ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮತ್ತೆ ಐದು ವರ್ಷದ ಅವಧಿ: ಪ್ರಧಾನಿ ಗಾದಿಗೆ ಮತ್ತೊಮ್ಮೆ ಮೋದಿ

ಕೇಂದ್ರದಲ್ಲಿ ಮತ್ತೆ ಅರಳಿದ ಕಮಲ
Last Updated 23 ಮೇ 2019, 19:39 IST
ಅಕ್ಷರ ಗಾತ್ರ

ನವದೆಹಲಿ: ದೇಶದ ‘ಕಾವಲುಗಾರನೇ ಕಳ್ಳ’ (ಚೌಕೀದಾರ್ ಚೋರ್) ಎಂದು ಪ್ರಧಾನಿಯನ್ನು ಮೂದಲಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಆರೋಪವು ಮತದಾರರ ಮನಸ್ಸಿನ ಮೇಲೆ ಕಿಂಚಿತ್ತೂ ಪರಿಣಾಮ ಉಂಟು ಮಾಡಲಿಲ್ಲ. ಐದು ವರ್ಷಗಳ ಹಿಂದೆ ಅಭೂತಪೂರ್ವ ಗೆಲುವಿನ ಸಾಧನೆಯೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ನರೇಂದ್ರ ಮೋದಿಯವರ ಮೋಡಿ ಈಗಲೂ ಪ್ರಬಲವಾಗಿದೆ ಎಂಬುದನ್ನು ಗುರುವಾರ ಪ್ರಕಟವಾಗಿರುವ ಲೋಕಸಭೆಯ ಚುನಾವಣೆಯ ಫಲಿತಾಂಶ ಸಾರಿಹೇಳಿದೆ.

ಸತತ 10 ವರ್ಷಗಳ ಯುಪಿಎ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು, 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ
ಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದ ಜನ, ಇದೀಗ ಮತ್ತೆ ಅದೇ ‘ಕೂಟ’ವನ್ನು ಮುಕ್ತ ಮನಸ್ಸಿನಿಂದ ಆಶೀರ್ವದಿಸಿದ್ದಾರೆ.

2014ರಲ್ಲಿ ಪ್ರಚಂಡವಾಗಿ ಬೀಸಿದ್ದ ಮೋದಿ ಅಲೆಯೆದುರು ವಿಪಕ್ಷಗಳು ದೂಳೀಪಟವಾಗಿದ್ದವು; ಈ ಬಾರಿ ಅದು ಪುನರಾವರ್ತನೆ ಆಗಬಾರದು ಎಂದು ವಿರೋಧ ಪಕ್ಷಗಳು ನಡೆಸಿದ ಪ್ರಯತ್ನಗಳತ್ತ ಮತದಾರ ಗಮನವನ್ನೇ ಕೊಟ್ಟಿಲ್ಲ.

‘ಬಡಜನರನ್ನು ಮರೆತು, ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವತ್ತಲೇ ನರೇಂದ್ರ ಮೋದಿ ಗಮನ ಹರಿಸಿದ್ದಾರೆ. ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿಕೇಂದ್ರ ಸರ್ಕಾರ ವಿಫಲವಾಗಿದೆ’ ಎಂಬ ವಿಪಕ್ಷಗಳ ಟೀಕೆಗಳಿಗೆ ಕಿವಿಗೊಡದ ಜನತೆ, ಮತ್ತೆ ‘ಮಾತಿನ ಮಲ್ಲ’ನಿಗೇ ಮಣೆ ಹಾಕಿದ್ದಾರೆ.

‘ರಫೇಲ್’ ಭ್ರಷ್ಟಾಚಾರ, ಬ್ಯಾಂಕುಗಳಿಗೆ ವಂಚಿಸಿದವರ ಪಲಾಯನಕ್ಕೆ ಬೆಂಬಲ, ಉದ್ಯೋಗಕ್ಕೆ ಕನ್ನ ಹಾಕಿದ ನೋಟು ರದ್ದತಿ, ಸಣ್ಣಪುಟ್ಟ ವ್ಯಾಪಾರಗಳಿಗೆ ಕಲ್ಲು ಹಾಕಿದ ಜಿಎಸ್‌ಟಿ ಕಾಯ್ದೆ, ವಿದೇಶ ಪ್ರವಾಸ, ಮರಳಿ ಬಾರದ ಕಪ್ಪು ಹಣ, ಸಂವಿಧಾನ ಬದಲಿಸುವ ಹುನ್ನಾರ, ರಾಷ್ಟ್ರೀಯತೆ ಮತ್ತು ಹುಸಿ ದೇಶಭಕ್ತಿಯ ಪ್ರಚಾರ ಎಂಬಂಥ ವಿಪಕ್ಷಗಳ ಆರೋಪಗಳಿಗೆ ಸ್ಪಂದಿಸುವ ಗೋಜಿಗೆ ಹೋಗದ ದೇಶದ ಮತದಾರರು ಮತ್ತೆ ಮೋದಿ ಆಡಳಿತಕ್ಕೆ ಜೈಕಾರ ಕೂಗಿದ್ದಾರೆ.

ಚುನಾವಣೆ ಘೋಷಣೆಗೆ ತುಸು ಮೊದಲು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ದಾಳಿ, ಬಾಲಾಕೋಟ್‌ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ್ದ ವಾಯು ದಾಳಿ, ಎರಡೇ ದಿನಗಳಲ್ಲಿ ಪಾಕಿಸ್ತಾನದಿಂದ ಮರಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಮುಂತಾದ ಬೆಳವಣಿಗೆಗಳು ಮತದಾರರ ಮನಸನ್ನು ಬಿಜೆಪಿಯತ್ತ ಹೊರಳಿಸಿರುವುದು ಈ ಫಲಿತಾಂಶದ ಮೂಲಕ ಬಹಿರಂಗಗೊಂಡಿದೆ.

ಅಂತೆಯೇ ಕಳೆದ ಬಾರಿ ಗಳಿಸಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದು ಬೀಗಿದೆ. ‘ಕಮಲ’ದ ಚಿಹ್ನೆಯಡಿ ಸ್ಪರ್ಧಿಸಿದ್ದ ಅಪರಿಚಿತ ಮುಖಗಳೆಲ್ಲ ‘ನರೇಂದ್ರ ಮೋದಿ’ ಎಂಬ ‘ನಾಮಬಲ’ದಿಂದಲೇ ಸಂಸತ್‌ ಭವನದೊಳಗೆ ಆಸೀನರಾಗುವಂತಾಗಿದೆ. ‘ಸೋಲಿಲ್ಲದ ಸರದಾರರು’ ಎಂದೇ ಬೀಗುತ್ತಿದ್ದ ವಿಪಕ್ಷದ ಮುಖಂಡರಿಗೆ ಸೋಲಿನ ಕಹಿ ಅನುಭವ ಆಗಿದೆ.

‘ಬಿಜೆಪಿಯನ್ನು ಮತ್ತೆ ಅಧಿಕಾರದ ಸನಿಹಕ್ಕೆ ಸುಳಿಯದಂತೆ ದೂರವಿರಿಸಬೇಕು’ ಎಂಬ ವಿಪಕ್ಷಗಳ ಸರ್ವಪ್ರಯತ್ನ ವೈಫಲ್ಯದ ಸುಳಿಗೆ ಸಿಲುಕಿದ್ದು, ಬಡ ಕುಟುಂಬಗಳಿಗೆ ಮಾಸಿಕ ₹ 6,000 ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದ್ದ ‘ನ್ಯಾಯ್‌’ ಯೋಜನೆಗೂ ಜನಮನ್ನಣೆ ಲಭಿಸಿಲ್ಲ.

ಲಾಲ್‌ಕೃಷ್ಣ ಅಡ್ವಾಣಿ ಆದಿಯಾಗಿ ಪಕ್ಷ ಕಟ್ಟಿ ಬೆಳೆಸಿದ್ದ ಘಟಾನುಘಟಿಗಳನ್ನು ಕಡೆಗಣಿಸಿಯೂ ಮೋದಿ– ಅಮಿತ್‌ ಶಾ ಜೋಡಿ ಸತತ ಎರಡನೇ ಬಾರಿಗೆ ಸ್ವಂತ ಬಲದಿಂದಲೇ ದೆಹಲಿಯ ಗದ್ದುಗೆ ಏರುವ ಎತ್ತರ ತಲುಪಿ ಸಹಜವಾಗಿಯೇ ಸಂಘ ಪರಿವಾರದ ಮೆಚ್ಚುಗೆಗೆ ಪಾತ್ರವಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸೌಲಭ್ಯಗಳ ರದ್ದತಿ, ಸಮಾನ ನಾಗರಿಕ ಕಾಯ್ದೆ ಜಾರಿಯಂತಹ ಭರವಸೆಗಳ ಈಡೇರಿಕೆಯತ್ತ ಬಿಜೆಪಿ ಈಗ ಆಲೋಚಿಸಬಹುದೇ ಎಂಬ ಪ್ರಶ್ನೆಗಳನ್ನೂ ಈ ಫಲಿತಾಂಶ ಮತ್ತೆ ಮುಂಚೂಣಿಗೆ ತಂದಿದೆ.

ಮೂರು ದಿನಗಳ ಹಿಂದೆ ಪ್ರಕಟವಾಗಿದ್ದ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ, ಸರ್ಕಾರರಚಿಸುವ ದೊಡ್ಡ ಕನಸನ್ನು ಕಂಡಿದ್ದ ವಿಪಕ್ಷಗಳಿಗೆ ಮುಖಭಂಗವಾಗಿದೆ.

ಫಲಿತಾಂಶದಲ್ಲಿ ಏರುಪೇರು ಆಗಬಹುದು ಎಂದೇ ಭಾವಿಸಿ, ಬಿಜೆಪಿ ವಿರೋಧಿ ಶಕ್ತಿಗಳನ್ನೆಲ್ಲ ಒಟ್ಟುಗೂಡಿಸಲು ಆಂಧ್ರ ಪ್ರದೇಶದ ಎನ್‌.ಚಂದ್ರಬಾಬು ನಾಯ್ಡು ಕೈಗೊಂಡಿದ್ದ ತ್ವರಿತ ಸಂಚಾರದ ಆಶಯಕ್ಕೆ ಆಸ್ಪದವೇ ದೊರೆಯದಂತಾಗಿದೆ. ಅಂತಹ ಪ್ರಯತ್ನಕ್ಕೆ ಕೈಹಾಕಿದವರನ್ನು ಬಿಜೆಪಿಯ ಗೆಲುವು ನಗೆಪಾಟಲಿಗೆ ಈಡು ಮಾಡಿದೆ.

ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಅಬ್ಬರದೆದುರು ಕಮಲವನ್ನು ಅರಳಿಸುವ ಮೋದಿ– ಶಾ ಪ್ರಯತ್ನಕ್ಕೆ ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲೇ ಯಶಸ್ಸು ಲಭಿಸಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಪ್ರಧಾನಿಯ ಲೆಕ್ಕಾಚಾರಕ್ಕೆ ಅಲ್ಲಿನ ಮತದಾರರು ತಣ್ಣೀರೆರಚಿದ್ದಾರೆ. ಆದರೆ, ಇತರ ರಾಜ್ಯಗಳಲ್ಲಿ ಸಾಧಿಸಿದ ಮೈತ್ರಿ ಸಫಲವಾಗಿರುವುದು ಕಳೆದ ಬಾರಿಗಿಂತಲೂ ಈ ಬಾರಿಯ ಸಾಧನೆಯು ‘ಸುಧಾರಣೆ’ ಎಂಬಂತೆ ದಾಖಲಾಗಿದೆ.

ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷದೊಂದಿಗೆ ಬಿಜೆಪಿಯು ಬಿಹಾರದಲ್ಲಿ ಮಾಡಿಕೊಂಡಿದ್ದ ಮೈತ್ರಿಗೇ ಜನರು ಒಲವು ತೋರಿದ್ದಾರೆ. ಲಾಲು ಪ್ರಸಾದ್‌ ಅವರ ಆರ್‌ಜೆಡಿ– ಕಾಂಗ್ರೆಸ್‌ ಮೈತ್ರಿ ಹೀನಾಯವಾಗಿ ಸೋಲು ಕಂಡಿದೆ.

ಮೋದಿ ಹೆಸರಿನ ಮಹಾ ಸುನಾಮಿಯನ್ನು ತಡೆಯಲೆಂದೇ ಉತ್ತರ ಪ್ರದೇಶದಲ್ಲಿ ಒಂದಾಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಮಾಯಾವತಿಯವರ ಮಹಾ ಮೈತ್ರಿಗೂ ದಿಕ್ಕು ತಪ್ಪಿದಂತಾಗಿದೆ.

ದಕ್ಷಿಣದ ತಮಿಳುನಾಡು ಮತ್ತು ಕೇರಳಗಳಲ್ಲಿ ಕಾಂಗ್ರೆಸ್‌ ಪಕ್ಷವು ‘ಜಾಣತನ’ದೊಂದಿಗೆ ಮಾಡಿಕೊಂಡಿರುವ ಮೈತ್ರಿಗೆ ತುಸು ಸಮಾಧಾನ ತರುವಂತಹ ಫಲಿತಾಂಶ ಸಿಕ್ಕಿದೆ.

ಮೈತ್ರಿಕೂಟ – ಗಳಿಸಿದ ಸ್ಥಾನ

ಎನ್‌ಡಿಎ – 349

ಯುಪಿಎ – 93

ಇತರೆ – 100

ಪಕ್ಷ –ಗಳಿಸಿದ ಸ್ಥಾನ

ಬಿಜೆಪಿ – 303

ಜೆಡಿಯು – 16

ಶಿವಸೇನಾ – 18

ಕಾಂಗ್ರೆಸ್ – 52

ಡಿಎಂಕೆ – 23

ವೈಎಸ್‌ಆರ್‌ಸಿ – 22

ಬಿಎಸ್‌ಪಿ – 10

ಬಿಜೆಡಿ – 13

ಟಿಆರ್‌ಎಸ್‌ – 9

ಟಿಎಂಸಿ – 22

***

ಇದು ಪ್ರಜಾಪ್ರಭುತ್ವದ ಗೆಲುವು. ನನಗಾಗಿ ನಾನು ಎಂದೂ ಕೆಲಸ ಮಾಡುವುದಿಲ್ಲ. ದುರುದ್ದೇಶದಿಂದ ಎಂದೂ ಕೆಲಸ ಮಾಡುವುದಿಲ್ಲ. ನನ್ನ ಜೀವನದ ಪ್ರತಿಯೊಂದು ಕ್ಷಣವೂ ದೇಶಕ್ಕಾಗಿ ಮೀಸಲು.

– ನರೇಂದ್ರ ಮೋದಿ, ಪ್ರಧಾನಿ

ಈ ದೇಶದಲ್ಲಿ ಜನರೇ ಮಾಲೀಕರು. ಜನರು ಸ್ಪಷ್ಟ ತೀರ್ಪು ನೀಡಿದ್ದಾರೆ. ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ನಾನು ಅಭಿನಂದಿಸುತ್ತೇನೆ. ಸ್ಮೃತಿ ಇರಾನಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಈ ಜಯ ಇಡೀ ದೇಶದ ಜಯ. ನರೇಂದ್ರ ಮೋದಿ ಸರ್ಕಾರದ ಮೇಲೆ ಜನರು ಇರಿಸಿದ ವಿಶ್ವಾಸಕ್ಕೆ ಶಿರಬಾಗಿ ಧನ್ಯವಾದ ಹೇಳುತ್ತೇನೆ. ಇದು ಯುವಜನರು, ಬಡವರು ಹಾಗೂ ರೈತರ ವಿಶ್ವಾಸಕ್ಕೆ ಸಂದ ಜಯ.

– ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT