ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಗೃಹಗಳಲ್ಲಿ ಅಮಾನವೀಯ ಸ್ಥಿತಿ: ರಾಷ್ಟ್ರೀಯ ಮಹಿಳಾ ಆಯೋಗದ ತನಿಖಾ ವರದಿ

Last Updated 17 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದ ಕೆಲವು ರಕ್ಷಣಾ ಗೃಹಗಳಲ್ಲಿ ಉಳಿದುಕೊಂಡಿರುವ ಮಹಿಳೆಯರು ದಯನೀಯ ಸ್ಥಿತಿಯಲ್ಲಿ ಇರುವುದು ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಿಂದ ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿನ ಕೇಂದ್ರಗಳಲ್ಲಿ ಮಹಿಳೆಯರಿಗೆ ದೈಹಿಕ ಹಿಂಸೆ ನೀಡಲಾಗುತ್ತಿದ್ದರೆ, ಒಡಿಶಾದಲ್ಲಿ ಎಚ್‌ಐವಿ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ, ಉತ್ತರ ಪ್ರದೇಶದ ಗೃಹಗಳಲ್ಲಿ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆಯೋಗದ ತನಿಖಾ ಸಮಿತಿಯು ಈ ರಾಜ್ಯಗಳಲ್ಲಿ ಪರಿಶೀಲನೆ ವೇಳೆ ಕಂಡುಕೊಂಡ ಸಂಗತಿಗಳನ್ನು ವಿವರಿಸಿದೆ.

ಪಶ್ಚಿಮ ಬಂಗಾಳದ ಐದು, ಒಡಿಶಾ ಮತ್ತು ಕರ್ನಾಟಕದ ತಲಾ ಎಂಟು ಮತ್ತು ಉತ್ತರ ಪ್ರದೇಶದ ಐದು ರಕ್ಷಣಾ ಗೃಹಗಳಲ್ಲಿ ಸಮಿತಿ ಪರಿಶೀಲನೆ ನಡೆಸಿತ್ತು.

ಈ ಪುನರ್ವಸತಿ ಕೇಂದ್ರಗಳು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರು ಮತ್ತು ನಿರ್ಗತಿಕರಿಗಾಗಿ ಕೇಂದ್ರ ಸರ್ಕಾರದ ನೆರವಿನಲ್ಲಿ ಅಥವಾ ಸ್ವಯಂ ಸೇವಾ ಸಂಸ್ಥೆಯ ಮೂಲಕ ನಡೆಸಲಾಗುತ್ತಿರುವ ತಾತ್ಕಾಲಿಕ ಆಶ್ರಯ ತಾಣಗಳಾಗಿವೆ. ಒಟ್ಟು 26 ಸ್ವಾಧಾರ್‌ ಗೃಹಗಳ (ರಕ್ಷಣಾ ಗೃಹ) ಪೈಕಿ ಒಂದು ಕೇಂದ್ರ ಮಾತ್ರ ಯೋಜನೆಯ ಮಾರ್ಗದರ್ಶಿ ಸೂತ್ರಗಳ ಅನುಸಾರ ನಡೆಯುತ್ತಿದೆ.

ಕರ್ನಾಟಕದ ಕೇಂದ್ರಗಳಲ್ಲಿ ಖಿನ್ನತೆಗೆ ಒಳಗಾಗಿರುವ ಮಹಿಳೆಯರಿಗೆ ಮಾನಸಿಕ ಸಲಹೆಯನ್ನಾಗಲಿ, ವೃತ್ತಿ ತರಬೇತಿಯನ್ನಾಗಲಿ ನೀಡಿಲ್ಲ. ಒಂದು ಕೇಂದ್ರವಂತೂ ಕಾಗದದಲ್ಲಿ ಮಾತ್ರವೇ ಇದೆ.

ರಾಜ್ಯ ಸರ್ಕಾರ ನೀಡಿದ್ದ ಅಧಿಕೃತ ವಿಳಾಸವನ್ನು ಹುಡುಕಿಕೊಂಡು, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿರುವ ಕೇಂದ್ರಕ್ಕೆ ಸಮಿತಿಯ ಸದಸ್ಯರು ತೆರಳಿದ್ದರು. ಆದರೆ, ಅಲ್ಲಿ ಅಂತಹ ಕೇಂದ್ರವೇ ಅಸ್ತಿತ್ವದಲ್ಲಿ ಇರಲಿಲ್ಲ. ಬದಲಿಗೆ, ಸಂಸ್ಥೆಯ ನಾಮಫಲಕವಷ್ಟೇ ಇತ್ತು ಮತ್ತು ಕೊಠಡಿಗೆ ಬೀಗ ಹಾಕಲಾಗಿತ್ತು.

ಉತ್ತರ ಪ್ರದೇಶದ ಕೇಂದ್ರಗಳಲ್ಲಿ ಮಾನಸಿಕ ತೊಂದರೆಯಲ್ಲಿರುವ ಮಹಿಳೆಯರು ಉಳಿದುಕೊಂಡಿದ್ದಾರೆ. ಅವರಿಗೆ ಯಾವುದೇ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ. ಅವರು ನೆಲದ ಮೇಲೆ ಉರುಳಾಡುತ್ತಿದ್ದುದು ಸಮಿತಿಯ ಪರಿಶೀಲನೆ ವೇಳೆ ತಿಳಿದುಬಂತು. ರಕ್ಷಣಾ ಗೃಹದ ಕೌನ್ಸೆಲರ್‌ ತಮಗೆ ದೈಹಿಕ ಹಿಂಸೆ ನೀಡುತ್ತಿರುವುದಾಗಿ ಪಶ್ಚಿಮ ಬಂಗಾಳ ಕೇಂದ್ರದ ವಾಸಿಗಳು ದೂರಿದರು. ಈ ಕೇಂದ್ರವು ಕಿಕ್ಕಿರಿದ ಜೈಲಿನಂತಿದೆ, ಇಡೀ ಕಟ್ಟಡ ಅನಾರೋಗ್ಯಕರ ವಾತಾವರಣದಿಂದ ಕೂಡಿದೆ ಎಂದು ವರದಿ ವಿವರಿಸಿದೆ.

ಸಿ.ಸಿ.ಟಿ.ವಿ ಅಳವಡಿಕೆಗೆ ಸೂಚನೆ
ನವದೆಹಲಿ (ಪಿಟಿಐ):
ದೇಶದ ರಕ್ಷಣಾ ಗೃಹಗಳಲ್ಲಿ ವಾಸಿಸುವ ಮಹಿಳೆಯರಿಗೆ ಸೂಕ್ತ ಆರೈಕೆ ಸಿಗುತ್ತಿರುವುದನ್ನು ಖಚಿತಪಡಿಸಲು ಸಿ.ಸಿ.ಟಿ.ವಿ ಅಳವಡಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ದೇಶನ ನೀಡಿದೆ.

ರಕ್ಷಣಾ ಗೃಹಗಳಲ್ಲಿ ಮಹಿಳೆಯರಿಗೆ ದೈಹಿಕ ಹಿಂಸೆ ಮತ್ತು ವೈದ್ಯಕೀಯ ಸೇವೆ ದೊರೆಯದಿರುವ ಕುರಿತ ಮಹಿಳಾ ಆಯೋಗದ ವರದಿ ಹಿನ್ನೆಲೆಯಲ್ಲಿ ಸಚಿವಾಲಯ ಈ ಸೂಚನೆ ನೀಡಿದೆ.

‘ತಮ್ಮ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ರಕ್ಷಣಾ ಗೃಹಗಳ ಪಟ್ಟಿ ನೀಡಬೇಕು, ಅವುಗಳ ಕಾರ್ಯಕ್ಷಮತೆ ಬಗ್ಗೆ ವಿವರ ನೀಡಬೇಕು’ ಎಂದು ಸಚಿವಾಲಯದ ಕಾರ್ಯದರ್ಶಿ ರಾಕೇಶ್‌ ಶ್ರೀವಾತ್ಸವ ಪತ್ರದಲ್ಲಿ ತಿಳಿಸಿದ್ದಾರೆ.

‘ಹೊರಗಿನವರು, ಪುರುಷರನ್ನು ಈ ಕೇಂದ್ರಗಳ ಒಳಗೆ, ಅದರಲ್ಲೂ ವಿಶೇಷವಾಗಿ ಸಂಜೆವೇಳೆ ಬಿಡಬಾರದು. ಈ ಕೇಂದ್ರಗಳು ಸೂಕ್ತ ಸ್ಥಳ ಗಳಲ್ಲಿ ಇರಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.

ವೆಬ್‌ಸೈಟ್‌ನಲ್ಲಿ ಹಾಕಲು ಸಲಹೆ
ರಕ್ಷಣಾ ಗೃಹ ವಾಸಿಗಳ ವಿವರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕುವಂತೆ, ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳು ಮೂರು ತಿಂಗಳಿಗೊಮ್ಮೆ ಈ ಕೇಂದ್ರಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವುದನ್ನು ಕಡ್ಡಾಯ ಮಾಡುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಸಲಹೆ ನೀಡಿದ್ದಾರೆ.

ಸೋಷಿಯಲ್‌ ವರ್ಕ್‌ ಅಥವಾ ಸೋಷಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಕೇಂದ್ರಗಳಲ್ಲಿದ್ದಾರೆ. ಆದರೆ, ಮಾನಸಿಕವಾಗಿ ನೊಂದಿರುವ ಇಲ್ಲಿನ ವಾಸಿಗಳಿಗೆ ಅತ್ಯಗತ್ಯವಾದ ಯಾವುದೇ ರೀತಿಯ ಕೌನ್ಸೆಲಿಂಗ್‌ ನೀಡಲು ಇವರಿಗೆ ಸಾಧ್ಯವಿಲ್ಲ. ಹೀಗಾಗಿ, ಕ್ಲಿನಿಕಲ್‌ ಸೈಕಾಲಜಿ ಪದವೀಧರರನ್ನು ಕೌನ್ಸೆಲರ್‌ಗಳಾಗಿ ನೇಮಿಸಬೇಕು ಎಂದಿದ್ದಾರೆ.

ಮಾನಸಿಕ ಅಸ್ವಸ್ಥರನ್ನು ಉತ್ತಮ ಚಿಕಿತ್ಸೆಗಾಗಿ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಹಾಗೂ 60ಕ್ಕಿಂತ ಹೆಚ್ಚು ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT