ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ₹1000 ಕೋಟಿ ನೆರವು

ಫೋನಿ ಚಂಡಮಾರುತ– ಪ್ರಧಾನಿಯಿಂದ ವೈಮಾನಿಕ ಸಮೀಕ್ಷೆ
Last Updated 6 ಮೇ 2019, 20:19 IST
ಅಕ್ಷರ ಗಾತ್ರ

ಭುವನೇಶ್ವರ: ಫೋನಿ ಚಂಡಮಾರುತದಿಂದ ಹಾನಿಯಾಗಿರುವ ಒಡಿಶಾದ ವಿವಿಧ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಿಹಾರ ಕಾರ್ಯಗಳಿಗೆ ಹೆಚ್ಚುವರಿಯಾಗಿ ಕೇಂದ್ರದಿಂದ ₹1000 ಕೋಟಿ ನೆರವು ಘೋಷಿಸಿದ್ದಾರೆ.

ಈ ಘೋಷಣೆ ಬಳಿಕ ಒಡಿಶಾಗೆ ಹೆಚ್ಚುವರಿಯಾಗಿ ₹ 1,000 ಕೋಟಿ ಬಿಡುಗಡೆ ಮಾಡಿರುವುದಾಗಿ ಗೃಹ ಸಚಿವಾಲಯ ಹೇಳಿದೆ.ಕೇಂದ್ರ ಸರ್ಕಾರ ಈಗಾಗಲೇ ಒಡಿಶಾಕ್ಕೆ ₹341 ಕೋಟಿ ಪರಿಹಾರಧನ ಬಿಡುಗಡೆ ಮಾಡಿದೆ.

ಚಂಡಮಾರುತ ಅಪ್ಪಳಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸರ್ಕಾರದ ಕಾರ್ಯವನ್ನು ಪ್ರಧಾನಿ ಪ್ರಶಂಸಿಸಿದ್ದಾರೆ.

ಚಂಡಮಾರುತಕ್ಕೆ ಬಲಿಯಾಗಿರುವವರ ಕುಟುಂಬಗಳಿಗೆ ತಲಾ ₹2ಲಕ್ಷ, ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ವೈಮಾನಿಕ ಸಮೀಕ್ಷೆಯ ಬಳಿಕ ಮಾತನಾಡಿದ ಮೋದಿ ಅವರು, ’ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಪರಿಣಾಮ ಹೆಚ್ಚಿನ ಜೀವ ಹಾನಿ ಸಂಭವಿಸಿಲ್ಲ’ ಎಂದಿದ್ದಾರೆ.

ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರದ ತಂಡ ಶೀಘ್ರ ಒಡಿಶಾಕ್ಕೆ ಭೇಟಿ ನೀಡಲಿದೆ. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ಎದುರಿಸಲು ದೀರ್ಘಕಾಲೀನ ಯೋಜನೆಯನ್ನು ರೂಪಿಸಲಾಗುವುದು ಎಂದಿದ್ದಾರೆ.

ಪುನರ್ವಸತಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಾಯ ಒದಗಿಸಲಾಗುವುದು. ಚಂಡಮಾರುತದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರು ಮತ್ತು ಇತರರಿಗೂ ನೆರವು ನೀಡಲಾಗುವುದು ಎಂದೂ ಹೇಳಿದ್ದಾರೆ.

ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರಿ ಹಾನಿಯುಂಟುಮಾಡಿದ್ದ ಫೋನಿ ಚಂಡಮಾರುತಕ್ಕೆ ಕನಿಷ್ಠ 34 ಮಂದಿ ಬಲಿಯಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರವು ಕರಾವಳಿ ಪ್ರದೇಶದ 12 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು.ಒಡಿಶಾ, ಪಶ್ಚಿಮಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಅವಲೋಕನ ನಡೆಸಲು ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮಿತಿ (ಎನ್‌ಸಿಎಂಸಿ) ಭಾನುವಾರ ಸಭೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT