‘ಗಾಂಧಿ–ಗೋಡ್ಸೆ ತತ್ವಗಳ ನಡುವಣ ಹೋರಾಟ’

ಮಂಗಳವಾರ, ಮಾರ್ಚ್ 19, 2019
21 °C

‘ಗಾಂಧಿ–ಗೋಡ್ಸೆ ತತ್ವಗಳ ನಡುವಣ ಹೋರಾಟ’

Published:
Updated:
Prajavani

ಅಹಮದಾಬಾದ್ : ‘ಈ ಚುನಾವಣೆ ಮಹಾತ್ಮ ಗಾಂಧಿಯ ಸಿದ್ಧಾಂತ ಮತ್ತು ನಾಥೂರಾಮ್‌ ಗೋಡ್ಸೆಯ ಸಿದ್ಧಾಂತಗಳ ನಡುವಣ ಹೋರಾಟವಾಗಲಿದೆ’ ಎಂದು ಕಾಂಗ್ರೆಸ್ ತನ್ನ ಕಾರ್ಯಕಾರಿಣಿಯಲ್ಲಿ ಘೋಷಿಸಿದೆ.

‘ದೇಶದಲ್ಲಿ ನಾಥೂರಾಮ್ ಗೋಡ್ಸೆಯ ಸಿದ್ಧಾಂತಗಳನ್ನು ಹರಡಲಾಗುತ್ತಿದೆ. ದೇಶದೆಲ್ಲೆಡೆ ಅಭದ್ರತೆ ಮತ್ತು ಭಯದ ವಾತಾವರಣ ಮನೆ ಮಾಡಿದೆ. ಮಹಿಳೆಯರು, ವಿದ್ಯಾರ್ಥಿಗಳು, ಲೇಖಕರು, ಪತ್ರಕರ್ತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾಂತರು ಮತ್ತು ಉದ್ಯಮಿಗಳು ಅಭದ್ರತೆ ಎದುರಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಕಾರ್ಯಕಾರಿಣಿಯ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ತಮ್ಮ ಸುಳ್ಳು ಭರವಸೆಗಳ ಮೂಲಕ ದೇಶದ ಜನರಿಗೆ ದ್ರೋಹ ಬಗೆದಿದ್ದಾರೆ. ಅತ್ಯಂತ ಸಿನಿಕರಾಗಿರುವ ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ಒಂದಿನಿತೂ ನಾಚಿಕೆಯಿಲ್ಲದೆ ದೇಶದ ಭದ್ರತೆಯ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಮೋದಿ ಹೀಗೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿ ಅವರ ಹುನ್ನಾರಗಳನ್ನು ಬಯಲಿಗೆ ಎಳೆಯಬೇಕಿದೆ. ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ರಾಜಕೀಯ ಪಕ್ಷಗಳೆಲ್ಲವೂ ಈ ಕಾರ್ಯದಲ್ಲಿ ಒಟ್ಟಾಗಬೇಕಿದೆ’ ಎಂದು ನಿರ್ಣಯದಲ್ಲಿ ಕರೆ ನೀಡಲಾಗಿದೆ.

‘ದೇಶವನ್ನು ಕಟ್ಟಿದ್ದರಲ್ಲಿ ಮಹಾತ್ಮ ಗಾಂಧಿ ಮತ್ತು ಗುಜರಾತ್‌ನ ಪಾತ್ರ ಬಹಳ ದೊಡ್ಡದು. ಆದರೆ ಇದೇ ಗುಜರಾತ್‌ನ ಕೆಲವು ವ್ಯಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಮಹಾತ್ಮ ಗಾಂಧಿ ಅವರು ದಂಡಿ ಸತ್ಯಾಗ್ರಹ ನಡೆಸಿದ ದಿನದಂದೇ ಮೋದಿಯ ದುರಾಡಳಿತವನ್ನು ಕೊನೆಗಾಣಿಸುವ ನಿರ್ಣಯವನ್ನು ನಾವು ಅಂಗೀಕರಿಸುತ್ತಿದ್ದೇವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದರು.

‘ಗಾಂಧಿ ಚಿಂತನೆ ಕಾಂಗ್ರೆಸ್‌ಗೆ ಅಪಥ್ಯ’

ನವದೆಹಲಿ (ಪಿಟಿಐ): ಮಹಾತ್ಮ ಗಾಂಧಿ ಅವರ ಚಿಂತನೆಗಳ ವಿರುದ್ಧವೇ ಕಾಂಗ್ರೆಸ್‌ ಸಂಸ್ಕೃತಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ದಂಡಿಯಾತ್ರೆಯ 89ನೇ ವರ್ಷಾಚರಣೆ ಸಂದರ್ಭದಲ್ಲಿ ಮೋದಿ ಅವರು ಟ್ವಿಟರ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ಕಡುಬಡವರ ದಯನೀಯ ಸ್ಥಿತಿಯನ್ನು ನೋಡಬೇಕು ಎಂಬುದನ್ನು ಮಹಾತ್ಮ ಗಾಂಧಿ  ಹೇಳಿದ್ದರು. ನಮ್ಮ ಕೆಲಸ ಬಡವರಿಗೆ ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯಬೇಕು ಎಂದಿದ್ದರು. ನಮ್ಮ ಸರ್ಕಾರದ ಎಲ್ಲಾ ಕೆಲಸಗಳು ಬಡತನ ನಿವಾರಣೆ ಮತ್ತು ಸಮೃದ್ಧಿ ತರುವುದಕ್ಕಾಗಿಯೇ ನಡೆಯುತ್ತಿವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಬೇಸರದ ಸಂಗತಿ ಎಂದರೆ ಗಾಂಧಿ ಚಿಂತನೆಗಳ ವಿರುದ್ಧವಾಗಿ ಕಾಂಗ್ರೆಸ್‌ ಸಂಸ್ಕೃತಿ ಇದೆ’ ಎಂದು ಆರೋಪಿಸಿದ್ದಾರೆ.

‘ಗಾಂಧಿ ಅವರು ಅಸಮಾನತೆ ಮತ್ತು ಜಾತಿ ವರ್ಗೀಕರಣದಲ್ಲಿ ನಂಬಿಕೆ ಹೊಂದಿರಲಿಲ್ಲ. ಆದರೆ ಸಮಾಜವನ್ನು ಒಡೆಯುವಲ್ಲಿ ಕಾಂಗ್ರೆಸ್‌  ಹಿಂದೆಮುಂದೆ ನೋಡುತ್ತಿಲ್ಲ’ ಎಂದು ಟೀಕಿಸಿದ್ದಾರೆ. ದಲಿತ ವಿರೋಧಿ ಹತ್ಯಾಕಾಂಡಗಳೆಲ್ಲ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲೇ ನಡೆದಿವೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ಎನ್ನುವಂತಾಗಿದೆ. ಭ್ರಷ್ಟರಿಗೆ ಶಿಕ್ಷೆ ಕೊಡಿಸಲು ತಮ್ಮ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

******

ತಾವು ವಿರೋಧಪಕ್ಷಗಳ ಸಂಚಿನ ಬಲಿಪಶು ಎಂದು ಪ್ರಧಾನಿ ನರೇಂದ್ರ ಮೋದಿ ಸದಾ ಅನುಕಂಪ ಗಿಟ್ಟಿಸುತ್ತಿರುತ್ತಾರೆ. ಆದರೆ ಅವರ ತಪ್ಪು ಮತ್ತು ವಿಫಲ ನೀತಿಗಳಿಗೆ ದೇಶದ ಜನರು ಬಲಿಪಶುಗಳಾಗಿದ್ದಾರೆ
-ಸೋನಿಯಾ ಗಾಂಧಿ, ಯುಪಿಎ ಮುಖ್ಯಸ್ಥೆ

ಬಿಜೆಪಿ ಸರ್ಕಾರದ ಆಡಳಿತದ ಅಡಿಯಲ್ಲಿ ದೇಶದಲ್ಲಿ ದ್ವೇಷದ ವಾತಾವರಣ ಹೆಚ್ಚಾಗಿದೆ. ಕೈಗಾರಿಕೆ ಮತ್ತು ಔದ್ಯೋಗಿಕ ಬೆಳವಣಿಗೆ ಕುಂಠಿತವಾಗಿದೆ. ನಿರುದ್ಯೋಗ ಸಮಸ್ಯೆ ತೀರಾ ಬಿಗಡಾಯಿಸಿದೆ

-ಡಾ. ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !