ಗುರುವಾರ , ಜೂನ್ 24, 2021
23 °C
ಪ್ರಧಾನಿಯಿಂದ ‘ಗರೀಬ್‌ ಕಲ್ಯಾಣ್‌ ರೋಜ್‌ಗಾರ್‌ ಅಭಿಯಾನ’ಕ್ಕೆ ಚಾಲನೆ

ವಲಸೆ ಕಾರ್ಮಿಕರಿಗಾಗಿ ಉದ್ಯೋಗ ಯೋಜನೆ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಗರೀಬ್‌ ಕಲ್ಯಾಣ್‌ ರೋಜ್‌ಗಾರ್‌ ಅಭಿಯಾನ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.

ಬಿಹಾರದ ಕಟಿಹಾರ್‌ ಜಿಲ್ಲೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಯೋಜನೆಯನ್ನು ಉದ್ಘಾಟಿಸಿ, ‘ಯೋಜನೆಯು ಗ್ರಾಮೀಣ ಭಾರತದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ವಲಸೆ ಕಾರ್ಮಿಕರನ್ನು ‘ಪ್ರತಿಭೆ’ಗಳು ಎಂದು ಕರೆದ ಅವರು, ‘ನಗರಗಳ ಅಭಿವೃದ್ಧಿಯಲ್ಲಿ ವಲಸೆ ಕಾರ್ಮಿಕರ ಶ್ರಮ ಮಹತ್ವದ್ದು. ಈಗ ಇವರ ಕೌಶಲ ಮತ್ತು ಶ್ರಮವು ಗ್ರಾಮಗಳ ಅಭಿವೃದ್ಧಿಗೆ ವ್ಯಯವಾಗಲಿದೆ’ ಎಂದು ಹೇಳಿದರು.

‘ವಲಸೆ ಕಾರ್ಮಿಕರು, ಲಾಕ್‌ಡೌನ್‌ ಅವಧಿಯಲ್ಲಿ ಕೇಂದ್ರ ಕೈಗೊಂಡ ಎಲ್ಲ ಯೋಚನೆ, ಯೋಜನೆಗಳ ಕೇಂದ್ರ ಸ್ಥಾನದಲ್ಲಿದ್ದರು. ವಲಸೆ ಕಾರ್ಮಿಕರು ತಮ್ಮ ಮನೆಗಳ ಬಳಿಯಲ್ಲಿಯೇ ಕೆಲಸ ಮಾಡುವಂತೆ ಮಾಡುವ ಪ್ರಯತ್ನ ಸರ್ಕಾರದ್ದಾಗಿದೆ’ ಎಂದರು.

ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್‌ನ ಮುಖ್ಯಮಂತ್ರಿಗಳು ಹಾಗೂ ಒಡಿಸಾದ ಮಂತ್ರಿಯೊಬ್ಬರು ಈ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. 

ಯೋಜನೆಯನ್ನು ಉದ್ಘಾಟಿಸುವುದಕ್ಕೂ ಮೊದಲು, ಹಲವು ವಲಸೆ ಕಾರ್ಮಿಕರ ಜತೆ ಮಾತನಾಡಿದ ಪ್ರಧಾನಿ, ಸದ್ಯದ ಅವರ ಸ್ಥಿತಿಗತಿಗಳ ಕುರಿತು ವಿಚಾರಿಸಿದರು. ಜತೆಗೆ, ಲಾಕ್‌ಡೌನ್‌ ಅವಧಿಯಲ್ಲಿ ಅವರಿಗಾಗಿಯೇ ಘೋಷಿಸಿದ ವಿವಿಧ ಯೋಜನೆಗಳು ಅವರನ್ನು ತಲುಪಿದೆಯೇ ಎನ್ನುವುದರ ಕುರಿತೂ  ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಚೀನಾ ಜತೆಗಿನ ಸಂಘರ್ಷದಲ್ಲಿ ಲಡಾಖ್‌ನಲ್ಲಿ ಹುತಾತ್ಮರಾದ  ಬಿಹಾರ ರೆಜಿಮೆಂಟ್‌ನ ಯೋಧರಿಗೆ ಸಂತಾಪ ಸೂಚಿಸಿದರು.

ಏನಿದು ಯೋಜನೆ?

ಈ ಯೋಜನೆಯು ಗ್ರಾಮೀಣ ಭಾಗದ 25 ಮೂಲಸೌಕರ್ಯ ಕಾರ್ಯಗಳ ತ್ವರಿತ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹೇಳಿದೆ.

* ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್‌ನ ಮತ್ತು ಒಡಿಸಾ ರಾಜ್ಯಗಳಿಗೆ ಗರಿಷ್ಠ ಮಂದಿ ವಲಸೆ ಕಾರ್ಮಿಕರು ವಾ‍ಪಾಸಾಗಿದ್ದಾರೆ. ಈ ಆರು ರಾಜ್ಯಗಳ 116 ಜಿಲ್ಲೆಗಳ ವ್ಯಾಪ್ತಿಗೆ ಈ ಯೋಜನೆಯ ಅನುಷ್ಠಾನ

* ಯೋಜನೆಯನ್ನು 125ದಿನಗಳಲ್ಲಿ ಪೂರ್ಣಗೊಳಿಸುವ ಮಿತಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 50 ಸಾವಿರ ಕೋಟಿ ವಿನಿಯೋಗ

* ಬಡವರಿಗೆ ಮನೆ ನಿರ್ಮಾಣ, ಜಲ್‌ ಜೀವನ್‌ ಮಿಷನ್‌ ಮೂಲಕ ಕುಡಿಯುವ ನೀರಿನ ಸೌಲಭ್ಯ, ಪಂಚಾಯಿತಿ ಕಟ್ಟಡ ನಿರ್ಮಾಣ, ಸಾರ್ವಜನಿಕ ಶೌಚಾಲಯ, ರಸ್ತೆ, ಅಂಗಡನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ 25 ಮೂಲಸೌಕರ್ಯ ಕಾರ್ಯಗಳ ಪಟ್ಟಿ ಸಿದ್ಧ

* ಯೋಜನೆಯಿಂದ ದೀರ್ಘಾವಧಿಯಲ್ಲಿ ವಲಸೆ ಕಾರ್ಮಿಕರ ಜೀವನಮಟ್ಟ ಸುಧಾರಣೆ

ನರೇಗಾಗಿಂತ ಭಿನ್ನ

‘ಗರೀಬ್‌ ಕಲ್ಯಾಣ್‌ ರೋಜ್‌ಗಾರ್‌ ಅಭಿಯಾನವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಿಂತ ಭಿನ್ನವಾದುದು’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಇದು ಒಂದು ಬಾರಿಗೆ ಕೊನೆಗೊಳ್ಳುವ ಯೋಜನೆ. ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಊರುಗಳಿಗೆ ವಾಪಾಸಾದ ವಲಸೆ ಕಾರ್ಮಿಕರಾಗಿಯೇ ಇರುವ ಯೋಜನೆ ಇದಾಗಿದೆ. ಇದು ಆರು ರಾಜ್ಯಗಳ 116 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ಅನುಷ್ಠಾನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಯೋಜನೆ ವಿಸ್ತರಣೆಗೊಳ್ಳಬಹುದು’ ಎಂದು ಅಧಿಕಾರಿಗಳು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು