ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದಿಂದ ಶಾಲೆಗೆ ಮರಳಿದ ಮಕ್ಕಳು

ಜಿಲ್ಲೆಯಾದ್ಯಂತ ಪ್ರಾಥಮಿಕ– ಪ್ರೌಢ ಶಾಲೆಗಳ ಪುನರಾರಂಭ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
Last Updated 29 ಮೇ 2018, 13:29 IST
ಅಕ್ಷರ ಗಾತ್ರ

ಕೋಲಾರ: ಎರಡು ತಿಂಗಳ ಬೇಸಿಗೆ ರಜೆಯ ನಂತರ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೋಮವಾರ ಪುನರಾರಂಭವಾದವು.

ರಜೆಯ ಮಜಾ ಸವಿದ ವಿದ್ಯಾರ್ಥಿಗಳು ಮೊದಲ ದಿನ ಉತ್ಸಾಹದಿಂದ ಶಾಲೆಗೆ ಮರಳಿದರು. ಮೊದಲ ದಿನವೇ ಬಿಸಿಯೂಟ ತಯಾರಿಸಲಾಗಿತ್ತು. ಶಾಲಾ ಕಟ್ಟಡಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೂಳು ಹಿಡಿದಿದ್ದ ಮೇಜು, ಕುರ್ಚಿ, ಕೊಠಡಿಗಳನ್ನು ಸ್ವಚ್ಛಗೊಳಿಸಲಾಯಿತು.

ಶಾಲಾ ಆವರಣದಲ್ಲಿ ರಾಶಿಯಾಗಿ ಬಿದ್ದಿದ್ದ ಕಸವನ್ನು ತೆರವುಗೊಳಿಸಲಾಯಿತು. ಶಾಲೆಯ ಅಡುಗೆ ಕೊಠಡಿ ಮತ್ತು ತರಗತಿಗಳನ್ನು ನೀರಿನಿಂದ ತೊಳೆದು ಸ್ವಚ್ಛ ಮಾಡಲಾಯಿತು. ಅಡುಗೆ ಪಾತ್ರೆಗಳನ್ನು ತೊಳೆದು ನೀರು ತುಂಬಿಸಲಾಯಿತು. ಹಲವು ಶಾಲೆಗಳಲ್ಲಿ ಸರಳ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.

ಶಿಕ್ಷಕರ ಜವಾಬ್ದಾರಿ: ತಾಲ್ಲೂಕಿನ ಅರಾಭಿ ಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸುವುದು ಶಿಕ್ಷಕರ ಜವಾಬ್ದಾರಿ’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಅನೇಕ ಸಾಧಕರು ಈ ಶಾಲೆಗಳಲ್ಲೇ ಓದಿದವರು. ಗುಣಾತ್ಮಕ ಶಿಕ್ಷಣದ ಮೂಲಕ ಶೇ 100ರಷ್ಟು ಫಲಿತಾಂಶ ಸಾಧನೆಯತ್ತ ಸಾಗುತ್ತಿದ್ದೇವೆ. ಸಮಾನ ಶಿಕ್ಷಣಕ್ಕಾಗಿ ಶಾಲೆಗಳ ಬಲವರ್ಧನೆ ಅಗತ್ಯ. ಶಾಲೆಗಳಲ್ಲಿ ಉತ್ತಮ ಕಲಿಕೆಗೆ ಸ್ವಚ್ಛ ಪರಿಸರ ನಿರ್ಮಾಣ ಮಾಡಬೇಕು’ ಎಂದು ಕಿವಿಮಾತು ಹೇಳಿದರು.‘ಶಿಕ್ಷಕರು ಖಾಸಗಿ ಶಾಲೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ.

ಗುಣಾತ್ಮಕತೆಯಲ್ಲಿ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ನೀಡುವ ಉಚಿತ ಪಠ್ಯ, ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಬೇಕು. ಪಠ್ಯಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವದಿಂದ ಕಂಡರೆ ಶೈಕ್ಷಣಿಕ ಬದುಕು ಸಾಕಾರಗೊಳ್ಳುತ್ತದೆ’ ಎಂದು ಸಲಹೆ ನೀಡಿದರು.

ಆರ್ಥಿಕ ಸ್ಥಿರತೆ: ‘ಸ್ವಾವಲಂಬಿ ಜೀವನ ಹಾಗೂ ಆರ್ಥಿಕ ಸ್ಥಿರತೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಾಲೆಯಲ್ಲಿ ಬಡ ಮಕ್ಕಳು ಓದುತ್ತಿದ್ದ, ಮಕ್ಕಳಿಗೆ ಅಗತ್ಯವಿರುವ ಸೌಕರ್ಯ ಒದಗಿಸಲಾಗುತ್ತಿದೆ. ಇದರ ಸದುಪಯೋಗದೊಂದಿಗೆ ಶೈಕ್ಷಣಿಕ ಪ್ರಗತಿ ತೋರಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ತಿಳಿಸಿದರು.

‘ಶಿಕ್ಷಕರು ಮಕ್ಕಳಲ್ಲಿ ಶಾಲೆಯನ್ನು ದೇಗುಲವೆಂಬಂತೆ ಬಿಂಬಿಸಬೇಕು. ಮಕ್ಕಳು ಪಠ್ಯವಿಷಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ಧೈರ್ಯವಾಗಿ ಶಿಕ್ಷಕರ ಬಳಿ ಕೇಳಿ ಪರಿಹರಿಸಿಕೊಳ್ಳಬೇಕು’ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿರಾಜು, ಸದಸ್ಯ ಮಂಜುನಾಥ್, ಶಿಕ್ಷಕರಾದ ಸಿ.ಎಂ.ವೆಂಕಟರಮಣಪ್ಪ, ಎಸ್.ಅನಂತಪದ್ಮನಾಭ್, ಎಸ್‌.ಸತೀಶ್, ಭವಾನಿ, ಶ್ವೇತಾ, ಸುಗುಣಾ, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT