ಗುರುವಾರ , ನವೆಂಬರ್ 21, 2019
20 °C
ಮುಂಬೈ ಮೆಟ್ರೊ ಯೋಜನೆಗಳಿಗೆ ಚಾಲನೆ

ಮೂಲಸೌಕರ್ಯ | ₹100 ಲಕ್ಷ ಕೋಟಿ ಹೂಡಿಕೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

Published:
Updated:
Prajavani

ಮುಂಬೈ: ಆಧುನಿಕ ಮೂಲಸೌಕರ್ಯ ಸೇವೆ ಒದಗಿಸಲು ಐದು ವರ್ಷಗಳಲ್ಲಿ ₹100 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಿಳಿಸಿದರು. 

‘₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆ ಗುರಿಯತ್ತ ಭಾರತ ಹೆಜ್ಜೆ ಹಾಕುತ್ತಿದ್ದು, ನಮ್ಮ ನಗರಗಳು ಕೂಡಾ 21ನೇ ಶತಮಾನದ ನಗರಗಳಾಗಿ ರೂಪುಗೊಳ್ಳಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮುಂಬೈನಲ್ಲಿ ಮೆಟ್ರೊ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, ಮುಂಬೈ ಆದಿಯಾಗಿ ಪ್ರಮುಖ ನಗರಗಳು ಮೂಲಸೌಕರ್ಯ ಕ್ಷೇತ್ರದ ಬಂಡವಾಳ ಹೂಡಿಕೆಯ ಲಾಭಪಡೆಯಲಿವೆ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ನಗರಗಳನ್ನು ಅಭಿವೃದ್ಧಿಪಡಿಸುವಾಗ ಸಂಪರ್ಕ, ಉತ್ಪಾದಕತೆ, ಸುಸ್ಥಿರತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದರು. 

ಸಾರಿಗೆ ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶದಿಂದ ಸಂಯೋಜಿತ ಸಾರಿಗೆ ವ್ಯವಸ್ಥೆ ರೂಪಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.  

ಮೆಟ್ರೊ ಜಾಲ ವಿಸ್ತರಣೆ: ಮೆಟ್ರೊ ಜಾಲ ದೇಶದಾದ್ಯಂತ ವಿಸ್ತರಣೆಯಾಗುತ್ತಿದ್ದು, ಇತ್ತೀಚಿನವರೆಗೂ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ಮೆಟ್ರೊ ಸೇವೆಯು 27 ನಗರಗಳಿಗೆ ವಿಸ್ತರಿಸಿದೆ ಎಂದು ಪ್ರಧಾನಿ ಹೇಳಿದರು. 

‘675 ಕಿ.ಮೀ ಉದ್ದದ ಮೆಟ್ರೊ ಮಾರ್ಗದಲ್ಲಿ ರೈಲು ಸೇವೆ ಚಾಲನೆಯಲ್ಲಿದೆ. ಈ ಪೈಕಿ 400 ಕಿ.ಮೀ ಮಾರ್ಗ ಕಳೆದ ಐದು ವರ್ಷಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. 850 ಕಿ.ಮೀ ಮಾರ್ಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 600 ಕಿ.ಮೀ ಮೆಟ್ರೊ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಮೋದಿ ವಿವರಿಸಿದರು.

₹3.5 ಲಕ್ಷ ಕೋಟಿ ವೆಚ್ಚದಲ್ಲಿ ಪ್ರತಿಮನೆಗೆ ನೀರು (ಔರಂಗಾಬಾದ್ ವರದಿ): 2024ರ ಹೊತ್ತಿಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಪೈಪ್‌ ಮೂಲಕ ನೀರು ಒದಗಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕಾಗಿ ಜಲಜೀವನ ಮಿಷನ್ ಅಡಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ ₹3.5 ಲಕ್ಷ ಕೋಟಿ ವೆಚ್ಚ ಮಾಡಲಾಗುವುದು ಎಂದರು.

ಈ ಮೂಲಕ ಗ್ರಾಮೀಣ ಭಾಗದಲ್ಲಿ ಶೌಚಾಲಯ ಸೌಲಭ್ಯ ಹಾಗೂ ನೀರು ಪೂರೈಸುವ ರಾಮಮನೋಹರ ಲೋಹಿಯಾ ಅವರ ಕನಸನ್ನು ನನಸು ಮಾಡಲಾಗುವುದು ಎಂದರು. 

ಬರಪೀಡಿತ ಮರಾಠವಾಡದಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಜಲಸಂವರ್ಧನೆ ಕ್ರಮಗಳನ್ನು ಅವರು ಶ್ಲಾಘಿಸಿದರು. 

ಉನ್ನತ ಮಟ್ಟದ ಕಾರ್ಯಪಡೆ ರಚನೆ

2024–25ರ ವೇಳೆಗೆ ₹ 100 ಲಕ್ಷ ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಿದೆ.

₹ 350 ಲಕ್ಷ ಕೋಟಿ ಆರ್ಥಿಕತೆಯ ಗುರಿ ತಲುಪಲು ಮೂಲಸೌಕರ್ಯ ಯೋಜನೆಗಳ ಮೇಲೆ 2019–20 ರಿಂದ 2024–25ರ ಅವಧಿಯಲ್ಲಿ ₹ 100 ಲಕ್ಷ ಕೋಟಿ ಹೂಡಿಕೆ ಮಾಡಬೇಕಿದೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದ ಕಾರ್ಯಪಡೆಯು ರಾಷ್ಟ್ರೀಯ ಮೂಲಸೌಕರ್ಯ ಕಾರ್ಯಸೂಚಿಯನ್ನು ಸಿದ್ಧಪಡಿಸಲಿದೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದನ್ನು ರಚನೆ ಮಾಡಿದ್ದಾರೆ.

ಸಾರಿಗೆ ಕ್ಷೇತ್ರಕ್ಕೆ ಅಭಿವೃದ್ಧಿಯ ವೇಗ

2023–24ರ ವೇಳೆಗೆ 325 ಕಿ.ಮೀ.ಗೆ ಮುಂಬೈ ಮೆಟ್ರೊ ಮಾರ್ಗ ವಿಸ್ತರಣೆ

ಮುಂದಿನ ದಿನಗಳಲ್ಲಿ ಮೆಟ್ರೊ ರೈಲು ಬೋಗಿಗಳು ಭಾರತದಲ್ಲಿಯೇ ತಯಾರಾಗಲಿವೆ

ಮೆಟ್ರೊ ಕಾಮಗಾರಿಗಳಿಂದ 10 ಸಾವಿರ ಎಂಜಿನಿಯರ್, 40 ಸಾವಿರ ಸಿಬ್ಬಂದಿಗೆ ಉದ್ಯೋಗ

ವಿಮಾನ ನಿಲ್ದಾಣ, ಬಂದರು ಸಂಪರ್ಕ, ಬುಲೆಟ್ ರೈಲು ಯೋಜನೆಗಳ ಗಾತ್ರ ಮತ್ತು ವೇಗ ಅಭೂತಪೂರ್ವ: ಮೋದಿ

ಔರಿಕ್: ಭಾರತದ ಮೊದಲ ಸ್ಮಾರ್ಟ್ ಕೈಗಾರಿಕಾ ನಗರ

ಭಾರತದ ಮೊದಲ ಸ್ಮಾರ್ಟ್ ಕೈಗಾರಿಕಾ ನಗರ ಔರಿಕ್ ಸಿಟಿಯನ್ನು ಪ್ರಧಾನಿ ಶನಿವಾರ ಉದ್ಘಾಟಿಸಿದರು. ಈ ನಗರಕ್ಕೆ ಸುಮಾರು ₹70 ಸಾವಿರ ಕೋಟಿ ಬಂಡವಾಳ ಹರಿದುಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿ–ಮುಂಬೈ ಕೈಗಾರಿಕ ಕಾರಿಡಾರ್‌ನಡಿ ಬರುವ ಈ ಮೆಗಾ ಯೋಜನೆಯು ಬರಪೀಡಿತ ಮರಾಠವಾಡ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ ಎನ್ನಲಾಗಿದೆ.

ವಸತಿ ಸಂಕೀರ್ಣ, ಕಚೇರಿಗಳು ಹಾಗೂ ಶಾಪಿಂಗ್ ಮಾಲ್‌ಗಳು ಒಂದರ ಪಕ್ಕ ಒಂದು ನಿರ್ಮಾಣವಾಗಲಿದ್ದು, ಎಲ್ಲ ಜಾಗಗಳನ್ನು ನಡೆದುಕೊಂಡೇ ಸಂಧಿಸುವ ಅವಕಾಶವಿರುವ ದೇಶದ ಮೊದಲ ನಗರಎನಿಸಿಕೊಳ್ಳಲಿದೆ.

₹3.5 ಲಕ್ಷ ಕೋಟಿ ವೆಚ್ಚದಲ್ಲಿ ಪ್ರತಿಮನೆಗೆ ನೀರು

(ಔರಂಗಾಬಾದ್ ವರದಿ): 2024ರ ಹೊತ್ತಿಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಪೈಪ್‌ ಮೂಲಕ ನೀರು ಒದಗಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕಾಗಿ ಜಲಜೀವನ ಮಿಷನ್ ಅಡಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ ₹3.5 ಲಕ್ಷ ಕೋಟಿ ವೆಚ್ಚ ಮಾಡಲಾಗುವುದು ಎಂದರು.

ಈ ಮೂಲಕ ಗ್ರಾಮೀಣ ಭಾಗದಲ್ಲಿ ಶೌಚಾಲಯ ಸೌಲಭ್ಯ ಹಾಗೂ ನೀರು ಪೂರೈಸುವ ರಾಮಮನೋಹರ ಲೋಹಿಯಾ ಅವರ ಕನಸನ್ನು ನನಸು ಮಾಡಲಾಗುವುದು ಎಂದರು. ಬರಪೀಡಿತ ಮರಾಠವಾಡದಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಜಲಸಂವರ್ಧನೆ ಕ್ರಮಗಳನ್ನು ಅವರು ಶ್ಲಾಘಿಸಿದರು.

ಪ್ರತಿಕ್ರಿಯಿಸಿ (+)