ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ ಪತ್ತೆ

ಗ್ರೇಟರ್‌ ನೋಯಿಡಾದ ಶಿವ ನಾಡಾರ್ ವಿ.ವಿ. ‍ತಂಡದಿಂದ ಸಂಶೋಧನೆ
Last Updated 10 ಅಕ್ಟೋಬರ್ 2019, 20:27 IST
ಅಕ್ಷರ ಗಾತ್ರ

ನವದೆಹಲಿ: ಪ್ಲಾಸ್ಟಿಕ್ ಅನ್ನು ಜೈವಿಕವಾಗಿ ಕರಗಿಸುವ ಸಾಮರ್ಥ್ಯವಿರುವ ಎರಡು ಬ್ಯಾಕ್ಟೀರಿಯಾಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿ ದೊಡ್ಡ ತೊಡಕಾಗಿರುವ ಸಂದರ್ಭದಲ್ಲಿ ಈ ಸಂಶೋಧನೆಯು ಮಹತ್ವ ಪಡೆದಿದೆ.

ಗ್ರೇಟರ್‌ ನೋಯಿಡಾದಲ್ಲಿನ ಶಿವ ನಾಡಾರ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಂಶೋಧಕರ ತಂಡವು ಈ ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿರುವ ಜೌಗು ಪ್ರದೇಶದಲ್ಲಿನ ಬ್ಯಾಕ್ಟೀರಿಯಾಗಳ ವೈವಿಧ್ಯವನ್ನು ಪರಿಶೀಲಿಸಲಾಗುತ್ತಿತ್ತು. ಆಗ, ಒಂದು ಬಾರಿ ಬಳಸಿ ಬಿಸಾಡುವ ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಅನ್ನು ಕರಗಿಸುವ ಬ್ಯಾಕ್ಟೀರಿಯಾಗಳೂ ಪತ್ತೆಯಾಗಿವೆ. ಇವುಗಳ ಮೇಲೆ ದೀರ್ಘಾವಧಿಯ ಅಧ್ಯಯನ ನಡೆಸಲಾಗಿದೆ ಎಂದು ಸಂಶೋಧಕರ ತಂಡ ಹೇಳಿದೆ.

‘ಭಾರತದಲ್ಲಿ ಪ್ರತಿ ವರ್ಷ ಸುಮಾರು 14 ಕೋಟಿ ಟನ್‌ಗಳಷ್ಟು ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಬಳಸಲಾಗುತ್ತದೆ.ಇವುಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಈ ಬ್ಯಾಕ್ಟೀರಿಯಾಗಳನ್ನು ಬಳಸಿಕೊಂಡು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಬಹುದೇ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇವು ಗಳನ್ನು ಕೃತಕ ವಾತಾವರಣದಲ್ಲಿ ಅಭಿವೃದ್ಧಿಪಡಿಸುವ ವಿಧಾನ ಮತ್ತು ಕಡಿಮೆ ವೆಚ್ಚದಲ್ಲಿ ಇವನ್ನು ಅಭಿವೃದ್ಧಿಪಡಿಸುವ ವಿಧಾನಗಳ ಬಗೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ’ ಎಂದು ತಂಡದ ಮುಖ್ಯಸ್ಥೆ ರಿಷಾ ಪ್ರಿಯದರ್ಶಿನಿ ಹೇಳಿದ್ದಾರೆ.

ಪಾಲಿಸ್ಟಿರೇನ್ ಪ್ಲಾಸ್ಟಿಕ್‌
ಒಮ್ಮೆ ಮಾತ್ರ ಬಳಸಿ ನಂತರ ಬಿಸಾಡಬಹುದಾದ ಅಗತ್ಯಗಳಲ್ಲಿ ಪಾಲಿಸ್ಟಿರೇನ್ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಇವುಗಳ ರಾಸಾಯನಿಕ ಬಂಧ ಸಂಕೀರ್ಣವಾಗಿ ಇರುವುದರಿಂದ ಇವುಗಳು ಜೈವಿಕವಾಗಿ ಕರಗಲು ಸುಮಾರು 400 ವರ್ಷ ಬೇಕಾಗುತ್ತದೆ. ಹೀಗಾಗಿ ಈ ಸ್ವರೂಪದ ಪ್ಲಾಸ್ಟಿಕ್‌ ತ್ಯಾಜ್ಯದ ವಿಲೇವಾರಿ ದೊಡ್ಡ ತೊಡಕಾಗಿದೆ.(ಸಿ8ಎಚ್‌8)ಎನ್‌ ಇದು ಪಾಲಿಸ್ಟಿರೇನ್ ಕಣದ ರಾಸಾಯನಿಕ ಸಂಯೋಜನೆ. ಒಂದು ಕಣದಲ್ಲಿ ಇಂಗಾಲದ ಎಂಟು ಅಣುಗಳು ಮತ್ತು ಜಲಜನಕದ ಎಂಟು ಅಣುಗಳು ಇರುತ್ತವೆ

ಬ್ಯಾಕ್ಟೀರಿಯಾಗಳು ಮಾಡುವುದೇನು?

1. ಬ್ಯಾಕ್ಟೀರಿಯಾಗಳು ತಮ್ಮ ಸಂಖ್ಯಾಭಿವೃದ್ಧಿಗೆ ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಅನ್ನೂ ಬಳಸಿಕೊಳ್ಳುತ್ತವೆ.

2. ಆರಂಭದಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್‌ನ ಮೇಲೆ ಗುಂಪುಗೂಡುತ್ತವೆ. ಅವುಗಳ ಸಂತಾನಾಭಿವೃದ್ಧಿಗೆ ಒಂದು ತೆಳು ಲೋಳೆ ಬೇಕಾಗುತ್ತದೆ. ಆ ಲೋಳೆಯನ್ನು ರಚಿಸಲು ಬ್ಯಾಕ್ಟೀರಿಯಾಗಳಿಗೆ ಇಂಗಾಲದ ಅವಶ್ಯಕತೆ ಇರುತ್ತದೆ.

3. ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ನಲ್ಲಿರುವ ಇಂಗಾಲದ ಅಣುಗಳನ್ನು ಈ ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುತ್ತವೆ. ರಾಸಾಯನಿಕ ಸಂಯೋಜನೆಯಿಂದ ಇಂಗಾಲವನ್ನು ಬಿಡಿಸಿಕೊಳ್ಳಲು ಈ ಬ್ಯಾಕ್ಟೀರಿಯಾಗಳು ಒಂದು ಸ್ವರೂಪದ ಕಿಣ್ವಗಳನ್ನು ಸ್ರವಿಸುತ್ತವೆ.

4. ಈ ಕಿಣ್ವವು ಇಂಗಾಲ ಮತ್ತು ಜಲಜನಕದ ನಡುವಣ ರಾಸಾಯನಿಕ ಬಂಧವನ್ನು ಒಡೆಯುತ್ತದೆ. ಇಂಗಾಲವನ್ನು ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುತ್ತವೆ. ಜಲಜನಕವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

5. ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಯಾಗುವುದರಿಂದ, ಪ್ಲಾಸ್ಟಿಕ್‌ನ ರಾಸಾಯನಿಕ ಸಂಯೋಜನೆಯ ವಿಭಜನೆಯು ವೇಗ ಪಡೆಯುತ್ತದೆ.

6. ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಜೈವಿಕವಾಗಿಯೇ ಕರಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT