಚ್ಚಾ ತೈಲದ ಆಮದಿನ ಮೇಲೆ ಅವಲಂಬಿತವಾಗಿರುವ ಪ್ರವರ್ಧಮಾನಕ್ಕೆ ಬರುತ್ತಿರುವ ಬಹುತೇಕ ಎಲ್ಲಾ ದೇಶಗಳ ಕರೆನ್ಸಿಗಳು ಇಳಿಕೆ ಕಂಡಿವೆ.

ಕಂಪನಿಗಳ ಷೇರು ಕುಸಿತ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಷೇರುಗಳ ಬೆಲೆ ಸೋಮ ವಾರ ಶೇ 7ರವರೆಗೆ ಕುಸಿತ ಕಂಡಿವೆ. ವಿಮಾನಯಾನ ಕಂಪನಿಗಳಾದ ಸ್ಪೈಸ್‌ಜೆಟ್ ಷೇರು ಶೇ 3.95ರಷ್ಟು, ಇಂಟರ್‌ಗ್ಲೋಬಲ್‌ ಏವಿಯೇಷನ್‌ ಷೇರು ಶೇ 2.86ರಷ್ಟು, ಜೆಟ್ ಏರ್‌ವೇಸ್‌ ಷೇರು ಶೇ 1.20ರಷ್ಟು ಇಳಿಕೆಯಾಗಿವೆ.

ಆಮದು ದುಬಾರಿ

ಸಿಂಗಪುರ (ಪಿಟಿಐ): ಕಚ್ಚಾ ತೈಲ ಆಮದಿಗೆ ಭಾರತ ಮಾಡುವ ವೆಚ್ಚ ಹೆಚ್ಚಲಿದೆ ಎಂದು ಸಿಂಗಪುರದ ಡಿಬಿಎಸ್‌ ಬ್ಯಾಂಕಿಂಗ್‌ ಗ್ರೂಪ್‌ ಅಂದಾಜಿಸಿದೆ.

ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಪ್ರತಿ ಒಂದು ಡಾಲರ್‌ ಹೆಚ್ಚಿದಷ್ಟೂ, ಭಾರತದ ಕಚ್ಚಾ ತೈಲದ ವೆಚ್ಚವು ₹ 14 ಸಾವಿರ ಕೋಟಿಗಳಷ್ಟು ಹೆಚ್ಚಳಗೊಳ್ಳಲಿದೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯಕ್ಕೆ ಶೇ 83ರಷ್ಟು ಆಮದು ನೆಚ್ಚಿಕೊಂಡಿದೆ.

ಪ್ರತಿಕ್ರಿಯಿಸಿ (+)