ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗಳಲ್ಲಿ ಪೊಲೀಸರಿಂದ ಬಿಗಿಭದ್ರತೆ

ಮಲೆನಾಡಿನಲ್ಲಿ ಭದ್ರತೆಗೆ 2,705 ಭದ್ರತಾ ಸಿಬ್ಬಂದಿ ನಿಯೋಜನೆ: ಹಲವು ಚೆಕ್‌ಪೋಸ್ಟ್‌ಗಳು
Last Updated 12 ಮೇ 2018, 9:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಐದೂ ಕ್ಷೇತ್ರಗಳಿಂದ ಒಟ್ಟು 1,210 ಮತಗಟ್ಟೆಗಳಿದ್ದು, ಭದ್ರತಾ ಕಾರ್ಯಕ್ಕೆ 2,705 ಸಿಬ್ಬಂದಿ ನಿಯೋಜಿಸಲಾಗಿದೆ. ಶಾಂತಿಯುತ ಮತದಾನದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇಲ್ಲಿ ಶುಕ್ರವಾರ ತಿಳಿಸಿದರು.

ಚುನಾವಣಾ ಸಿಬ್ಬಂದಿ ಮಸ್ಟರಿಂಗ್‌ನಲ್ಲಿ ಪರಿಕರಗಳನ್ನು ಪಡೆದುಕೊಂಡು ಮತಗಟ್ಟೆಗಳಿಗೆ ತೆರಳಿದ್ದಾರೆ. ಭದ್ರತಾ ಕಾರ್ಯಕ್ಕೆ ಪೊಲೀಸರು–1300, ಗೃಹ ರಕ್ಷಕ ದಳ ಸಿಬ್ಬಂದಿ– 660, ಅರಣ್ಯ ರಕ್ಷಕರು– 40, ಹಾಗೂ ಅರೆ ಸೇನಾ ಪಡೆಯ 12,00 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಐದೂ ಕ್ಷೇತ್ರಗಳಿಗೆ ಅರೆಸೇನಾ ಪಡೆಯ 15 ತುಕಡಿ ಹಾಗೂ ಕೆಎಸ್‌ಆರ್‌ಪಿಯ 4 ತುಕಡಿಗಳನ್ನು ನಿಯೋಜಿಸಲಾಗಿದೆ. ಒಬ್ಬರು ಪೊಲೀಸ್‌ ವರಿಷ್ಠಾಧಿಕಾರಿ, ಒಬ್ಬರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಐವರು ಡಿಎಸ್‌ಪಿ, 18 ಇನ್‌ಸ್ಪೆಕ್ಟರ್‌, ಎಸ್‌ಐ ಮತ್ತು ಎಎಸ್‌ಐ 196 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇಲಾಖೆ ವಾಹನಗಳ ಜತೆಗೆ ಒಟ್ಟು 91 ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮೂಡಿಗೆರೆ, ಶೃಂಗೇರಿ, ತರೀಕೆರೆ ಈ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಸಿಬ್ಬಂದಿಯನ್ನು ಹೆಚ್ಚು ಜಾಸ್ತಿ ನಿಯೋಜಿಸಲಾಗಿದೆ.

ಪೊಲೀಸರನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ವ್ಯಾಪ್ತಿ ಬಿಟ್ಟು ಬೇರೆ ಕ್ಷೇತ್ರಗಳಿಗೆ ನಿಯೋಜಿಸಲಾಗಿದೆ. ತಪಾಸಣೆ ನಿಟ್ಟಿನಲ್ಲಿ ಐದೂ ಕ್ಷೇತ್ರಗಳಲ್ಲಿ ತಲಾ ಎರಡು ಚೆಕ್‌ಪೋಸ್ಟ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿವರ ನೀಡಿದರು.

12ರಂದು ಮಧ್ಯರಾತ್ರಿವರೆಗೆ ಹಾಗೂ 14ರಂದು ಮಧ್ಯರಾತ್ರಿಯಿಂದ 15ರಂದು ಮಧ್ಯರಾತ್ರಿವರೆಗೆ, 14ರಂದು ಮಧ್ಯರಾತ್ರಿಯಿಂದ 15ರಂದು ಮಧ್ಯರಾತ್ರಿಯವರೆಗೆ ಮದ್ಯಪಾನ ನಿರೋಧ ದಿನ ಎಂದು ಘೋಷಿಸಲಾಗಿದೆ. ಮದ್ಯ ಮಾರಾಟ, ಶೇಖರಣೆ, ಸಾಗಣೆ ನಿಷೇಧಿಸಲಾಗಿದೆ. 12ರಂದು ಮಧ್ಯರಾತ್ರಿವರೆಗೆ,
15ರಂದು ಬೆಳಿಗ್ಗೆ 6 ಗಂಟೆಯಿಂದ 15ರಂದು ಮಧ್ಯರಾತ್ರಿವರೆಗೆ ನಿಷೇಧಾಜ್ಞೆ (144ನೆ ಸೆಕ್ಷನ್‌) ಜಾರಿಯಲ್ಲಿರುತ್ತದೆ ಎಂದರು.

ಜಿಲ್ಲೆಯಲ್ಲಿ 76 ಗಸ್ತು (ಪ್ಯಾಟ್ರೊಲ್‌) ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಸಂಚಾರಿ ತಂಡಗಳು ಮತಗಟ್ಟೆಗಳಿಗೆ ನಿರಂತರವಾಗಿ ಗಸ್ತು ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ. ವಿಚಕ್ಷಣಾ ದಳವನ್ನು ಜಾಸ್ತಿ ಮಾಡಿದ್ದೇವೆ. ನಕ್ಸಲ್‌ ಪ್ರಭಾವಿತ ಪ್ರದೇಶದಲ್ಲಿ ಭದ್ರತೆ ಹೆಚ್ಚು ಒತ್ತು ನೀಡಿದ್ದೇವೆ. ಅಲ್ಲಿ ನಕ್ಸಲ್‌ ನಿಗ್ರಹ ಪಡೆಯವರು ಕೂಂಬಿಂಗ್‌ನಲ್ಲಿ ಇರುತ್ತಾರೆ ಎಂದರು.

8,949 ಬಂದೂಕು ಜಮೆ: ಜಿಲ್ಲೆಯಲ್ಲಿ ಪರವಾನಗಿ ಪಡೆದ 9,121 ಬಂದೂಕುಗಳು ಇವೆ. ಈ ಪೈಕಿ 8,949 ಜಮೆ ಮಾಡಿಕೊಳ್ಳಲಾಗಿದೆ. 172 ಮಂದಿ ವಿನಾಯಿತಿ ನೀಡಲಾಗಿದೆ ಎಂದರು.

‘ಮತದಾನ ಮಾಡಿ’

ಚಿಕ್ಕಮಗಳೂರು: ಮತದಾನ ಮಹಾದಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಿದವರೇ ಮಹಾನ್‌ ದಾನಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕುಂದೂರು ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಎಲ್ಲರೂ ಮತದಾನ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ ಹಂಚಿಕೆ; 10 ಲಕ್ಷ ನಗದು ಜಪ್ತಿ

ನಗರ, ಸಖರಾಯಪಟ್ಟಣದಲ್ಲಿ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಸಂಜೆಯವರೆಗಿನ ಅವಧಿಯಲ್ಲಿ ಐದು ಹಣ ಹಂಚಿಕೆ ಪ್ರಕರಣಗಳು ಪತ್ತೆಯಾಗಿವೆ. ಐದು ಪ್ರಕರಗಳಿಂದ ₹ 10 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದರು.

ಮೂರೂ ಪಕ್ಷಗಳ ಕಡೆಯವರು ಸಿಕ್ಕಿ ಹಾಕಿಕೊಂಡಿದ್ದಾರೆ. ಸಖರಾಯಪಟ್ಟಣದಲ್ಲಿ ಹಣಹಂಚಿಕೆಯಲ್ಲಿ ತೊಡಗಿದ್ದ ಪ್ರಮುಖ ಪಕ್ಷವೊಂದರ ಅಭ್ಯರ್ಥಿಯ ಸಂಬಂಧಿಯನ್ನು ವಶಕ್ಕೆ ಪಡೆಯಲಾಗಿದೆ. ₹ 7 ಲಕ್ಷ ನಗದು ಜಪ್ತಿ ಮಾಡಿಲಾಗಿದೆ’ ಎಂದು ವಿವರಿಸಿದರು.

ಹಣ ಕೊಟ್ಟಿದ್ದಕ್ಕೆ ಪಟ್ಟಿಯಲ್ಲಿ ಹೆಸರು ಗುರುತು ಹಾಕಿದ್ದಾರೆ, ಮೊತ್ತ ನಮೂದಿಸಿದ್ದಾರೆ, ಹಾಳೆಯಲ್ಲಿ ಹೆಸರು ಬರೆದುಕೊಂಡಿದ್ದಾರೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

22 ಪ್ರಕರಣ ದಾಖಲು

ನೀತಿ ಸಂಹಿತೆ ಉಲ್ಲಂಘನೆಯಡಿ ಮೊದಲ ದಿನದಿಂದ ಈವರೆಗೆ 22 ಪ್ರಕರಣಗಳು ದಾಖಲಾಗಿವೆ. ₹ 55.08 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಒಂದು ಸಾವಿರ ಲೀಟರ್‌ ಅಕ್ರಮ ಮದ್ಯ ವಶ: ಒಟ್ಟು 1 ಸಾವಿರ ಲೀಟರ್‌ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 118 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಕ್ಷೇತ್ರವಾರು ಮತದಾರರು(ಒಟ್ಟು ಮತದಾರರು 9,37,199)
ಕ್ಷೇತ್ರ ಪುರುಷ ಮಹಿಳೆ ಇತರೆ
ಶೃಂಗೇರಿ 82,003 84,019 4
ಮೂಡಿಗೆರೆ 84,015 86,224 11
ಚಿಕ್ಕಮಗಳೂರು 1,07,942 1,08,264 24
ತರೀಕೆರೆ 92,129 90,716 8
ಕಡೂರು 1,01,762 1,00,067 11
ಒಟ್ಟು 4,67,851 4,69,290 58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT